Advertisement

ಸ್ವಚ್ಛಮೇವ ಜಯತೆ ಆಂದೋಲನಕ್ಕೆ ಚಾಲನೆ

08:57 AM Jun 12, 2019 | Suhan S |

ಹುಬ್ಬಳ್ಳಿ: ಉತ್ತಮ ಪರಿಸರಕ್ಕಾಗಿ ಪ್ಲಾಸ್ಟಿಕ್‌ ಬಳಕೆ ನಿಲ್ಲಬೇಕು. ಪ್ರತಿಯೊಬ್ಬರೂ ಒಂದು ಸಸಿ ನೆಟ್ಟು ಪೋಷಣೆ ಮಾಡಬೇಕು ಎಂದು ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಹೇಳಿದರು.

Advertisement

ಅಂಚಟಗೇರಿ ಗ್ರಾಮದಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಆಯೋಜಿಸಿದ್ದ ‘ಸ್ವಚ್ಛ ಮೇವ ಜಯತೆ-2019’ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಛತೆ ಹಾಗೂ ಘನ ತ್ಯಾಜ್ಯ ನಿರ್ವಹಣೆ ನಗರ ಪ್ರದೇಶಗಳಿಗೆ ಮಾತ್ರ ಎನ್ನುವ ಕಲ್ಪನೆಯಿತ್ತು. ಆದರೆ ಇಂದು ಗ್ರಾಮೀಣ ಭಾಗದಲ್ಲೂ ಇದರ ಅಗತ್ಯವಿದೆ. ಪ್ರಮುಖವಾಗಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸುವ ದೊಡ್ಡ ಸವಾಲಿದೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕುರಿತು ಸ್ವಚ್ಛಮೇವ ಜಯತೆ ಆಂದೋಲನದ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.

ಯೋಜನೆ ಸಾಕಾರಕ್ಕೆ ಗ್ರಾಪಂ ಸಿಬ್ಬಂದಿ, ಜನಪ್ರತಿನಿಧಿಗಳು ಹಾಗೂ ಜನರು ಸಂಪೂರ್ಣವಾಗಿ ಸಹಕಾರ ನೀಡಬೇಕು. ಉತ್ತಮ ಪರಿಸರ ಹೊಂದುವುದರಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ. ಮುಂದಿನ 2-3 ವರ್ಷಗಳಲ್ಲಿ ಜಿಲ್ಲೆಯ 144 ಗ್ರಾಪಂಗಳಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಮೂಲಕ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವ ಕೆಲಸ ಆಗುತ್ತದೆ. ಪ್ರತಿ ಗ್ರಾಮದಲ್ಲಿ ಸುಮಾರು 500 ಸಸಿ ನೆಡಲು ಉದ್ದೇಶಿಸಲಾಗಿದೆ. ಸರಕಾರಿ ಕಚೇರಿಗಳನ್ನು ಕೇಂದ್ರೀಕರಿಸಿ ಈ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಮಾತನಾಡಿ, ಗ್ರಾಮಗಳಲ್ಲಿ ಶೌಚಾಲಯ ವ್ಯವಸ್ಥೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರಬೇಕು. ಪ್ರತಿಯೊಂದು ಮನೆಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಶೌಚಾಲಯಗಳನ್ನು ಬಳಸುವ ಮೂಲಕ ಜಿಲ್ಲೆ ಬಯಲು ಶೌಚ ಮುಕ್ತವಾಗಬೇಕು. ಗ್ರಾಮದಲ್ಲಿ ಸಾಕಷ್ಟು ಭೂಮಿ ಲಭ್ಯತೆಯಿದ್ದು, ಉತ್ತಮ ಸಸಿಗಳನ್ನು ನೆಟ್ಟು ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ನೀಡುವ ಕೆಲಸ ಆಗಬೇಕು ಎಂದರು.

ಗ್ರಾಪಂ ಅಧ್ಯಕ್ಷ ಬಸವರಾಜ ಬಿಡ್ನಾಳ ಮಾತನಾಡಿ, ನಮ್ಮ ಗ್ರಾಮದಲ್ಲಿ ಹಿಂದೆ 4 ಜನ ಕ್ಯಾನ್ಸರ್‌ ಪೀಡಿತರು ಇದ್ದರು. ಇದೀಗ ಈ ಸಂಖ್ಯೆ 9ಕ್ಕೇರಿದೆ. ಮಿತಿಮೀರಿದ ಪ್ಲಾಸ್ಟಿಕ್‌ ಬಳಕೆ ಇದಕ್ಕೆ ಕಾರಣವಾಗಿದೆ. ಇದರಿಂದ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವಂತೆ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.

Advertisement

ಶಾಸಕಿ ಕುಸುಮಾವತಿ ಶಿವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿದರು. ತಾಪಂ ಅಧ್ಯಕ್ಷೆ ಚನ್ನಮ್ಮ ಗೊರ್ಲ, ಉಪಾಧ್ಯಕ್ಷ ಗುರುಪಾದಪ್ಪ ಕಮಡೊಳ್ಳಿ, ಗಂಗಾಧರ ಕಂದಕೂರ, ಎ.ಎಂ. ಪಾಟೀಲ, ಗಿರೀಶ ಕುರಿ, ಗಜಾನನ ಮನ್ನಿಕೇರಿ, ಎಸ್‌.ಎಂ. ಹುಡೇದಮನಿ, ರುದ್ರಪ್ಪ ಬಿಡ್ನಾಳ, ಬಸಣ್ಣ ಗಾಣಿಗೇರ, ನೀಲಮ್ಮ ಮೇಟಿ ಇನ್ನಿತರರಿದ್ದರು. ಗ್ರಾಮದಲ್ಲಿ ಶೌಚಾಲಯ, ಘನ ತ್ಯಾಜ್ಯಾ ನಿರ್ವಹಣೆ ಕುರಿತ ಸ್ವಚ್ಛತಾ ರಥ ಮೆರವಣಿಗೆ ನಡೆಯಿತು. ನಂತರ ಮುರಾರ್ಜಿ ವಸತಿ ಶಾಲೆ ಆವರಣದಲ್ಲಿ ಅತಿಥಿಗಳಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ವೇದಿಕೆ ಕಾರ್ಯಕ್ರಮದಲ್ಲಿ ಸ್ವಚ್ಛತಾ ಭಿತ್ತಿಪತ್ರ ಹಾಗೂ ಸ್ವಚ್ಛತೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next