Advertisement

ದಿಲ್ಲಿ ಮೇಲೆ ಎಲ್ಲರ ಭಾರ! ಬಿಎಸ್‌ವೈ ಮನೆಗೆ ಮುಂದುವರಿದ ಶ್ರೀಗಳ ಭೇಟಿ

07:19 AM Jul 22, 2021 | Team Udayavani |

ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಸುದ್ದಿಗಳ ನಡುವೆಯೇ ಎಲ್ಲರ ದೃಷ್ಟಿ “ದಿಲ್ಲಿ ನಿರ್ಧಾರ’ ದತ್ತ ನೆಟ್ಟಿದೆ. ಈ ಮಧ್ಯೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಯಡಿಯೂರಪ್ಪ, ಯಾರೂ ತಮ್ಮ ಪರವಾಗಿ ಹೇಳಿಕೆ ನೀಡಬಾರದು, ಪ್ರತಿಭಟನೆ ನಡೆಸಬಾರದು ಎಂದಿದ್ದಾರೆ. ಬುಧವಾರವೂ ಅವರ ನಿವಾಸಕ್ಕೆ ಸಿದ್ಧಗಂಗಾ ಮಠದ ಶ್ರೀಗಳ ಸಹಿತ 30ಕ್ಕೂ ಹೆಚ್ಚು
ಸ್ವಾಮೀಜಿಗಳು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

Advertisement

“ಯಾರೂ ತಮ್ಮ ಪರವಾಗಿ ಹೇಳಿಕೆ ಕೊಡುವುದಾಗಲಿ, ಪ್ರತಿಭಟನೆ ನಡೆಸುವುದಾಗಲಿ ಮಾಡಬಾರದು ಎಂದು ವಿನಂತಿಸಿಕೊಳ್ಳುತ್ತೇನೆ’ ಎಂದು ಹೇಳಿರುವ ಮುಖ್ಯಮಂತ್ರಿ, “ಅಭಿಮಾನವು ಶಿಸ್ತಿನ ವ್ಯಾಪ್ತಿ ಮೀರಬಾರದು. ಪಕ್ಷ ನನಗೆ ಮಾತೃ ಸಮಾನ, ಅದರ ಗೌರವಕ್ಕೆ ಚ್ಯುತಿತರುವ ಘಟನೆಗಳು ನನಗೆ ಅತೀವ ನೋವು ತರುತ್ತವೆ. ನಿಜವಾದ ಹಿತೈಷಿಗಳು ನನ್ನ ಭಾವನೆಗಳಿಗೆ ಸ್ಪಂದಿಸುತ್ತಾರೆ ಎಂದು ನಂಬಿರುವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಮುಖ್ಯಮಂತ್ರಿ ನಿವಾಸಕ್ಕೆ ಶ್ರೀಗಳ ಭೇಟಿ ಒಂದೆಡೆಯಾದರೆ, ಮತ್ತೂಂದೆಡೆ ಸಚಿವರು, ಶಾಸಕರು ಅತ್ತ ಸುಳಿಯದೆ ಇರುವುದು ಕುತೂಹಲ ಕೆರಳಿಸಿದೆ. ಬೆಂಬಲ ವ್ಯಕ್ತಪಡಿಸಿದರೆ ವರಿಷ್ಠರ ಕಣ್ಣಿಗೆ ಬೀಳುತ್ತೇವೆ ಎಂಬ ಕಾರಣದಿಂದ ದೂರ ಸರಿದಿದ್ದಾರೆ ಎನ್ನಲಾಗಿದೆ.

ಶ್ರೀರಾಮುಲು ದಿಲ್ಲಿಗೆ
ವರಿಷ್ಠರು ಸಚಿವ ಶ್ರೀರಾಮುಲು ಅವರನ್ನು ದಿಲ್ಲಿಗೆ ಕರೆಯಿಸಿಕೊಂದ್ದಾರೆ. ಮುಖ್ಯಮಂತ್ರಿ ಬದಲಾದರೆ, ನಾಲ್ವರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ಪ್ರಸ್ತಾವ ಇದೆ. ಇದನ್ನು ಚರ್ಚಿಸಲು ಶ್ರೀರಾಮುಲು ಅವರನ್ನು ಕರೆಯಿಸಿದ್ದಾರೆ ಎನ್ನಲಾಗಿದೆ.

ಬೆಲ್ಲದ ಕಾಶಿಯಲ್ಲಿ
ಶಾಸಕ ಅರವಿಂದ ಬೆಲ್ಲದ ವಾರಾಣಸಿಗೆ ತೆರಳಿದ್ದಾರೆ. ಕಾಶಿ ಪೀಠದ ಡಾ| ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿದ್ದಾರೆ.

Advertisement

ಶೆಟ್ಟರ್‌ ವಾಪಸ್‌
ದಿಲ್ಲಿಯಲ್ಲೇ ಇದ್ದ ಸಚಿವ ಜಗದೀಶ್‌ ಶೆಟ್ಟರ್‌ ವಾಪಸ್‌ ಆಗಿದ್ದಾರೆ. ರಾಜ್ಯದ ಬೆಳವಣಿಗೆಗಳ ಕುರಿತು ವರಿಷ್ಠರ ಜತೆ ಚರ್ಚಿಸಿ ಮರಳಿದ್ದಾರೆ ಎನ್ನಲಾಗಿದೆ.

ರೇಣುಕಾಚಾರ್ಯ ಕೂಡ ದಿಲ್ಲಿಯಲ್ಲಿ
ಎಂ.ಪಿ. ರೇಣುಕಾಚಾರ್ಯ ಕೂಡ ದಿಲ್ಲಿಯಲ್ಲಿದ್ದಾರೆ. ಬಿಎಸ್‌ವೈ ಪರವಾಗಿ ಹೇಳಿಕೆ ನೀಡದಂತೆ ಅವರಿಗೆ ವರಿಷ್ಠರು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಮಾಧ್ಯಮಗಳ ಪ್ರಶ್ನೆಗೆ, “ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ’ ಎಂದಷ್ಟೇ ಉತ್ತರಿಸಿದ್ದರು.

ಮುಂದುವರಿದ ಸ್ವಾಮೀಜಿಗಳ ಭೇಟಿ, ಬೆಂಬಲ
ಬುಧವಾರವೂ ಬಿಎಸ್‌ವೈ ನಿವಾಸಕ್ಕೆ 30ಕ್ಕೂ ಹೆಚ್ಚು ಸ್ವಾಮೀಜಿಗಳು ಆಗಮಿಸಿ ಚರ್ಚಿಸಿದ್ದಾರೆ. ರಾಜ್ಯದ ವಿವಿಧೆಡೆ ಬಿಎಸ್‌ವೈ ಪರ ಸ್ವಾಮೀಜಿಗಳ ಆಗ್ರಹ ಮುಂದುವರಿದಿದೆ. ಶಿವಮೊಗ್ಗದಲ್ಲಿ 21ಕ್ಕೂ ಅಧಿಕ ಶ್ರೀಗಳು ಪತ್ರಿಕಾಗೋಷ್ಠಿ ನಡೆಸಿ, ಮುಖ್ಯಮಂತ್ರಿಯನ್ನು ಬದಲಾಯಿಸಿದರೆ ಸಾಮೂಹಿಕ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಪಕ್ಷದ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುವುದಾಗಿ ಸಿದ್ಧಲಿಂಗ ಶ್ರೀಗಳ ಭೇಟಿಯ ಸಂದರ್ಭದಲ್ಲಿ ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ. ಬದಲಾವಣೆಯ ಸಾಧ್ಯತೆ ಹೆಚ್ಚಿರುವುದನ್ನು ಬಿಎಸ್‌ವೈ ಮಾತು ಪುಷ್ಟೀಕರಿಸಿದ್ದು, ಇದೇ ಹಿನ್ನೆಲೆಯಲ್ಲಿ ವಿವಿಧ ಮಠಾಧೀಶರು ಬಿಎಸ್‌ವೈ ಅವರನ್ನು ಬದಲಾಯಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬಿಎಸ್‌ವೈ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರು ಅವಧಿ ಪೂರ್ಣಗೊಳಿಸಬೇಕು ಎಂದು ನಾವೆಲ್ಲರೂ ಒತ್ತಾಯಿಸುತ್ತಿದ್ದೇವೆ. ಶಾಸಕಾಂಗ ಪಕ್ಷದ ಸಭೆಯ ತೀರ್ಮಾನದಂತೆ ಮುಖ್ಯಮಂತ್ರಿ ನಿರ್ಧಾರ ಆಗುವುದು ಎಂದು ಭೇಟಿ ಬಳಿಕ ಸಿದ್ಧಲಿಂಗ ಶ್ರೀಗಳು ಹೇಳಿದರು.

ರವಿವಾರ ಮಠಾಧೀಶರ ಸಮಾವೇಶ
ಬಿಎಸ್‌ವೈ ಅವರನ್ನು ಪದಚ್ಯುತಗೊಳಿಸದಂತೆ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಲು ರಾಜ್ಯದ 500ಕ್ಕೂ ಹೆಚ್ಚು ಮಠಾಧೀಶರು ಜು. 25ರಂದು ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಜತೆಗೆ ಇತರ ವಿವಿಧ ಸಮುದಾಯಗಳ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭೋಜನ ಕೂಟ ಮುಂದಕ್ಕೆ
ಸರಕಾರ 2 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಜು. 25ರ ರಾತ್ರಿ ನಿಗದಿಯಾಗಿದ್ದ ಭೋಜನ ಕೂಟವೂ ಮುಂದೂಡಿಕೆಯಾಗಿದೆ. ಜು. 26ರಂದು ಸರಕಾರದ ಎರಡು ವರ್ಷಗಳ ಸಾಧನೆ ಕುರಿತು ಯಡಿಯೂರಪ್ಪ ಆಯ್ದ 10 ಜಿಲ್ಲೆಗಳ ಉಸ್ತುವಾರಿ ಸಚಿವರು ಮತ್ತು ಶಾಸಕರೊಂದಿಗೆ ವೀಡಿಯೋ ಸಂವಾದ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next