ಬೆಳಗಾವಿ: ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ಆಸ್ತಿಗಳ ಗಣಕೀಕೃತ ಆಸ್ತಿ ಪತ್ರ ನೀಡುವುದು ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ. ಹೀಗಾಗಿ ಈ ಸ್ವಾಮಿತ್ವ ಯೋಜನೆಯನ್ನು ಸವದತ್ತಿ ತಾಲೂಕಿನ ಎಲ್ಲ ಹಳ್ಳಿಗಳಿಗೂ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಸವದತ್ತಿ ತಾಲೂಕಿನ ಆಲದಕಟ್ಟಿ .ಕೆ.ಎಂ ಗ್ರಾಮದಲ್ಲಿ ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ಆಸ್ತಿಗಳ ಗಣಕೀಕೃತ ಆಸ್ತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಆಸ್ತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬರ ಆಸ್ತಿ ಪತ್ರವನ್ನು ಗಣಕೀಕೃತಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿತ್ವ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಈ ಯೋಜನೆ ಮೂಲಕ ಗ್ರಾಮಗಳಲ್ಲಿರುವ ಪ್ರತಿಯೊಬ್ಬರ ಆಸ್ತಿ ಕುರಿತು ಮಾಹಿತಿ ನಮೂದಿಸಿ ಗಣಕೀಕೃತ ಆಸ್ತಿ ಪತ್ರವನ್ನು ಸಿದ್ದಪಡಿಸಿ ವಾರಸುದಾರರಿಗೆ ನೀಡಲಾಗುತ್ತದೆ. ಇದು ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತದೆ. ಆದ್ದರಿಂದ ಬರುವ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಮಗಳಿಗೂ ಈ ಸ್ವಾಮಿತ್ವ ಯೋಜನೆಯನ್ನು ವಿತ್ತರಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸವದತ್ತಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕ ರಾಜಶೇಖರ ಹಳ್ಳೂರ ಮಾತನಾಡಿ, ಸ್ವಾಮಿತ್ವ ಯೋಜನೆಯು ಭೂ ಮಾಪನ ಇಲಾಖೆ, ಸರ್ವೇ ಆಫ್ ಇಂಡಿಯಾ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಯೋಜನೆಯಾಗಿದೆ.
ಈ ಯೋಜನೆಯಡಿ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಬರುವಂತಹ ಕೃಷಿ ಭೂಮಿ ಹೊರತುಪಡಿಸಿ ವಸತಿ ನಿವೇಶನಗಳು, ಮನೆಗಳ ಕರಾರುವಕ್ಕಾದ ಅಳತೆಯನ್ನು ಡ್ರೋನ್ ಸಹಾಯದಿಂದ ನಿರ್ವಹಿಸಿ ಗ್ರಾಮಸ್ಥರಿಗೆ ಸ್ವತ್ತು ನೋಂದಣಿ ಕಾರ್ಡ ಉಚಿತವಾಗಿ ನೀಡಲಾಗುತ್ತದೆ.
ಈ ಹಿಂದೆ ಇದ್ದಂತಹ ತೊಂದರೆಗಳು ದೂರಾಗಿವೆ. ಬ್ಯಾಂಕುಗಳಲ್ಲಿ ಆಸ್ತಿ ಪತ್ರ ನೀಡುವ ಮೂಲಕ ಸಾಲವನ್ನು ಪಡೆಯುವುದು ಸರಳವಾಗಲಿದೆ ಎಂದು ತಿಳಿಸಿದರು. ಪಿಡಿಒ ಹೇಮಾ, ಪರ್ಯವೇಕ್ಷಕ ಐ.ಬಿ. ಪತ್ತಾರ, ಯರಗಟ್ಟಿ ತಹಶೀಲ್ದಾರ ಎಂ.ಎನ್. ಮಠದ ಇತರರು ಇದ್ದರು.