Advertisement

ಸ್ವಾಮಿ ಕೊರಗಜ್ಜ ಚಪ್ಪರಕ್ಕೆ ಬೆಂಕಿ ಪ್ರಕರಣ: ಐವರ ಮೇಲೆ ಪ್ರಕರಣ ದಾಖಲು; ಓರ್ವನ ಸೆರೆ

08:10 PM Jul 12, 2023 | Team Udayavani |

ಬೆಳ್ತಂಗಡಿ: ವೇಣೂರಿನ ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ಕೊರಗಕಲ್ಲು ಸ್ವಾಮಿ ಕೊರಗಜ್ಜನ ಗುಡಿಯ ಚಪ್ಪರಕ್ಕೆ ಬೆಂಕಿ ಕೊಟ್ಟು ಆರಾಧನಾ ಕೇಂದ್ರಕ್ಕೆ ಹಾನಿ ಉಂಟು ಮಾಡಿದ ಘಟನೆ ಜು. 11ರಂದು ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ವೇಣೂರು ಪೊಲೀಸರು ಐವರ ಮೇಲೆ ಪ್ರಕರಣ ದಾಖಲಿಸಿ ಓರ್ವನನ್ನು ಬಂಧಿಸಿದ್ದಾರೆ.

Advertisement

ಬಜಿರೆ ಗ್ರಾಮದ ಬಾಡಾರು ನಿವಾಸಿ ಹರೀಶ್‌ ಪೂಜಾರಿ (48) ಯನ್ನು ಬಂಧಿಸಿದ್ದು, ಉಳಿದಂತೆ ಡಾ| ರಾಜೇಶ್‌, ರಮೇಶ್‌ , ಓಂ ಪ್ರಸಾದ್‌, ಪ್ರಶಾಂತ್‌ ಬಂಟ್ವಾಳ ಅವರ ವಿರುದ್ಧ ದೂರು ದಾಖಲಾಗಿದೆ.

ಘಟನೆ ವಿವರ
ಬಾಡಾರು ಕೊರಗಕಲ್ಲು ಶ್ರೀ ಕೊರಗಜ್ಜ ಸೇವಾ ಟ್ರಸ್ಟ್‌ನಿಂದ ಸರಕಾರಿ ಜಮೀನಿನಲ್ಲಿದ್ದ ಕೊರಗಜ್ಜ ಕಟ್ಟೆಯನ್ನು ಆರೋಪಿತರ ಸಹಿತ ಊರಿನವರು ಸೇರಿ ಆರಾಧಿಸಿಕೊಂಡು ಬರುತ್ತಿದ್ದರು. ಬಂಧಿತ ಹರೀಶ್‌ ಪೂಜಾರಿ ಕಟ್ಟೆಗೆ ಪೂಜೆ ನೆರವೇರಿಸುತ್ತಿದ್ದ. ಆದರೆ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮೊಳಗೆ ತಕರಾರು ಎದ್ದಿತ್ತು. ಆರೋಪಿತರು ವಿವಾದಿತ ಕೊರಗಜ್ಜ ಕಟ್ಟೆಯನ್ನು ಕೆಡವಿ ಹೊಸದಾಗಿ ಕೆಸರು ಕಲ್ಲು ಹಾಕಲು ಯತ್ನಿಸಿದ್ದರು.

ಆ ಸಮಯ ಟ್ರಸ್ಟ್‌ನ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಮತ್ತು ಇತರ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಟ್ರಸ್ಟ್‌ನವರು ಹಳೇ ಕೊರಗಜ್ಜ ಕಟ್ಟೆಯನ್ನೇ ಚಪ್ಪರ ಹಾಕಿ ನಂಬಿಕೊಂಡು ಬರುತ್ತಿದ್ದರು.

ಈ ವಿಚಾರವಾಗಿ ಜು.11ರಂದು ಬೆಳಗ್ಗೆ 10.30ರ ಸುಮಾರಿಗೆ ಚಪ್ಪರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತತ್‌ಕ್ಷಣ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಮೇಲ್ನೋಟಕ್ಕೆ ಹಣತೆ ಬೆಂಕಿ ತಾಗಿ ಆಕಸ್ಮಿಕದಂತೆ ಕಂಡುಬಂದರೂ, ಆರೋಪಿತ ಹರೀಶ್‌ ಪೂಜಾರಿ ಇತರರ ಕುಮ್ಮಕ್ಕಿನಿಂದ ಚಪ್ಪರಕ್ಕೆ ಬೆಂಕಿ ಕೊಟ್ಟು ಆರಾಧನಾ ಕೇಂದ್ರಕ್ಕೆ ಹಾನಿ ಉಂಟು ಮಾಡಿ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷರಾಗಿರುವ ಪ್ರದೀಪ್‌ ಕುಮಾರ್‌ ಹೆಗ್ಡೆ ವೇಣೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿ ಸ್ಥಳಕ್ಕೆ ಡಿವೈಎಸ್ಪಿ ಗಾನಾ ಕುಮಾರ್‌, ಬೆಳ್ತಂಗಡಿ ತಹಶೀಲ್ದಾರ್‌ ಸುರೇಶ್‌ ಕುಮಾರ್‌, ಎಸ್‌.ಐ. ಸೌಮ್ಯಾ ಆಗಮಿಸಿ ಪರಿಶೀಲನೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್‌ ಪೂಜಾರಿಯನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಾರ್ವಜನಿಕರಿಗೆ ಪ್ರವೇಶ ನಿಷೇಧ
ಘಟನೆಯು ಗುಡಿಗೆ ಸಂಬಂಧಿಸಿದ ಜಾಗದ ವಿವಾದದಿಂದ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮರು ಸರ್ವೇ ನಡೆಸುವ ವರೆಗೆ ವಿವಾದಿತ ಪ್ರದೇಶಕ್ಕೆ ಯಾರಿಗೂ ಪ್ರವೇಶ ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next