Advertisement

ಯುವ ಭಾರತದ ಶಕ್ತಿ ಸವಾಲುಗಳ ಮೆಟ್ಟಿ ನಿಲ್ಲಿ

12:52 AM Jan 12, 2021 | Team Udayavani |

ಭಾರತವೆಂದಾಕ್ಷಣ ಈಗ ಮೊದಲು ಬರುವ ಪದವೇ “ಯುವ ದೇಶ’ ಎನ್ನುವುದು. ಭಾರತದ ದಿವ್ಯಪುರುಷ ಸ್ವಾಮಿ ವಿವೇಕಾನಂದರ ಜನ್ಮದಿನವನ್ನೇ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತಿರುವುದು, ದೇಶವಾಸಿಗಳ ಚಿಂತನ ಕ್ರಮದಲ್ಲಿ ಅಗಾಧ ಪ್ರಭಾವ ಬೀರಿದ ಆ ಮಹಾನ್‌ ಆಧ್ಯಾತ್ಮಿಕ ನಾಯಕನಿಗೆ ಸಲ್ಲಿಸುವ ಗೌರವ. ಆದರೆ ಈ ದಿನವು ಕೇವಲ ಆಚರಣೆಗೆ ಸೀಮಿತವಾಗದೇ, ಸ್ವಾಮಿ ವಿವೇಕಾನಂದರು ತೋರಿಸಿದ ಜ್ಞಾನ ಮಾರ್ಗದಲ್ಲಿ ಸಾಗುವುದಕ್ಕೆ ಯುವಕರಷ್ಟೇ ಅಲ್ಲದೇ, ಎಲ್ಲರಿಗೂ ಪ್ರೇರಣೆ ನೀಡುವ ದಿನವಾಗಬೇಕು.

Advertisement

ಜನಸಂಖ್ಯೆಯ ಅನುಪಾತಕ್ಕೆ ಹೋಲಿಸಿದರೆ ಪ್ರಪಂಚದಲ್ಲೇ ಅತೀಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರ ಭಾರತ. ಇದೇ ನಮ್ಮ ಶಕ್ತಿಯೂ ಹೌದು. ಏಕೆಂದರೆ ದೇಶವೊಂದರ ಶ್ರೇಯೋಭಿವೃದ್ಧಿಯಲ್ಲಿ ಅಲ್ಲಿನ ಯುವ ಜನಾಂಗ ನಿರ್ವಹಿಸುವ ಪಾತ್ರ ಮಹತ್ತರವಾದದ್ದು. ಗಮನಾರ್ಹ ಸಂಗತಿಯೆಂದರೆ, ಕಲೆ, ತಂತ್ರಜ್ಞಾನ, ರಾಜಕೀಯ, ವಿಜ್ಞಾನ-ಸಂಶೋಧನೆ, ಕ್ರೀಡೆ ಸೇರಿದಂತೆ ದೇಶ-ವಿದೇಶಗಳಲ್ಲಿಂದು ವಿವಿಧ ಕ್ಷೇತ್ರ

ಗಳಲ್ಲಿ ಅಪಾರ ಕೊಡುಗೆ ನೀಡುತ್ತಿರುವ ಭಾರತೀಯ ಯುವ ದಂಡು ಬೃಹತ್ತಾಗಿದೆ. ಯುವಜನರ ಸಂಖ್ಯೆ ಅಧಿಕವಾಗಿರುವುದು ಎಷ್ಟು ದೊಡ್ಡ ಶಕ್ತಿಯೋ, ದೇಶವೊಂದಕ್ಕೆ ಈ ಸಂಗತಿ ಅಷ್ಟೇ ಸವಾಲುಗಳನ್ನೂ ಎದುರೊಡ್ಡುತ್ತಿರುತ್ತದೆ. ಭಾರತವೂ ಈ ಸವಾಲುಗಳಿಂದ ಹೊರತಾಗಿಲ್ಲ. ಮುಖ್ಯವಾಗಿ ನಿರುದ್ಯೋಗದ ಸಮಸ್ಯೆ ದೇಶದ ಯುವಜನಾಂಗವನ್ನು ಕಾಡುತ್ತಿದೆ. ಅದರಲ್ಲೂ ಕೋವಿಡ್‌ ಸಮಯದಲ್ಲಿ ಎದುರಾಗಿರುವ ಆರ್ಥಿಕ ಹಿಂಜರಿತ, ಉದ್ಯೋಗ ನಷ್ಟಗಳು ಅವರನ್ನು ಕಂಗೆಡುವಂತೆ ಮಾಡಿವೆ. ಜನಸಂಖ್ಯೆಗೆ ತಕ್ಕಂತೆ ಅಪಾರ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುವ ಸವಾಲೂ ಭಾರತದ ಮುಂದಿದೆ. 2019ರ ಯೂನಿಸೆಫ್ನ ವರದಿಯು ದೇಶದ ಶೇ. 47 ಭಾರತೀಯ ಯುವಕರಿಗೆ 2030ರ ವೇಳೆಗೆ ಅಗತ್ಯ ಉದ್ಯೋಗ ಪಡೆಯುವಂಥ ಶಿಕ್ಷಣ ಮತ್ತು ಕೌಶಲವಿಲ್ಲ ಎಂದು ಹೇಳಿತ್ತು. ಕೌಶಲ ರಹಿತ ಯುವಪಡೆಯನ್ನು ಹೊಂದಿರುವ ಸಮಾಜ ಸುಭದ್ರವಾಗಲು ಹೆಣಗಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿಯೇ  ಜ್ಞಾನಾಧಾರಿತ ಆರ್ಥಿಕತೆಯಾಗುವ ಗುರಿ ಹಾಕಿಕೊಂಡಿರುವ ಭಾರತವು, ಯುವಜನಾಂಗದ ಕೌಶಲಾಭಿವೃದ್ಧಿಗೆ ಅಗತ್ಯ ಹೆಜ್ಜೆಗಳನ್ನಿಡುತ್ತಿರುವುದು, ನವೋದ್ಯಮಗಳ ಸ್ಥಾಪನೆಗೆ ಪೂರಕ ಯೋಜನೆಗಳನ್ನು ರೂಪಿಸುತ್ತಿರುವುದು, ಡಿಜಿಟಲ್‌ ಕ್ಷೇತ್ರದ ಬೆಳವಣಿಗೆಗೆ ಅಪಾರ ಒತ್ತು ನೀಡಿರುವುದು, ನವ ರಾಷ್ಟ್ರೀಯ ಶಿಕ್ಷಣ ನೀತಿಯಂಥ ಮಹತ್ತರ ಹೆಜ್ಜೆಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಮುಂದಾಗಿರುವುದು ಶ್ಲಾಘನೀಯ ಹೆಜ್ಜೆ.

ಇವೆಲ್ಲ ಸರಕಾರದ ಮಟ್ಟದಲ್ಲಿ ಆಗುವಂಥ ಕೆಲಸಗಳು. ಇನ್ನೊಂದೆಡೆ, ಇದಕ್ಕೆಪೂರಕವಾಗಿ ಯುವ ಜನಾಂಗವು ಸರಿದಾರಿಯಲ್ಲಿ ನಡೆಯುವಂಥ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಾದದ್ದೂ ಅಷ್ಟೇ ಮುಖ್ಯ. ಭವಿಷ್ಯದ ಬಗೆಗಿನ ಆತಂಕ, ಸಾಂಕ್ರಾ ಮಿಕವು ಸೃಷ್ಟಿಸಿರುವ ಬಿಕ್ಕಟ್ಟು ಅವರಲ್ಲಿ ಅನಿಶ್ಚಿತತೆಯ ಭಾವನೆಯನ್ನು ಹುಟ್ಟಿಸಿರುತ್ತದೆ. ಆದರೆ ಈ ಒತ್ತಡದಿಂದ ಹೊರ ಬಂದು, ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ ಎಂಬ ದಿಟ್ಟತನ ಅವರಲ್ಲಿ ಬರಲೇಬೇಕು. “ಶ್ರದ್ಧೆಯಿದ್ದರೆ ಗೆದ್ದೆ’ ಎಂಬ ಸ್ವಾಮಿ ವಿವೇಕಾನಂದರ ಜೀವನದರ್ಶನ, ಏಳು, ಎದ್ದೇಳು, ಗುರಿ ಮುಟ್ಟುವವರೆಗೂ ನಿಲ್ಲದಿರು ಎಂಬ ಬಡಿದೆಬ್ಬಿಸುವ ಅವರ ಪ್ರೇರಣೆಯ ನುಡಿಗಳು ದಾರಿದೀಪವಾಗುವಂತಾಗಲಿ. ಯುವ ಭಾರತ ವಿಶ್ವ ನಕಾಶೆಯ ಮೇಲೆ ತನ್ನ ಹೆಗ್ಗುರುತು ಮೂಡಿಸುವಂತಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next