ಹೊಸಕೋಟೆ: ಸಿದ್ಧಗಂಗೆಯ ಮಠಾಧ್ಯಕ್ಷರಾದ ಶಿವಕುಮಾರ ಸ್ವಾಮೀಜಿ ಕೇವಲ ವ್ಯಕ್ತಿಯಾಗದೆ ಮಹಾಚೇತನವಾಗಿದ್ದಾರೆಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.
ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಸಿದ್ಧಗಂಗಾ ಶ್ರೀ 110ನೇ ಹುಟ್ಟುಹಬ್ಬದ ಅಂಗ ವಾಗಿ ಹಮ್ಮಿಕೊಂಡಿರುವ ಶೋಭಾಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಸಿದ್ಧಗಂಗಾ ಸ್ವಾಮೀಜಿಯಂತಹ ಸೇವಾ ಮನೋಭಾವ ಹೊಂದಿರುವ ವ್ಯಕ್ತಿಗಳು ವಿರಳ ಹಾಗೂ ಸ್ವಾರ್ಥತೆ ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ಸಾಮಾಜಿಕ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟಿದ್ದು, ರಾಷ್ಟ್ರದ ಪ್ರತಿಷ್ಠಿತ ಭಾರತರತ್ನ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಹೇಳಿದರು.
ಪವಿತ್ರ ದಿನವಾಗಿ ಆಚರಿಸಿ: ಕಳೆದ 85 ವರ್ಷಗಳಿಂದಲೂ ಯಾವುದೇ ಜಾತಿ, ಮತ, ಭೇದಭಾವವಿಲ್ಲದೆ ಎಲ್ಲಾ ವರ್ಗಕ್ಕೂ ಮುಕ್ತವಾದ ಅವಕಾಶ ಕಲ್ಪಿಸಿ ಶೈಕ್ಷಣಿಕ ಪ್ರಗತಿಗೆ ಉತ್ತಮ ಕೊಡುಗೆ ನೀಡಲು ಶ್ರಮಿಸುತ್ತಿರುವ ಮಠಾಧೀಶರು ಇತರ ರಿಗೆ ಮಾದರಿಯಾಗಿದ್ದಾರೆ. ಕೇವಲ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳ್ಳದೆ ಸಮಾಜದ ಬಡವರ, ರೈತರಂತಹ ಎಲ್ಲಾ ವರ್ಗದವರ ಹಿತ ಬಯಸು ವರಾಗಿ ಯುಗಪುರುಷರಾಗಿದ್ದಾರೆ. ಅವರ ಜನ್ಮದಿನೋತ್ಸವವನ್ನು ಪವಿತ್ರ ದಿನವನ್ನಾಗಿ ಆಚರಿಸುವ ಮೂಲಕ ಗೌರವ ಸಲ್ಲಿಸಬೇಕಾದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ತಾಲೂಕು ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಎಸ್.ರಾಜ ಕುಮಾರ್ ಮಾತನಾಡಿ, ಸಿದ್ಧಗಂಗಾ ಸ್ವಾಮೀಜಿಯವರ ಹುಟ್ಟುಹಬ್ಬಕ್ಕಾಗಿ ಈಗಾಗಲೇ ಭಕ್ತರಿಂದ ಸುಮಾರು 250 ಮೂಟೆಗಳಷ್ಟು ಅಕ್ಕಿ ಸಂಗ್ರಹಣೆ ಮಾಡಲಾಗುತ್ತಿದ್ದು ಯಾವುದೇ ರೀತಿಯ ಕೊಡುಗೆಗಳನ್ನು ನೀಡಬಯಸುವವರು ಮಾ.30ರೊಳಗೆ ಸಲ್ಲಿಸಬಹುದಾಗಿದೆ ಎಂದು ಹೇಳಿದರು. ಸಂಗ್ರಹಗೊಂಡ ಎಲ್ಲಾ ವಸ್ತುಗಳನ್ನು ಪಟ್ಟಣದ ಎಸ್‌ಜೆಆರ್‌ಎಸ್ ಶಾಲೆಯಲ್ಲಿ ದಾಸ್ತಾನು ಮಾಡಿದ್ದು, ಮಾ.31ರಂದು ಕ್ಷೇತ್ರಕ್ಕೆ ರವಾನಿಸಲಾಗುವುದು. ಹೆಚ್ಚಿನ ವಿವರಗಳಿಗೆ ದೂ. 9620782738 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಶೋಭಾಯಾತ್ರೆ ಸಮಿತಿ ಅಧ್ಯಕ್ಷ ಹುಲಿಕಲ್ ನಟರಾಜ್, ತಾಲೂಕು ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಎಸ್.ರಾಜಕುಮಾರ್, ನಗರಸಭೆ ಸದಸ್ಯ ಜೆ.ಸಿ.ವೀರಭದ್ರಯ್ಯ, ಟೌನ್ ಬ್ಯಾಂಕ್ ನಿರ್ದೇಶಕ ಸಿ.ನವೀನ್, ತಾಲೂಕು ವೀರಶೈವ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಸಮಾರಂಭಕ್ಕೂ ಮುನ್ನ ನಗರದ ಅವಿಮುಕ್ತೇಶ್ವರಸ್ವಾಮಿ ದೇಗುಲದಿಂದ ಪ್ರಾರಂಭಗೊಂಡು ಶೋಭಾ ಯಾತ್ರೆ ಪ್ರಮುಖ ಬೀದಿಗಳಲ್ಲಿ ವಿವಿಧ ಜನಾಪದ ಕಲಾ ತಂಡಗಳೊಂದಿಗೆ ಸಂಚರಿಸಿತು.