Advertisement

ಕುಟುಂಬದ 8 ಮಂದಿಗೆ ಕಳ್ಳ ಸ್ವಾಮಿ ಟೋಪಿ

06:00 AM Feb 27, 2019 | |

ಬೆಂಗಳೂರು: ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರ ಮನೆಗೆ ಬಂದ ನಕಲಿ ಸ್ವಾಮಿ ಹಾಗೂ ತಂಡ, “ನಿಮಗೆ ಗಂಡಾಂತರ ಕಾದಿದೆ’ ಎಂದು ಹೆದರಿಸಿ, ವಿಶೇಷ ಪೂಜೆ ನೆಪದಲ್ಲಿ ಕುಟುಂಬ ಸದಸ್ಯರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣ ಪಡೆದು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

Advertisement

ಮಹಾರಾಷ್ಟ್ರ ಮೂಲದವರು ಎಂದು ಹೇಳಿಕೊಂಡ ಸ್ವಾಮಿ ಮತ್ತು ಆತನ ಇಬ್ಬರು ಸಹಚರರು, ಎರಡು ತಿಂಗಳ ಅವಧಿಯಲ್ಲಿ ಒಂದೇ ಕುಟುಂಬದ ಎಂಟು ಮಂದಿಯಿಂದ ಹಂತ ಹಂತವಾಗಿ ಒಟ್ಟು 290 ಗ್ರಾಂ. ಚಿನ್ನಾಭರಣ ಹಾಗೂ 50 ಸಾವಿರ ರೂ. ಪಡೆದು ಪರಾರಿಯಾಗಿದ್ದಾರೆ.

ಈ ಕುರಿತು ನಿವೃತ್ತ ಎಎಸ್‌ಐ ಪುತ್ರ ರಿತೇಶ್‌ (ಹೆಸರು ಬದಲಾಯಿಸಲಾಗಿದೆ) ನೀಡಿದ ದೂರಿನಂತೆ ನಕಲಿ ಸ್ವಾಮಿ ಅವಿನಾಶ್‌ ಸುರೇಶ್‌ ಕಾನ್ವಿಲ್ಕರ್‌, ಸಹಚರರಾದ ಚೇತನ್‌ ಢಾಂಗೆ, ರಾಜೇಶ್‌ ತಾಂಬೆ ವಿರುದ್ಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

“ಯಶವಂತಪುರದ ಮಠದಲ್ಲಿ ನಾವು ವೃತಾಚರಿಸುತ್ತೇವೆ. ಧ್ಯಾನಸ್ಥ ಸ್ಥಿತಿಯಲ್ಲಿ ಸಾವಿರದ ಒಂದು ಜಪ ಮಾಡುತ್ತಾ ಚಿನ್ನಾಭರಣ ಪೂಜಿಸುತ್ತೇವೆ. ಪೂಜೆ ಬಳಿಕ ಮಣಿ ಪೋಣಿಸಿದ ಆಭರಣ ಧರಿಸಿದಾಗ ದೈವಬಲ ಒಲಿಯುತ್ತದೆ. ಯಾವುದೇ ಗಂಡಾಂತರ ಇರುವುದಿಲ್ಲ’ ಎಂದು ಹೇಳಿ ದೂರುದಾರ ಕುಟುಂಬವನ್ನು ಆರೋಪಿಗಳು ವಂಚಿಸಿದ್ದಾರೆ.

ದೌರ್ಬಲ್ಯ, ಒಳ್ಳೆತನ ದುರುಪಯೋಗ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಿ ರಿತೇಶ್‌ಗೆ ಸಂಬಂಧಿಯೊಬ್ಬರು 2018ರ ಡಿಸೆಂಬರ್‌ನಲ್ಲಿ ಅವಿನಾಶ್‌ ಸುರೇಶ್‌ ಕಾನಿಲ್ಕರ್‌ನನ್ನು ಪರಿಚಯಿಸಿದ್ದು, ಆತ ತಾನೊಬ್ಬ ಸ್ವಾಮೀಜಿ ಎಂದು ಹೇಳಿದ್ದ. ಒಂದೆರಡು ಭೇಟಿ ಬಳಿಕ ತನ್ನ ಸಹಚರ ರಾಜೇಶ್‌ ತಾಂಬೆಯನ್ನು ಕರೆದುಕೊಂಡು ರಿತೇಶ್‌  ಮನೆಗೆ ಹೋಗಿದ್ದಾನೆ.

Advertisement

ಈ ವೇಳೆ ಆರೋಪಿ ಸುರೇಶ್‌, “ಮುಂದಿನ ವರ್ಷ ನಿಮಗೆ ಗಂಡಾಂತರವಿದೆ. ನೀವು ಧರಿಸಿರುವ ಆಭರಣಗಳಿಗೆ ವಿಶೇಷ ಪೂಜೆ ಮಾಡಿ ಆ ಆಭರಣಕ್ಕೆ ಮಂತ್ರಶಕ್ತಿ ತುಂಬಿದ ಹರಳು ಹಾಕಿಕೊಡುತ್ತೇವೆ. ಆಗ ಗಂಡಾಂತರ ದೂರಾಗುತ್ತದೆ’ ಎಂದು ಹೇಳಿದ್ದಾನೆ. ಇದನ್ನು ನಂಬಿದ ರಿತೇಶ್‌, 20 ಗ್ರಾಂ. ಚಿನ್ನದ ಸರ, ಗೂಗಲ್‌ ಪೇ ಮೂಲಕ 20 ಸಾವಿರ ರೂ. ಕೊಟ್ಟಿದ್ದಾನೆ.

ಇದಾದ ಕೆಲವೇ ದಿನಗಳಲ್ಲಿ ರಿತೇಶ್‌ ಕೆಲಸಕ್ಕೆ ಹೋದ ಸಮಯದಲ್ಲಿ ಅವರ ಮನೆಗೆ ಚೇತನ್‌ ಢಾಂಗೆಯನ್ನು ಕರೆದೊಯ್ದ ಸುರೇಶ್‌, “ಇವರು ನಮ್ಮ  ಮಹಾರಾಜ್‌. ಭಾರೀ ದೈವಶಕ್ತಿ ಹೊಂದಿದ್ದಾರೆ’ ಎಂದು ರಿತೇಶ್‌ ಅವರ ತಾಯಿ, ಪತ್ನಿ, ಸಹೋದರರು ಹಾಗೂ ಅವರ ಪತ್ನಿಯರಿಗೆ ಪರಿಚಯಿಸಿದ್ದಾನೆ. ನಿಮ್ಮ ಮನೆಯಲ್ಲಿ ಹೋಮ ಮಾಡುತ್ತೇವೆ ಎಂದು ಹೇಳಿ ಹೋಮ ಮುಗಿಸಿ, ಮತ್ತೆ ಚಿನ್ನಾಭರಣೆ ಪಡೆದಿದ್ದಾರೆ.

ಬಳಿಕ ಮತ್ತೂಮ್ಮೆ ಮನೆಗೆ ಬಂದು ಮನೆಯಲ್ಲಿರುವ ಎಲ್ಲರಿಗೂ ಗಂಡಾಂತರವಿದೆ ಎಂದು ನಂಬಿಸಿ, ಒಟ್ಟು 250 ಗ್ರಾಂ. ಚಿನ್ನ ಹಾಗೂ ಹಣ ಪಡೆದಿದ್ದಾರೆ. ಬ್ಬೊಬ್ಬರಿಂದಲೂ ಆಭರಣ ಪಡೆಯುವಾಗ ಈ ವಿಚಾರ ಯಾರಿಗೂ ತಿಳಿಸಬಾರದು ಎಂದು ಪ್ರಮಾಣ ಮಾಡಿಸಿಕೊಂಡಿದ್ದಾರೆ.

ಕೆಲ ದಿನಗಳ ಬಳಿಕ ರಿತೇಶ್‌ ಕರೆ ಮಾಡಿದಾಗ, ಎಲ್ಲ ಆಭರಣಗಳಿಗೂ ಪೂಜೆ ಮುಗಿದಿದೆ. ಫೆ.18ರಂದು ಮನೆಗೆ ತಂದು ಕೊಡುತ್ತೇವೆ ಎಂದು ಆರೋಪಿಗಳು ತಿಳಿಸಿದ್ದಾರೆ. ಫೆ.18ರಂದು ಕರೆ ಮಾಡಿದಾಗ ಮೂವರು ಆರೋಪಿಗಳ ಮೊಬೈಲ್‌ ನಂಬರ್‌ ಸ್ವಿಚ್‌ ಆಫ್ ಆಗಿದ್ದು, ಮೋಸಹೋಗಿರುವುದು ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಇಡೀ ಕುಟುಂಬ ನಕಲಿ ಸ್ವಾಮಿಯ ವಂಚನೆಗೊಳಗಾದ ವಿಷಯ ನಿವೃತ್ತ ಎಎಸ್‌ಐಗೆ ತಡವಾಗಿ ಗೊತ್ತಾಗಿದೆ. ಕೂಡಲೇ ಅವರ ಸೂಚನೆ ಮೇರೆಗೆ ಪುತ್ರ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

* ಮಂಜುನಾಥ ಲಘುಮೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next