ಕಾಸರಗೋಡು: ಸಮಾಜ ಸುಧಾರಣೆ ಮತ್ತು ದೀನದಲಿತರ ಸಮಗ್ರ ಅಭಿವೃದ್ಧಿಗೆ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಯವರು ನೀಡಿದ ಕೊಡುಗೆ ಅಪಾರವಾದುದು. ಹೆಣ್ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ ಅವರು ಶಾಲೆಯನ್ನು ತೆರೆದು ಶಿಕ್ಷಣ ನೀಡಲು ಮುಂದಾಗಿರುವುದು ಅಂದಿನ ಕಾಲದಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಿತ್ತು. ಸಮಾಜದ ಸುಧಾರಣೆಗಾಗಿ ಸಂಘಟನೆ ಅಗತ್ಯವೆಂದು ಮನಗಂಡು ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು ಎಂದು ಧಾರ್ಮಿಕ ಚಿಂತಕ, ಮುಂದಾಳು ಗಣಪತಿ ಕೋಟೆಕಣಿ ಅವರು ಹೇಳಿದರು.
ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಆಶ್ರಯದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಭವನದಲ್ಲಿ ಆಯೋಜಿಸಿದ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಅವರ 68ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ ಸ್ಥಾಪಕ ವಾಮನ ರಾವ್ ಬೇಕಲ್, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಮಾರ್ ಅಣಂಗೂರು, ಸಂಘಟಕ ಜಗದೀಶ್ ಕೂಡು ಸತೀಶ್ ಕೂಡ್ಲು, ಮಾತನಾಡಿದರು. ದಿನೇಶ ಚಂದ್ರಗಿರಿ ಅಭ್ಯಾಗತರಾಗಿ ಭಾಗವಹಿಸಿ ದರು. ಕಾರ್ಯಕ್ರಮದಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯ ಮಟ್ಟದಲ್ಲಿ ಬಾಕ್ಸಿಂಗ್, ಕಬಡ್ಡಿ ಸಹಿತ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಅಕ್ಷಯ ಕುಮಾರ್ ಎಚ್. ಮತ್ತು ಅವರ ಸಹೋದರಿ ರಾಜೇಶ್ವರಿ ಎಚ್. ಅವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಹರಿ ಮಹಿಳಾ ಭಜನ ಸಂಘ ಕೂಡ್ಲು ಮತ್ತು ಸಪ್ತಗಿರಿ ಮಹಿಳಾ ಭಜನ ಸಂಘ ಪಾರೆಕಟ್ಟೆ ಅವರಿಂದ ದಾಸಸಂಕೀರ್ತನೆ ನಡೆಯಿತು.
ಹರಿಶ್ಚಂದ್ರ ಸೂರ್ಲು ಸ್ವಾಗತಿಸಿದರು. ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಕಾವ್ಯ ಕುಶಲ ವಂದಿಸಿದರು.