ಸ್ವಾಮಿ ದಾರಿಯಲ್ಲಿ ನಡೆದು ಹೋಗುತ್ತಿದ್ದ. ದಾರಿಯಲ್ಲಿ ವರ್ತಕನೊಬ್ಬ ಸಿಕ್ಕಿದ. ಅವನಿಗೆ ದಾರಿ ತಿಳಿದಿರಲಿಲ್ಲ. ಅದಕ್ಕೆ ಸ್ವಾಮಿ ಬಳಿ “ಸ್ವಾಮಿ ನಾನು ದಾರಿ ತಪ್ಪಿದ್ದೇನೆ. ಚಿಕ್ಕೂರಿಗೆ ಹೋಗುವ ದಾರಿ ತಿಳಿಸಿಕೊಡಿ’ ಎಂದು ಕೇಳಿದ. ಸ್ವಾಮಿಗೆ ಆ ವರ್ತಕ ತನ್ನ ಹೆಸರನ್ನು ಕರೆದಿದ್ದಕ್ಕೆ ತುಂಬಾ ಆಶ್ಚರ್ಯವಾಯಿತು. ನನ್ನ ಹೆಸರು ನಿಮಗೆ ಹೇಗೆ ತಿಳಿಯಿತೆಂದು ಕೇಳಿದ. ಆ ವರ್ತಕನಿಗೆ ಸ್ವಾಮಿಯ ಹೆಸರು ನಿಜಕ್ಕೂ ತಿಳಿದರಿಲಿಲ್ಲ. ನೋಡಲು ವಿದ್ಯಾವಂತರಂತೆ ಕಾಣುತ್ತಿದ್ದ ಎಲ್ಲರನ್ನೂ ಆ ವರ್ತಕ “ಸ್ವಾಮಿ’ ಎಂದೇ ಸಂಬೋಧಿಸುತ್ತಿದ್ದ. ಆದರೆ ಅದನ್ನು ವರ್ತಕ ಹೇಳಲು ತಯಾರಿರಲಿಲ್ಲ. ಸುಮ್ಮನೆ ತನ್ನನ್ನು ತಾನು ಹೊಗಳಿಕೊಳ್ಳುವ ನಿಟ್ಟಿನಲ್ಲಿ ‘ನನಗೆ ಇನ್ನೊಬ್ಬರ ಮನಸ್ಸನ್ನು ಓದುವ ಶಕ್ತಿಯಿದೆ. ಹಾಗಾಗಿ ನಿನ್ನ ಹೆಸರು ನನಗೆ ಗೊತ್ತಾಯಿತು’ ಎಂದು ಹೇಳಿದ ಆ ವರ್ತಕ. ಬೆರಗಾದ ಸ್ವಾಮಿ ವರ್ತಕನ ಕಾಲಿಗೆ ಬಿದ್ದು ನಮಸ್ಕರಿಸಿದ. ವರ್ತಕ ಮುಸಿ ಮುಸಿ ನಗುತ್ತಾ ಮತ್ತೆ ಕೇಳಿದ “ಚಿಕ್ಕೂರಿಗೆ ಹೋಗುವ ದಾರಿ ಯಾವುದು?’. ಸ್ವಾಮಿ ‘ನಾನು ಮನಸ್ಸಿನಲ್ಲೇ ಹೇಳುತ್ತೇನೆ. ನೀವು ನನ್ನ ಮನಸ್ಸನ್ನು ಓದಿ ತಿಳಿದುಕೊಳ್ಳಿ.’ ಎಂದು ತನ್ನ ಪಾಡಿಗೆ ನಡೆದುಹೋದ. ವರ್ತಕ ಪೆಚ್ಚಾದ.