ಪಾವಗಡ : ನಿಡಗಲ್ ಹೋಬಳಿಯ ಕರೇಕ್ಯಾತನಹಳ್ಳಿ ಗ್ರಾಮದ ಜಗನ್ಮಾತೆ ಶ್ರೀ ಸ್ವಾರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಬಾಯಿ ಬೀಗ ಮತ್ತು ಸಿಡಿ ಕಾರ್ಯಕ್ರಮಗಳು ನಡೆದವು.
ಕರೇಕ್ಯಾತನಹಳ್ಳಿಯ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಶ್ರೀ ಸ್ವಾರಮ್ಮನ ಜಾತ್ರಾ ಮಹೋತ್ಸವ ಪ್ರತಿವರ್ಷದಂತೆ ಈ ಬಾರಿಯೂ ಸಹ ಧಾರ್ಮಿಕ ವಿಧಿ ವಿಧಾನಗಳಂತೆ ಬೆಳಿಗ್ಗೆ ಅಭಿಷೇಕ ಹೂವಿನ ಅಲಂಕಾರ ಹಾಗೂ ಪೂಜಾಕೈಂಕರ್ಯಗಳ ನಂತರ ಬಾಯಿ ಬೀಗ ಹಾಗೂ ಸಿಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಸುತ್ತಮುತ್ತಲ ಗ್ರಾಮದ ನೂರಾರು ಭಕ್ತಾದಿಗಳು ನಾನಾ ರೀತಿಯ ಹರಕೆಗಳನ್ನು ಹೊತ್ತು ಈ ಜಾತ್ರೆಗೆ ಬರುವ ವಾಡಿಕೆಯಿದೆ. ಅಗ್ನಿಕುಂಡಕ್ಕೆ ಧೂಪ ಹಾಕುವುದು, ಅಗ್ನಿಕುಂಡದಲ್ಲಿ ಇಳಿದು ಕೆಂಡ ತುಳಿಯುವುದು, ಹತ್ತು ಬೆರಳಿನ ಆರತಿ, ಕಬ್ಬಿಣದ ಚೂಪಾದ ಕೊಂಡಿಯನ್ನು ಬೆನ್ನಿನ ಚರ್ಮಕ್ಕೆ ಚುಚ್ಚಿಕೊಂಡು ಸಿಡಿ ಮರವೇರಿ ಸಿಡಿ ಆಡುವುದು ಹಾಗೂ ಬಾಯಿಗೆ ಬೀಗ ಹಾಕಿಸಿ ಕೊಳ್ಳುವುದು ಹೇಗೆ ನಾನಾರೀತಿ ಹರಕೆಗಳನ್ನು ಹೊತ್ತು ಬಂದಾ ಭಕ್ತಾದಿಗಳು ತಮ್ಮ ಹರಿಕೆಗಳನ್ನು ತೀರಿಸುತ್ತಾರೆ.ಈ ರೀತಿ ಮಾಡುವುದರಿಂದ ಸ್ವಾರಮ್ಮನ ಕೃಪೆಗೆ ಪಾತ್ರರಾಗುತ್ತಾವೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಬಂದಿದೆ.
ಇದನ್ನೂ ಓದಿ : ಖಾತೆಯಲ್ಲಿ ಹೆಸರು ಸೇರ್ಪಡೆಗೆ ಲಂಚ : ಎಸಿಬಿ ಬಲೆಗೆ ಬಿದ್ದ ಸಿಟಿ ಸರ್ವೇಯರ್
ಬಾಯಿ ಬೀಗ : ಸೋಮವಾರ ಮಧ್ಯಾಹ್ನ 4:00 ಗಂಟೆಗೆ ಬಾಯಿಬೀಗ ಕಾರ್ಯಕ್ರಮ ನಡೆಯಿತು. ದೇವಾಲಯದ ಆವರಣದ ಆರತಿ ಬಂಡೆಯ ಮೇಲೆ ನೆರೆದಿದ್ದ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಹರಕೆ ಹೊತ್ತು ಬಂದಿದ್ದ 1 ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಬಾಯಿ ಬೀಗ ಹಾಕುವ ಕಾರ್ಯ ನೆರವೇರಿಸಲಾಯಿತು. ಭಕ್ತಾದಿಗಳ ಕೆನ್ನೆಗೆ ಲೋಹದಿಂದ ತಯಾರಿಸಲ್ಪಟ್ಟ ಚೂಪಾದ ತಂತಿಯನ್ನು ಒಂದು ಕಡೆಯಿಂದ ಚುಚ್ಚಿ ಮತ್ತೊಂದು ಕಡೆಯಿಂದ ತೆಗೆಯುತ್ತಿದ್ದ ದೃಶ್ಯ ನೆರೆದಿದ್ದ ಸಾರ್ವಜನಿಕರನ್ನು ಮಂತ್ರಮುಗ್ಧರನ್ನಾಗುವಂತೆ ಮಾಡಿತು. ನಂತರ
ಬಾಯಿ ಬೀಗ ಹಾಕಿಸಿಕೊಂಡ ಭಕ್ತಾದಿಗಳು ರಥ ಬೀದಿಯ ಮೂಲಕ ದೇವಸ್ಥಾನಕ್ಕೆ ತೆರಳಿ ಶ್ರೀ ಸ್ವಾರಮ್ಮ ದೇವಿಯ ದರ್ಶನ ಪಡೆದು, ಬಾಯಿ ಬೀಗ ತೆಗೆಯಲಾಯಿತು. ಈ ಕಾರ್ಯಕ್ರಮ ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ಭಕ್ತ ಜನಸಾಗರವೇ ನೆರೆದಿತ್ತು.
ಸಿಡಿ ಮಹೋತ್ಸವ : ಮಧ್ಯಾಹ್ನ 5:30 ಗಂಟೆಗೆ ಆರಂಭವಾಯಿತು. ಹರಕೆ ಹೊತ್ತ ಬಕ್ತಾದಿಯ ಸೊಂಟಕ್ಕೆ ಬಿಗಿಯಾಗಿ ಹಗ್ಗಕಟ್ಟಿ ಸಿಡಿಕಂಬದ ಅಡ್ಡ ಸ್ಥಂಬದ ಒಂದು ತುದಿಗೆ ಅವರನ್ನು ಬಿಗಿಯಾಗಿ ಕಟ್ಟಿ ಮೇಲಕ್ಕೇರಿಸಿ ಸಿಡಿಕಂಬದ ಸುತ್ತ 3 ಸುತ್ತು ತಿರುಗಿಸಿದರು.
ಆಕಾಶದಲ್ಲಿ ಹಕ್ಕಿಯಂತೆ ಕೈಕಾಲುಗಳನ್ನು ಬೀಸುತ್ತಾ ಸಿಡಿ ಆಡಿದ್ದು ರೋಚಕವಾಗಿತ್ತು. ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸಿದ್ದರು. ನಂತರ ಹರಕೆ ಹೊತ್ತ ತಮ್ಮ ಮಕ್ಕಳನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿ ಮಕ್ಕಳ ಕೊರಳಿಗೆ ಹೂವಿನ ಹಾರ ಹಾಕಿ ಸಿಡಿಕಂಬದ ಮಧ್ಯದ ಅಡ್ಡವಾದ ಉದ್ದನೆಯ ಕಂಬದ ತುದಿಯಲ್ಲಿ ಮಕ್ಕಳನ್ನು ಕೂರಿಸುವ ಮೂಲಕ ಸಿಡಿ ಹರಕೆ ತೀರಿಸಿದರು