ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಎಂಎಲ್‌ಎ ಸೀಟು ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಹಾಲಶ್ರೀಗಳನ್ನು ಸಿಸಿಬಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಒಡಿಶಾದ ಭುವನೇಶ್ವರದಿಂದ ಬೋಧ್‌ಗಯಾಗೆ ರೈಲಿನಲ್ಲಿ ತೆರಳುತ್ತಿದ್ದಾಗ ಕಟಕ್ ಬಳಿ ಹೆಡೆಮುರಿ ಕಟ್ಟಿ ಬೆಂಗಳೂರಿಗೆ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪತ್ತೆ ಹಚ್ಚಿದ್ದು ಹೇಗೆ ?
ಗೋವಿಂದ ಬಾಬು ಪೂಜಾರಿ ಠಾಣೆ ಮೆಟ್ಟಿಲೇರಿದ ಬಳಿಕ ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ವಿಜಯನಗರ ಜಿಲ್ಲೆಯ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಯು ಆಪ್ತ ಪ್ರಣವ್ ಎಂಬಾತನಿಗೆ ಕೊಟ್ಟಿದ್ದ 50 ಲಕ್ಷ ರೂ.ಗಳನ್ನು ಕಾರು ಚಾಲಕ ನಿಂಗರಾಜು ಮೂಲಕ ತರಿಸಿಕೊಂಡಿದ್ದರು. ಅದೇ ದಿನ ನಿಂಗರಾಜು ಜತೆಗೆ ರಾತ್ರಿ 11 ಗಂಟೆಗೆ ಮೈಸೂರಿಗೆ ತೆರಳಿದ್ದರು. ಸೆ. 12ರಂದು ಮೈಸೂರಿನ ವೀರಸ್ವಾಮಿ ಮಠದಲ್ಲೇ ಕಳೆದಿದ್ದರು.
ಸೆ. 13ರಂದು ಬೆಳಗ್ಗೆ ಮೈಸೂರಿನ ಬಸ್ ನಿಲ್ದಾಣದ ಬಳಿಯಿರುವ ಮೊಬೈಲ್ ಅಂಗಡಿಗೆ ತೆರಳಿ 4 ಮೊಬೈಲ್ ಹಾಗೂ 4 ಸಿಮ್ ಖರೀದಿಸಿದ್ದರು. ಈ ಪೈಕಿ 2 ಹೊಸ ಮೊಬೈಲ್‌ಗೆ ಆಗತಾನೇ ಖರೀದಿಸಿದ್ದ 2 ಹೊಸ ಸಿಮ್ ಕಾರ್ಡ್ ಹಾಕಿ ಬಳಸುತ್ತಿದ್ದರು. ತಮ್ಮ ಕಾರಿನ ನಂಬರ್ ಪ್ಲೇಟ್ ಕಳಚಿ ಪ್ರಣವ್ ಮನೆಯಲ್ಲೇ ನಿಲ್ಲಿಸಿದ್ದರು. ಅನಂತರ ಬಸ್‌ನಲ್ಲಿ ಮೈಸೂರಿನಿಂದ ಹೈದರಾಬಾದ್‌ನ ಸಿಖಂದರಾಬಾದ್‌ಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸಿಸಿಬಿ ಕಾರ್ಯಾಚರಣೆ ನಡೆಸಿದೆ. ಟಿ-ಶರ್ಟ್, ಬರ್ಮುಡಾದಲ್ಲಿದ್ದ ಸ್ವಾಮೀಜಿಯನ್ನು ಬಂಧಿಸಿದ್ದರು.