ಶಿಡ್ಲಘಟ್ಟ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯ ರಾಷ್ಟ್ರ ಹಾಗೂ ರಾಜ್ಯಮಟ್ಟದ ಶ್ರೇಣಿ ಪಟ್ಟಿ ಬಿಡುಗಡೆಯಾಗಿದ್ದು, ಚಿಕ್ಕಬಳ್ಳಾಪುರ ನಗರ ರಾಜ್ಯ ಮಟ್ಟದಲ್ಲಿ 9ನೇ ಸ್ಥಾನ ಗಳಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತರಲು ಜಿಲ್ಲಾಧಿಕಾರಿ ಆರ್.ಲತಾ ದೃಢಸಂಕಲ್ಪ ಮಾಡಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಚಿಕ್ಕಬಳ್ಳಾಪುರ ನಗರಸಭೆ ಸೌತ್‌ಝೋನ್ ಸ್ಥಾನದಲ್ಲಿ 254 ನೇ ಸ್ಥಾನದಿಂದ 55ನೇ ಸ್ಥಾನ ಪಡೆದು ರಾಜ್ಯ ಮಟ್ಟದಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಕಳೆದ 5 ವರ್ಷಗಳಿಂದ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಈ ಬಾರಿ ಸಮೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ನಗರಸಭೆ 9ನೇ ಸ್ಥಾನ ಗಳಿಸಿದೆ.
ಸ್ವಚ್ಛತೆ ಕಾಪಾಡಲು ಸೂಚನೆ: ಜಿಲ್ಲಾಧಿಕಾರಿ ಆರ್.ಲತಾ ಅವರು ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಸ್ವತ್ಛತೆ ಮತ್ತು ಸೌಂದರ್ಯ ಕಾಪಾಡಲು ಆದ್ಯತೆ ನೀಡುತ್ತಿದ್ದು, ನಗರಸಭೆಯ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ನಾಗರಿಕರ ಅಹವಾಲು ಆಲಿಸಿ ಎಲ್ಲಾ ವಾರ್ಡ್ ಗಳಲ್ಲಿ ಕಸ ವಿಲೇವಾರಿ ಸೂಕ್ತ ರೀತಿಯಲ್ಲಿ ಮಾಡಬೇಕೆಂದು ನಗರ ಸಭೆಯ ಅಧಿಕಾರಿಗಳು ಮತ್ತು ಪೌರಕಾರ್ಮಿಕರಿಗೆ ಸೂಚನೆ ನೀಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಚಿಕ್ಕಬಳ್ಳಾಪುರ ನಗರಸಭೆಯನ್ನು ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಪ್ರಥಮ ಸ್ಥಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಪಪಂ ವಿಭಾಗದಲ್ಲಿ ಗುಡಿಬಂಡೆ 13 ನೇ ರ್‍ಯಾಂಕ್ ಪಡೆದಿದೆ. ಇನ್ನುಳಿದ ತಾಲೂಕುಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಸ್ವತ್ಛತೆ ಕಾಪಾಡಲು ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ.
–ರೇಣುಕಾ, ಯೋಜನಾ ನಿರ್ದೇಶಕಿ, ನಗರಾಭಿವೃದ್ಧಿ ಕೋಶ
ಬಳ್ಳಾಪುರ ನಗರದಲ್ಲಿ ಈಗಾಗಲೇ 400-500 ಬ್ಲಾಕ್‌ಸ್ಪಾಟ್‌ಗಳನ್ನು ತೆರವುಗೊಳಿಸಿದ್ದೇವೆ. ಎರೆಹುಳ ಗೊಬ್ಬರ ತಯಾರಿಕೆ ಮಾಡುತ್ತಿದ್ದೇವೆ. ನಗರವನ್ನು ಪ್ರಥಮ ಸ್ಥಾನ ತರುವುದೇ ಮುಖ್ಯ ಗುರಿ.
–ಡಿ.ಲೋಹಿತ್, ಆಯುಕ್ತರು ಚಿಕ್ಕಬಳ್ಳಾಪುರ ನಗರಸಭೆ