Advertisement

ಸ್ವಾಭಿಮಾನಿ ಕನ್ನಡಿಗರ ಪಕ್ಷ ಜೆಡಿಎಸ್ ಎಂದಿಗೂ ವಿಲೀನದ ಆಲೋಚನೆ ಮಾಡುವುದಿಲ್ಲ: HDK

08:16 PM Dec 20, 2020 | Mithun PG |

ಬೆಂಗಳೂರು:  ಸ್ವಾಭಿಮಾನಿ ಕನ್ನಡಿಗರ ಪಕ್ಷ ಜೆಡಿಎಸ್ ಎಂದಿಗೂ ವಿಲೀನದ ಆಲೋಚನೆ ಮಾಡುವುದಿಲ್ಲ. ಜನರ ಗಟ್ಟಿ ಧ್ವನಿಯಾದ ಜೆಡಿಎಸ್‌ ಅಂತಹ ಅವಿವೇಕತನ ಪ್ರದರ್ಶನ ಮಾಡುವುದಿಲ್ಲ. ಅಗತ್ಯವಿದ್ದಾಗ ವಿಷಯಾಧಾರಿತವಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ವಿಶ್ವಾಸಪೂರ್ವಕವಾಗಿ ನಡೆಯಬಹುದಷ್ಟೆ. ವಿಲೀನದಂಥ ಕಪೋಲಕಲ್ಪಿತ ಸುದ್ದಿಗಳಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್, ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಜೆಡಿಎಸ್ ಬಿಜಿಪಿಯೊಂದಿಗೆ ವಿಲೀನವಾಗುತ್ತಿದೆ ಎಂಬ ಸುದ್ದಿಗೆ ಟ್ವೀಟ್ ಮೂಲಕ ಉತ್ತರಿಸಿದ ಅವರು,  ಜೆಡಿಎಸ್ ಬಿಜೆಪಿಯ ‘ಬಿ ಟೀಂ’ ಎಂದು ಟೀಕಿಸಿದ್ದ  ಕಾಂಗ್ರೆಸ್ ಹೈಕಮಾಂಡ್ ನಮ್ಮ ಮನೆಬಾಗಿಲಿಗೆ ಬಂದು ಕಾಂಗ್ರೆಸ್ ಜೊತೆ ಸರ್ಕಾರ ರಚಿಸುವ ಆಹ್ವಾನ  ನೀಡಿತ್ತು. ನಾವೇನಾದರೂ ಬಿಜೆಪಿಯ ‘ಬಿ ಟೀಂ’ ಆಗಿದ್ದರೆ, ಕಾಂಗ್ರೆಸ್‌ನೊಂದಿಗೆ ಸರ್ಕಾರವನ್ನೇ ಮಾಡುತ್ತಿರಲಿಲ್ಲ. ಅವರು ಹೇಳಿದಂತೆ ಒಳಒಪ್ಪಂದವೇನೂ ಇಲ್ಲ. ವಿಷಯಾಧಾರಿತ ಹೊಂದಾಣಿಕೆಯಷ್ಟೇ ಸಾಧ್ಯ ಎಂದರು.

‘ರೈತರ ಸಾಲಮನ್ನಾ’, ‘ಬಡವರ ಬಂಧು’ ಇಂತಹ ಕಾರ್ಯಕ್ರಮಗಳನ್ನು ನೀಡಿದ, ಶಿಸ್ತುಬದ್ಧ ಆಡಳಿತ ನಡೆಸಿದ, ದೇವೇಗೌಡರ ಆಶಯದಂತೆ ನಡೆಯುತ್ತಿರುವ ಜೆಡಿಎಸ್‌ ಮೇಲೆ ಜನರ ವಿಶ್ವಾಸವಿದೆ. ಮತ್ತೊಂದು ಪಕ್ಷದೊಂದಿಗೆ ವಿಲೀನ ಮಾಡಿಕೊಳ್ಳುವ ಮೂಲಕ ಸ್ವಯಂ ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ಬಂದಿಲ್ಲ, ಬರುವುದೂ ಇಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ.

ಇದನ್ನೂ ಓದಿ: ಕಾಡುಕುರಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಗ್ರಾ.ಪಂ ಚುನಾವಣಾ ಅಭ್ಯರ್ಥಿಗಳು

“ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ”ಎಂಬ  ಬಸವಣ್ಣನವರ ವಚನವನ್ನು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next