Advertisement

ಕನ್ನಡದ ನೆಲದಲ್ಲಿ ವಿವೇಕಾನಂದ

04:52 AM Jan 12, 2018 | |

ಜ.12ರಂದು ವಿವೇಕಾನಂದರ 155ನೇ ಜನ್ಮ ದಿನಾಚರಣೆ. ಈ ಹಿನ್ನೆಲೆಯಲ್ಲಿ ಕನ್ನಡದ ನೆಲದಲ್ಲಿ ಮೂಡಿದ ಅವರ ಹೆಜ್ಜೆ ಗುರುತುಗಳು…

Advertisement

ಸ್ವಾಮಿ ವಿವೇಕಾನಂದ ಎಂಬ ಹೆಸರು ನಮ್ಮ ಕಿವಿಗೆ ಬಿದ್ದಾಗ ನೆನಪಾಗುವುದು 
1. ದಿಗಂತದಲ್ಲೆಲ್ಲೋ ಅಸೀಮವಾದುದನ್ನು ಹುಡುಕುವ ನೆಟ್ಟನೋಟದ ಧೀಮಂತ ನಿಲುವು 
2. ಅವರ ಸಿಂಹವಾಣಿಗಳು. ಅಂತಹ ಸಿಂಹಸದೃಶ್ಯ ಸನ್ಯಾಸಿಗೂ ಕನ್ನಡದ ನೆಲ ಕರ್ನಾಟಕಕ್ಕೂ ಇರುವ ಸಂಬಂಧದ ಪರಿಚಯ ಬಹುತೇಕರಿಗಿಲ್ಲ.
 

ಅಮೆರಿಕದಲ್ಲಿ ಸಂಕಟಗಳ ಮೆಟ್ಟಿ ನಿಂತಿದ್ದು ಗೊತ್ತಾ?
ಸ್ವಾಮಿ ವಿವೇಕಾನಂದರು 1893, ಸೆ.11ರಂದು ಅಮೆರಿಕ ಶಿಕಾಗೊದಲ್ಲಿ ಮಾಡಿದ ಭಾಷಣ ವಿಶ್ವಪ್ರಸಿದ್ಧ. ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಘಟನೆಯದು. ದೇಶದ ಮನೋಭೂಮಿಕೆಯಲ್ಲಿ ಬದಲಾವಣೆ, ಸ್ವಾಭಿಮಾನದ ಹೊಳೆಯನ್ನೇ ಹರಿಸಿದ ದಿವ್ಯಗಳಿಗೆಯದು. ಬಹುತೇಕರಿಗೆ ವಿವೇಕಾನಂದರ ಕುರಿತ ಈ ಘಟನೆಗಳು ಗೊತ್ತಿರುತ್ತವೆ. ಆದರೆ ಇಂತಹ ಸಾಧನೆಗೂ ಮುನ್ನ ಅವರನುಭವಿಸಿದ ಸಂಕಟಗಳು ಗೊತ್ತಿರುವುದು ಕೆಲವರಿಗೆ ಮಾತ್ರ. ಯಾವುದೇ ಸಾಧನೆಗೂ ಮುನ್ನ ಸಾಧಕ ಹಲವು ಸಂಕಟ ಅನುಭವಿಸಿರುತ್ತಾನೆ, ಅದನ್ನು ಮೀರಿ ನಿಂತವ ಮಾತ್ರ ಸಾಧಕನಾಗುತ್ತಾನೆ. ವಿವೇಕಾನಂದರ ಅಮೆರಿಕದ ಅನುಭವಗಳು ಸಾಧನೆಯ ಹಾದಿಯಲ್ಲಿ ಹೊರಟು ಸಾವಿರಾರು ಮಂದಿಗೆ ಸ್ಫೂರ್ತಿ ಸೆಲೆಯಾಗುತ್ತವೆ.

ನೂರಾರು ಸಮಸ್ಯೆಗಳ ಸುಳಿಯಲ್ಲಿ ದಿವ್ಯಚೇತನ
ಸ್ವಾಮಿ ವಿವೇಕಾನಂದರು ಅಮೆರಿಕಕ್ಕೆ ಅಳಸಿಂಗ ಪೆರುಮಾಳ್‌ ಎಂಬ ಕನ್ನಡಿಗನ ನೆರವಿನಿಂದ ತಲುಪಿದರು. ಯಾವುದೋ ಉತ್ಸಾಹದಿಂದ ಪೆರುಮಾಳ್‌ ಹಣ ಸಂಗ್ರಹಣೆ ಮಾಡಿ ವಿವೇಕಾನಂದರನ್ನು ಅಮೆರಿಕಕ್ಕೆ ಕಳುಹಿಸಿದ್ದರು. ಆದರೆ ಹಲವು ಮುಖ್ಯ ಸಂಗತಿಗಳ ಕಡೆಗೆ ಅವರಿಗೆ ಗಮನವೇ ಹೋಗಿರಲಿಲ್ಲ. ಮೊದಲನೆಯದಾಗಿ ಸೆ.11ಕ್ಕೆ ಸರ್ವಧರ್ಮ ಸಮ್ಮೇಳನ ಶುರುವಾಗಲಿದ್ದರೂ ಅದಕ್ಕೂ ಕೆಲ ತಿಂಗಳ ಮುಂಚೆಯೇ ವಿವೇಕಾನಂದರು ಅಲ್ಲಿ ಹೋಗಿದ್ದರು. ಸಮ್ಮೇಳನ ಶುರುವಾಗುವವರೆಗೆ ಉಳಿದುಕೊಳ್ಳುವುದೆಲ್ಲಿ? ಅಂತಹ ದುಬಾರಿ ಖರ್ಚನ್ನು ನಿಭಾಯಿಸು ವುದು ಹೇಗೆ ಎನ್ನುವುದೇ ಇಲ್ಲಿನ ಮುಖ್ಯ ಪ್ರಶ್ನೆ. ಇದಕ್ಕಿಂತ ಸಮಸ್ಯೆಯಾ ಗಿದ್ದು ಸಮ್ಮೇಳನದಲ್ಲಿ ಭಾಗವಹಿಸಬೇಕಾದವರು ಯಾವುದಾ ದರೊಂದು ಅಧಿಕೃತ ಸಂಸ್ಥೆಯ ಪ್ರತಿನಿಧಿಗಳಾಗಬೇಕು. ವಿವೇಕಾನಂದರು ಯಾವುದೇ ಸಂಸ್ಥೆಯ ಪ್ರತಿನಿಧಿಯಾಗಿರಲಿಲ್ಲ. ಜೊತೆಗೆ ಅದಾಗಲೇ ಸಮ್ಮೇಳನಕ್ಕೆ ಹೆಸರು ನೋಂದಣಿ ಮಾಡಿಕೊಳ್ಳುವ ದಿನಾಂಕವೇ ಮುಗಿದುಹೋಗಿತ್ತು. ಅಂತಹ ಹೊತ್ತಿನಲ್ಲಿ ವಿವೇಕಾ ನಂದರು ಅದೆಲ್ಲವನ್ನೂ ನಿಭಾಯಿಸಿ ಗೆದ್ದರು.

ಅಮೆರಿಕದಿಂದ ವಾಪಸ್‌ ಬರುತ್ತೇನೆ, ಹಣ ಕಳುಹಿಸು! 
ಅಮೆರಿಕದಲ್ಲಿಳಿಯುವಾಗ ವಿವೇಕಾನಂದರ ಬಳಿಯಿದ್ದದ್ದು ಕೇವಲ 187 ಪೌಂಡು ಹಣ ಮಾತ್ರ. ಶಿಕಾಗೊದಂತಹ ದುಬಾರಿ ನಗರದಲ್ಲಿ ಅದು ನೀರಿನಂತೆ ಕರಗುತ್ತಾ ಹೋಯಿತು. ಅವರು ಸಮೀಪದ ಬೋಸ್ಟನ್‌ಗೆ ಕಡಿಮೆ ಖರ್ಚು ಎಂಬ ಕಾರಣಕ್ಕೆ ತೆರಳಿದರು. ಅಲ್ಲಿ ಯಾವುದೋ ಮುದುಕಿಯ ಮನೆಯಲ್ಲಿ ಆಶ್ರಯ ಪಡೆದರು. ಅಂತಹ ಸಂದರ್ಭದಲ್ಲಿ ಅವರು ಅಳಸಿಂಗ ಪೆರುಮಾಳ್‌ಗೆ ಪತ್ರ ಬರೆದು, ಇಲ್ಲಿ ಹಣವಿಲ್ಲದೇ ಹಸಿವಿನಿಂದ ಒದ್ದಾಡುತ್ತಿದ್ದೇನೆ. ಇಷ್ಟು ದೂರ ಬಂದು ಸುಮ್ಮನೆ ಹಿಂತಿರುಗಲು ನಾನು ಸಿದ್ಧವಿಲ್ಲ. ಇನ್ನೊಂದು ಆರು ತಿಂಗಳು ಇರಲು ಸಾಕಾಗುವಷ್ಟು ಹಣ ಕಳುಹಿಸು. ನಾನಿಲ್ಲಿ ಹಸಿವು, ಚಳಿಯಿಂದ ಸತ್ತರೆ ನನ್ನ ಕೆಲಸವನ್ನು ನೀನು ಮುಂದುವರೆಸು ಎಂದು ಹೇಳಿದರು. ಇನ್ನೊಂದು ಪತ್ರವನ್ನಂತೂ ಓದಿದ ಅಳಸಿಂಗರು ಅತ್ತೇ ಬಿಟ್ಟರು. ಇಲ್ಲಿ ಹಸಿವಿನಿಂದ ಕಂಗೆಟ್ಟಿದ್ದೇನೆ. ಹಣ ಖರ್ಚಾಗಿದೆ. ವಾಪಸ್‌ ಬರಲಿಕ್ಕಾದರೂ ಹಣ ಕಳುಹಿಸು ಎಂದು ವಿವೇಕಾನಂದರು ಬರೆದಿದ್ದರು.


ಹಣಕಾಸಿನ ಅಡಚಣೆ, ಅಪರಿಚಿತ ನೆಲದ ಸಂಕಟಗಳು ಅವರಿನ್ನೂ ಪ್ರಚಾರಕ್ಕೆ ಬರುವ ಮುನ್ನ ಆಗಿದ್ದು. ಅಮೆರಿಕದಲ್ಲಿ ಜನಪ್ರಿಯಗೊಂಡ ನಂತರ ಎದುರಾದ ಸಮಸ್ಯೆಗಳು ಇನ್ನೂ ಭಿನ್ನ. ಅಸೂಯೆಗೊಳಗಾದ ಹಲವರು ವ್ಯವಸ್ಥಿತವಾಗಿ ಅಪಪ್ರಚಾರ ಆರಂಭಿಸಿದರು. ಭಾರತದಲ್ಲೂ ಅಂತಹದ್ದೆ ಘಟನೆಗಳು ನಡೆದಿದ್ದು ಅವರಿಗೆ ಗೊತ್ತಾಯಿತು. ಆಗ ತಾವೂ ಅದನ್ನು ಎದುರಿಸಿ ನಿಲ್ಲುವುದರ ಜೊತೆಗೆ, ತಮ್ಮನ್ನು ನಂಬಿದ್ದ ಶಿಷ್ಯವರ್ಗಕ್ಕೂ ಸ್ಫೂರ್ತಿಯಾದರು. ಹೆದರದಂತೆ ಹುರಿದುಂಬಿಸಿದರು.

Advertisement

ಬೆಳಗಾವಿಯಲ್ಲಿ ವಿವೇಕಾನಂದರ ಮೊದಲ ಹೆಜ್ಜೆ
ಶ್ರೀರಾಮಕೃಷ್ಣ ಪರಮಹಂಸರು ದೇಹತ್ಯಾಗ ಮಾಡಿದ ನಂತರ ವಿವೇಕಾನಂದರು ಪರಿವ್ರಾಜಕರಾಗಿ ದೇಶ ಸುತ್ತಲು ಹೊರಟರು. ಆ ಹಂತದಲ್ಲಿ 1892, ಅ.15ರಂದು ಅವರು ಬೆಳಗಾವಿಗೆ ಬಂದು ಅಲ್ಲಿ ಭಾಟೆಯವರ ಮನೆಯಲ್ಲಿ ಉಳಿದುಕೊಂಡಿದ್ದರು. ಭಾಟೆಯವರ ಪುತ್ರ ಆಗ ಅಷ್ಟಾಧ್ಯಾಯಿ ಅಭ್ಯಾಸ ಮಾಡುತ್ತಿದ್ದರು. ಅದನ್ನು ಅರ್ಥ ಮಾಡಿಕೊಳ್ಳಲು  ತಿಣುಕುತ್ತಿದ್ದಾಗ ವಿವೇಕಾನಂದರು ಸಲೀಸಾಗಿ ಅದನ್ನು ಬಿಡಿಸಿ ಹೇಳಿದರು. ಅದನ್ನು ನೋಡಿ ಬಾಟೆಯವರು ಅಚ್ಚರಿ ಪಟ್ಟರು.

ದೇವರನ್ನು ನೋಡಲಾಗದಿದ್ದರೂ ಪ್ರೇತವನ್ನಾದರೂ ನೋಡಿ 
ಬಾಟೆಯವರ ಮನೆಯಲ್ಲಿದ್ದಾಗಲೇ ತಿಳಿವಳಿಕೆ ಇರುವ ವ್ಯಕ್ತಿ ಎನಿಸಿಕೊಂಡ ಎಂಜಿನಿಯರ್‌ ಒಬ್ಬರು ಅಲ್ಲಿಗೆ ಬಂದರು. ಧರ್ಮವೆಲ್ಲ ಸುಳ್ಳು, ಅದರಲ್ಲಿ ಏನೂ ಇಲ್ಲ ಎನ್ನುವುದು ಅವರ ಅಭಿಪ್ರಾಯ. ಧರ್ಮವೆಂದರೆ ಬೌದ್ಧಿಕ ಪಾಂಡಿತ್ಯವಲ್ಲ, ಪ್ರತ್ಯಕ್ಷ ಅನುಭವ. ಅದೇನೂ ಇಲ್ಲದ ವ್ಯಕ್ತಿಗಳಿಗೆ ಮಾತ್ರ ಇಂತಹ ಅನುಮಾನಗಳು ಬರುತ್ತವೆ. ದೇವರನ್ನು ನೋಡಲಾಗದಿದ್ದರೂ ಕಡೆಯ ಪಕ್ಷ ಪ್ರೇತವನ್ನು ನೋಡಿದರೂ ಅದು ಮಹತ್ವದ ಸಂಗತಿಯೇ ಆಗುತ್ತದೆ. ಏನೂ ಗೊತ್ತಿಲ್ಲದೇ ಮಾತನಾಡುವುದು ವ್ಯರ್ಥ ಎನ್ನುವುದು ವಿವೇಕಾನಂದರ ನುಡಿಯಾಗಿತ್ತು. ಇದರಿಂದ ಅವಮಾನಿತನಾದ ಆ ಎಂಜಿನಿಯರ್‌ ಸಿಟ್ಟಿಗೆದ್ದು ಕೆಟ್ಟ ವರ್ತನೆ ಮಾಡಿದರೂ, ವಿವೇಕಾನಂದರು ಮಾತ್ರ ತಾಳ್ಮೆ ಕಳೆದುಕೊಳ್ಳಲಿಲ್ಲ.

ಪಿಕ್‌ವಿಕ್‌ ಪೇಪರ್ಸ್‌ನ ಪುಟಪುಟಗಳ ಉದ್ಧರಿಸಿದ ಸನ್ಯಾಸಿ
ಬೆಳಗಾವಿಯಲ್ಲಿ ಅರಣ್ಯಾಧಿಕಾರಿಯಾಗಿದ್ದ ಹರಿಪದ ಬಾಬು ಎಂಬಾತನ ಮನೆಗೂ ವಿವೇಕಾನಂದರು ಭೇಟಿ ನೀಡಿದ್ದರು. ಆಗ ಮಾತಿನ ನಡುವೆ ಪಿಕ್‌ವಿಕ್‌ ಪೇಪರ್ಸ್‌ ಎಂಬ ಇಂಗ್ಲಿಷ್‌ ಕಾದಂಬರಿಯ ಪುಟಪುಟಗಳನ್ನು ವಿವೇಕಾನಂದರು ಯಥಾವತ್‌ ಉದ್ಧರಿಸಿದರು. ಆ ಪುಸ್ತಕವನ್ನು ಅವರು ತಮ್ಮ ಬಾಲ್ಯದಲ್ಲೊಮ್ಮೆ, 6 ತಿಂಗಳಿಗೆ ಮುಂಚೆ ಒಮ್ಮೆ ಮಾತ್ರ ಓದಿದ್ದರಂತೆ. ಅಷ್ಟು ಸ್ಪಷ್ಟ ಸ್ಮರಣಶಕ್ತಿಯನ್ನು ಕಂಡು ಹರಿಪದ ಬಾಬು ಚಕಿತರಾದರು. ದೈಹಿಕ ಶಕ್ತಿಯನ್ನು ಮಾನಸಿಕ ಶಕ್ತಿಯನ್ನಾಗಿ ಪರಿವರ್ತಿಸಿದರೆ ಇಂತಹ ನೆನಪು ಸಾಧ್ಯ ಎನ್ನುವುದು ವಿವೇಕಾನಂದರ ಉತ್ತರ.

ನಿಮ್ಮದೇ ಗುರು ಆಯ್ದುಕೊಳ್ಳಿ, ಬ್ರಾಹ್ಮಣರ ಹಿಂದೇಕೆ ಬೀಳುತ್ತೀರಿ?
ಕೇರಳ ಮೂಲದ ಸರ್ಕಾರಿ ವೈದ್ಯಾಧಿಕಾರಿ ಪಲ್ಪು ಎಂಬುವವರನ್ನು ಬೆಂಗಳೂರಿನಲ್ಲಿ ಸ್ವಾಮೀಜಿ ಭೇಟಿ ಮಾಡಿದ್ದರು. ಕೆಳಜಾತಿಯವರು ಎಂಬ ಕಾರಣಕ್ಕೆ ಕೇರಳದಲ್ಲಿ ಉದ್ಯೋಗ ಸಿಗದೇ ಅವರು ಬೆಂಗಳೂರಿಗೆ ಬರಬೇಕಾಗಿತ್ತಂತೆ. ಆಗ ವಿವೇಕಾನಂದರಿಗೆ ಕೇರಳದ ದುಸ್ಥಿತಿಯ ಅರಿವಾಯಿತು. ಇದಕ್ಕೆ ಸಮಾಧಾನಿಸಿದ ವಿವೇಕಾನಂದರು, ನೀವೇಕೆ ಬ್ರಾಹ್ಮಣರ ಹಿಂದೆ ಬೀಳುತ್ತೀರಿ, ನಿಮ್ಮದೇ ಜನಾಂಗದಲ್ಲಿ ಒಬ್ಬ ಗುರುಗಳನ್ನು ಹುಡುಕಿಕೊಳ್ಳಿ ಎಂಬ ಉತ್ತರ ನೀಡಿದರು. ಮುಂದೆ ಪಲ್ಪು ಅವರು ಕೇರಳದ ಖ್ಯಾತ ಸುಧಾರಕ ನಾರಾಯಣ ಗುರುಗಳನ್ನು ತಮ್ಮ ಮಾರ್ಗದರ್ಶಕರನ್ನಾಗಿ ಸ್ವೀಕರಿಸಿದರು.

ಬೆಂಗಳೂರಿನಲ್ಲಿ ದಿವಾನ್‌ ಶೇಷಾದ್ರಿ ಐಯ್ಯರ್‌ ಭೇಟಿ
ಮೈಸೂರು ದಿವಾನರಾಗಿದ್ದ ಶೇಷಾದ್ರಿ ಐಯ್ಯರ್‌ರನ್ನು ಸ್ವಾಮೀಜಿ 1892ರಲ್ಲಿ ಬೆಂಗಳೂರಿನಲ್ಲಿ ಭೇಟಿಯಾದರು. ಮೊದಲ ಭೇಟಿಯಲ್ಲಿ ದಿವಾನರು ಅವರನ್ನು ಗೌರವಿಸಿ ಮುಂದೆ ಮೈಸೂರಿನ ಮನೆಗೆ ಒಯ್ದು 3 ವಾರಗಳ ಕಾಲ ಇಟ್ಟುಕೊಂಡಿದ್ದರು. ಅದೇ ಕಾಲದಲ್ಲಿ ವಿವೇಕಾನಂದರು ಮೈಸೂರು ಮಹಾರಾಜರನ್ನು ಭೇಟಿಯಾದರು.

ಮಹಾರಾಜ ಚಾಮರಾಜ ಒಡೆಯರ್‌ಗೆ ಮೆಚ್ಚಿನ ಗುರು
ಆಗ ಮೈಸೂರಿನ ಮಹಾರಾಜರಾಗಿದ್ದ ಚಾಮರಾಜ ಒಡೆಯರ್‌ ಅವರು ತಮ್ಮ ಜನಾನುರಾಗಿತ್ವದಿಂದ ಹೆಸರುವಾಸಿಯಾಗಿದ್ದರು. ಆದರೆ ಎಲ್ಲವನ್ನೂ ಬ್ರಿಟಿಷ್‌ ಸರ್ಕಾರವನ್ನೇ ಕೇಳಿ ಮಾಡಬೇಕಾದ ಪರಿಸ್ಥಿತಿಯಲ್ಲಿದ್ದರು. ಅಂತಹ ಹೊತ್ತಿನಲ್ಲಿ ವಿವೇಕಾನಂದರು ಮಹಾರಾಜರ ಆಸ್ಥಾನ ಪ್ರವೇಶಿಸಿದರು. ವಿದ್ವತ್‌ ಗೋಷ್ಠಿಯೊಂದರಲ್ಲಿ ಖ್ಯಾತ ಸಂಸ್ಕೃತ ವಿದ್ವಾಂಸರಿಗೂ ಹೊಳೆಯದ ಉತ್ತರವನ್ನು ಅಂತಿಮವಾಗಿ ವಿವೇಕಾನಂದರು ನೀಡಿದ್ದು ಸೇರಿ ಹಲವು ಘಟನೆಗಳು ಮಹಾರಾಜರ ಆದರಕ್ಕೆ ಕಾರಣವಾಯಿತು. ಆಗ ಕೇವಲ 30 ವರ್ಷದವರಾಗಿದ್ದ ಚಾಮರಾಜ ಒಡೆಯರು ಮತ್ತು 25ರ ವಯಸ್ಸಿನಲ್ಲಿದ್ದ ವಿವೇಕಾನಂದರ ನಡುವೆ ಆತ್ಮೀಯ ಬೆಸುಗೆ ಉಂಟಾಯಿತು. ಮುಂದೆ ವಿವೇಕಾನಂದರು ಅಮೆರಿಕಕ್ಕೆ ಹೊರಟಾಗ ಅದರ ಬಹುತೇಕ ವೆಚ್ಚ ಭರಿಸಿದ್ದು ಚಾಮರಾಜ ಒಡೆಯರ್‌ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

ಆಸ್ಥಾನಿಕರು ಹೊಗಳು ಭಟರು, ದಿವಾನರು ಸರ್ಕಾರದ ಏಜೆಂಟ್‌!
ಮಹಾರಾಜರ ಆಸ್ಥಾನದಲ್ಲಿದ್ದಾಗ ಒಮ್ಮೆ ಚಾಮರಾಜ ಒಡೆಯರ್‌ ಅವರು ತಮ್ಮ ಆಸ್ಥಾನಿಕರ ಬಗ್ಗೆ ವಿವೇಕಾನಂದ ರಲ್ಲಿ ಅಭಿಪ್ರಾಯ ಕೇಳಿದರು. ಉತ್ತರ ಕೇಳಿ ಎಂತಹವರಿಗೂ ದಿಗ್ಭ್ರಮೆಯಾಗಬೇಕು. “ನಿಮ್ಮ ಸುತ್ತ ಬರೀ ಹೊಗಳುಭಟರೆ ಇದ್ದಾರೆ. ಇಂತಹವರಿಂದ ಯಾವುದೇ ಪ್ರಯೋಜನ ವಿಲ್ಲ’ವೆಂದು ನೇರವಾಗಿ ವಿವೇಕರು ನುಡಿದುಬಿಟ್ಟರು. ಅದರಿಂದ ಸಾವರಿಸಿಕೊಂಡ ಅರಸರು, ಹೋಗಲಿ ನಮ್ಮ ದಿವಾನರು ಯೋಗ್ಯವ್ಯಕ್ತಿ, ಅವರ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, ದಿವಾನರೆಂದರೆ ಮಹಾರಾಜರನ್ನು ಲೂಟಿ ಮಾಡಿ ಬ್ರಿಟಿಷ್‌ ಏಜೆಂಟರಿಗೆ ದಾಟಿಸುವವರು ಎಂದು ಮುಲಾಜಿಲ್ಲದೇ ನುಡಿದರು. ತನ್ನ ಪ್ರಾಣ ಹೋದರೂ ಸರಿ ಸತ್ಯನಿಷ್ಠೆಯನ್ನು ತಾನು ತಪ್ಪಿಸುವುದಿಲ್ಲವೆನ್ನುವುದು ವಿವೇಕಾನಂದರು ಈ ಘಟನೆಯ ಮೂಲಕ ನೀಡಿದ ಸಂದೇಶ.

ಅಮೆರಿಕ ದಿಗ್ವಿಜಯಕ್ಕೆ 1894ರಲ್ಲಿ ಬೆಂಗಳೂರಿನಲ್ಲಿ ಅಭಿನಂದನೆ
ವಿವೇಕಾನಂದರು ಅಮೆರಿಕದ ಭಾಷಣದ ನಂತರ ಜಗದ್ವಿಖ್ಯಾತ ರಾದರು. ಆಗ ದೇಶದೆಲ್ಲೆಡೆ ಅಭಿನಂದನಾ ಸಭೆ ನಡೆ ಯಿತು. ಅಳಸಿಂಗರ ಪ್ರಯತ್ನದಿಂದ ಬೆಂಗಳೂರಿ ನಲ್ಲೂ 1894ರಲ್ಲಿ ಅಂತಹ ಸಭೆ ನಡೆಯಿತು. ಮೈಸೂರು ದಿವಾನರಾದ ಶೇಷಾದ್ರಿ ಐಯ್ಯರ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಂದು ನಡೆದ ಸ್ಮರಣಾರ್ಹ ಕಾರ್ಯಕ್ರಮದಲ್ಲಿ ಚೆಂಗಲ್‌ರಾವ್‌ ಪಂತುಲು, ಶ್ರೀ ಮೀನಾಕ್ಷಿ ಐಯ್ಯರ್‌, ಮಹಾದೇವಪ್ರಸಾದ್‌, ಶ್ರೀನಿವಾಸಾಚಾರು ಭಾಗವಹಿಸಿದ್ದರು.

ಸಿಂಹವಾಣಿ
ಪ್ರಿಯ ಬ್ರಹ್ಮಾನಂದ, ಕೆಲಸ, ಕೆಲಸ. ಇದನ್ನೇ ಗಮನಿಸು. ಸಿದ್ಧಾಂತಗಳು ಮತ್ತು ಮತಗಳು ಹೃದಯವನ್ನು ಮುಟ್ಟ ಬಲ್ಲವೇನು? ತಪಸ್ಸು, ಪೂಜೆಯ ಮನೆ, ನೈವೇದ್ಯ ಈ ಎಲ್ಲವೂ ಒಬ್ಬನ ಅಥವಾ ಒಂದು ದೇಶದ ಧರ್ಮವಾಗಿದೆ. ಪರೋಪಕಾರ ಒಂದು ಮಹತ್ತಾದ ವಿಶ್ವಧರ್ಮ. ನೀನು ಸ್ವಲ್ಪವೇ ಸೇವೆ ಮಾಡಿದರೂ ಜಗತ್ತು ನಿನಗೆ ಕೃತಜ್ಞವಾಗಿರುತ್ತದೆ. ದಯೆ, ಪ್ರೀತಿಗಳಿಂದ ಪ್ರಪಂಚವನ್ನೇ ಕೊಳ್ಳಬಹುದು. ಇದನ್ನು ಮಾಡಿದರೆ ರಾಮಕೃಷ್ಣರು ಅವತಾರ ಪುರುಷರೆಂದು ಇನ್ನೆಂದಿಗೂ ನೀನು ವಾದ ಮಾಡಬೇಕಾಗುವುದಿಲ್ಲ.

ಭಾರತೀಯರೆ ಅಡಗಿ ಕುಳಿತಿರುವ ನಿಮ್ಮ ಬಿಲಗಳಿಂದ ಹೊರಬಂದು ಸುತ್ತಲಿನ ಪ್ರಪಂಚವನ್ನು ವೀಕ್ಷಿಸಿ. ಇತರೆ ರಾಷ್ಟ್ರಗಳ ಪ್ರಗತಿಪಥವನ್ನು ಕಂಡು ಪಾಠ ಕಲಿಯಿರಿ. ನೀವು ದೇಶಪ್ರೇಮಿಗಳೇನು? ಹಾಗಾದಲ್ಲಿ ನಾವು ಉನ್ನತ, ಶ್ರೇಷ್ಠ ಧ್ಯೇಯಗಳಿಗಾಗಿ ಶ್ರಮಿಸೋಣ. ಸದಾ ಮುನ್ನಡೆಯೋಣ.

ಭಾರತಕ್ಕೆ ಇಂದು ಕನಿಷ್ಠ ಒಂದು ಸಾವಿರ ಯುವಕರು ಬೇಕು. ಭಾರತಿಯ ಹಿತಕ್ಕಾಗಿ ಜೀವವನ್ನೇ ಅರ್ಪಿಸುವಂತ ವರು, ಬಡವರಿಗೆ ಅನ್ನ, ಅನುಕಂಪ, ಬೆಳಕು ನೀಡಲು ಸಿದ್ಧವಿರುವ ತ್ಯಾಗೀ ಪುರುಷರು ಬೇಕು. ಪೂರ್ವಿಕರ ದೌರ್ಜನ್ಯದಿಂದಾಗಿ ಪಶುಸದೃಶರಾದ ಜನತೆಯಲ್ಲಿ ಹೋರಾಡುವ ಕಿಚ್ಚನ್ನು ನಿರ್ಮಿಸಬಲ್ಲ ಜನರು ಬೇಕು.

ಬಡಜನರಿಗಾಗಿ, ಸಂಕಟಗ್ರಸ್ತರಿಗಾಗಿ ಮರುಗುವ ಪಾಠ ಹೇಳಿಕೊಟ್ಟಾತ ಬುದ್ಧ. ನನ್ನ ಮೂಲಕ ಹರಿಯುತ್ತಿರುವುದೂ ಆತನ ಚೈತನ್ಯವೇ. ಪವಿತ್ರರಾದ, ಭಗವಂತನ ಭಕ್ತರಾದ, ಕರುಣಾಧ್ರìರಾದ, ಸಿಂಹ ಸದೃಶರಾದ ವ್ಯಕ್ತಿಗಳು ಜಾಗೃತಿಯ ಧ್ವಜ ಹಿಡಿದು ನಾಡಿನುದ್ದಕ್ಕೂ ಸಂಚರಿಸುವಂತಾಗಲಿ. ಮೃತಪ್ರಾಯರಿಗಾಗಿ ಬದುಕಿರುವ ಶ್ರೀಮಂತರಿಂದ ಹೆಚ್ಚು ನಿರೀಕ್ಷಿಸಬೇಡಿ. ನನಗೆ ಬಹಳ ಭರವಸೆ ಇರುವುದು ಪ್ರಾಮಾಣಿಕರಾದ ಬಡಜನರ ಮೇಲೆ.

ಹಿಂದುವು ತನ್ನ ಧರ್ಮವನ್ನು ಎಂದೂ ಕೈಬಿಡಲಾಗದು. ಕೆಲವರು ಹೇಳುವಂತೆ ಧರ್ಮ ಎಂದೂ ಅವನತಿಗೆ ಕಾರಣವಾಗಿಲ್ಲ. ಧರ್ಮದ ಕಟ್ಟಡವನ್ನು ಸಡಿಲಗೊಳಿಸದಿರೋಣ. ಧರ್ಮ ಬೇರೆ, ಜಾತಿ ಪದ್ಧತಿ ಬೇರೆ. ಜಾತಿ ಪದ್ಧತಿ ಕೇವಲ ಒಂದು ಸಮಾಜ ವ್ಯವಸ್ಥೆ ಮಾತ್ರ. 

ನೆನಪಿರಲಿ…ಭಾರತ 
ವಾಸಿಸುವುದು ಜೋಪಡಿಗಳಲ್ಲೇ, ಜೋಪಡಿವಾಸಿಗಳ ಸ್ಥಿತಿ ಸುಧಾರಿಸದೇ ಭಾರತದ ಸ್ಥಿತಿ ಸುಧಾರಿಸದು. ಅವರಲ್ಲಿ ಅಂತರ್ಗತವಾದ ಆಧ್ಯಾತ್ಮಿಕತೆ ನಷ್ಟವಾಗದಂತೆ, ಅವರ ವ್ಯಕ್ತಿಗತ ಶಕ್ತಿ ಕಳೆದು ಹೋಗದಂತೆ ಅವರ ಸುಧಾರಣೆಯಾಗಬೇಕು.

ನಿಮ್ಮ ಕೆಲಸದ ವಿಧಾನದಲ್ಲಿ, ಸ್ವತಂತ್ರ ಮನೋವೃತ್ತಿಯಲ್ಲಿ, ಶಕ್ತಿಯಲ್ಲಿ, ಸಮಾನಭಾವದಲ್ಲಿ ಪಾಶ್ಚಾತ್ಯರಂತೆಯೇ ಚಿಂತಿಸಿ. ಆದರೆ ಧಾರ್ಮಿಕ ಸಂಸ್ಕೃತಿ ಮತ್ತು ಸ್ವಭಾವಗಳಲ್ಲಿ ಮಾತ್ರ ಅತ್ಯಂತ ನಿಷ್ಠಾವಂತ ಹಿಂದುಗಳಾಗಿ ಬಾಳಿ. ನನ್ನನ್ನು ಯಾರು ಮೆಚ್ಚುತ್ತಾರೋ, ಬಿಡುತ್ತಾರೋ ಮುಖ್ಯವಲ್ಲ. ನಾನಂತೂ ಯುವಕರನ್ನು ಸಂಘಟಿಸಲೆಂದೇ ಹುಟ್ಟಿದವನು.

ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next