Advertisement

11ರಿಂದ ಸ್ವಚ್ಛಮೇವ ಜಯತೇ ಆಂದೋಲನ

01:41 PM Jun 09, 2019 | Suhan S |

ಮಂಡ್ಯ: ವಿಶ್ವ ಪರಿಸರ ದಿನಾಚರಣೆ ಭಾಗವಾಗಿ ಸ್ವಚ್ಛ ಮೇವ ಜಯತೇ ಜನಾಂದೋಲನ ಕಾರ್ಯಕ್ರಮದಡಿ ಜೂ.11ರಂದು ಜಿಲ್ಲಾದ್ಯಂತ ಸುಮಾರು 1.25 ಲಕ್ಷ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ ಎಂದು ಜಿಪಂ ಪ್ರಭಾರ ಸಿಇಒ ಎನ್‌.ಡಿ.ಪ್ರಕಾಶ್‌ ಹೇಳಿದರು.

Advertisement

ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶನಿವಾರ ಸ್ವಚ್ಛ ಮೇವ ಜಯತೇ ಜನಾಂದೋಲನ ಕಾರ್ಯಕ್ರಮ ಆಯೋಜನೆ ಕುರಿತು ಅರಣ್ಯ, ತೋಟಗಾರಿಕೆ ಅಧಿಕಾರಿಗಳು ಹಾಗೂ ಇಒ, ಪಿಡಿಒಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದೆ ಅವರು, ಜನಸಮುದಾಯಗಳ ಸಹಭಾಗಿತ್ವದಲ್ಲಿ ಸ್ವಚ್ಛತೆ, ನೀರು ಮತ್ತು ಹಸಿರು ಕುರಿತು ಜನಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿರುವ ಈ ಆಂದೋಲನವನ್ನು ಹೆಚ್ಚು ಕ್ರಿಯಾತ್ಮಕವಾಗಿ ಸಂಘಟಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

ಪ್ರತಿ ಗ್ರಾಪಂ 500 ಸಸಿ ನೆಡಬೇಕು: ಜೂ.11ರಂದು ಸಾರ್ವಜನಿಕರು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿ ಗ್ರಾಮ ಪಂಚಾಯತಿ ವತಿಯಿಂದ ಕನಿಷ್ಠ 500 ಸಸಿ ನೆಡಲು ಉದ್ದೇಶಿಸಲಾಗಿದೆ. ಸರ್ಕಾರಿ ಶಾಲೆ, ವಸತಿ ಶಾಲೆ, ವಸತಿ ನಿಲಯ, ಸರ್ಕಾರಿ ಕಚೇರಿ ಆವರಣ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡ ನೆಡಲು ಹಾಗೂ ಅವುಗಳನ್ನು ಸಂರಕ್ಷಿಸಲು ಪೂರಕ ವಾತಾವರಣ ಸೃಷ್ಟಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

2019 ಜಲವರ್ಷ ಘೋಷಣೆ: ಈ ಆಂದೋಲನ ಇಡೀ ವರ್ಷ ನಡೆಯಲಿದ್ದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 2 ಸಾವಿರ ಸಸಿ ನೆಟ್ಟು ಪೋಷಿಸಬೇಕು. ಸರ್ಕಾರ 2019ನ್ನು ಜಲವರ್ಷ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಚೆಕ್‌ಡ್ಯಾಂಗಳ ನಿರ್ಮಾಣ, ಕಟ್ಟೆ, ಕಲ್ಯಾಣಿ, ಗೋಕಟ್ಟೆಗಳನ್ನು ಪುನರುಜ್ಜೀವನ ಗೊಳಿಸುವ ಅಭಿವೃದ್ಧಿ ಕೆಲಸಗಳನ್ನೂ ಅನುಷ್ಠಾನಗೊಳಿಸಬೇಕು ಎಂದ ಅವರು, ಸ್ವಚ್ಛಮೇವ ಜಯತೇ ಆಂದೋಲನ ಜೂ.11ರಿಂದ ಜುಲೈ 10ರವರೆಗೆ ನಡೆದರೆ, ಜಲಾಮೃತ ಕಾರ್ಯಕ್ರಮ ಇಡೀ ವರ್ಷ ನಡೆಯಲಿದೆ. ಸಭೆಯಲ್ಲಿ ತೋಟಗಾರಿಕೆ ಉಪ ನಿರ್ದೇಶಕ ರಾಜು, ಜಿಲ್ಲಾ ಅರಣ್ಯಾಧಿಕಾರಿ (ಸಾಮಾಜಿಕ ಅರಣ್ಯ ವಿಭಾಗ) ವೆಂಕಟೇಶ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಮೂರ್ತಿ ಮೊದಲಾದವರು ಹಾಜರಿದ್ದರು.

11ಕ್ಕೆ ಕೀಲಾರದಲ್ಲಿ ಚಾಲನೆ:

ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಸ್ವಚ್ಛ ಮೇವ ಜಯತೇ ಜನಾಂದೋಲನ ಕುರಿತ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಜೂ.11ರಂದು ಬೆಳಗ್ಗೆ 11 ಗಂಟೆಗೆ ಸಣ್ಣ ನೀರಾವರಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಾಜು ಚಾಲನೆ ನೀಡಲಿದ್ದಾರೆ. ಕೀಲಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಮಾರಂಭ ನಡೆಯಲಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್‌ ಅಧ್ಯಕ್ಷತೆ ವಹಿಸುವರು.
ಉದ್ದೇಶಿತ ಚಟುವಟಿಕೆಗಳು:

ಗಿಡ ನೆಡುವ ಕಾರ್ಯಕ್ರಮ, ವಾಕಥಾನ್‌, ಜಾಥಾ ಆಯೋಜನೆ, ಪೋಸ್ಟರ್‌ ಮತ್ತು ಭಿತ್ತಿಪತ್ರ ಬಿಡುಗಡೆ, ಪ್ರತಿಜ್ಞಾ ವಿಧಿ ಸ್ವೀಕಾರ, ಸ್ವಚ್ಛತೆ ಕುರಿತ ಜಾಗೃತಿ ರಥಕ್ಕೆ ಚಾಲನೆ, ಹಸಿರೀಕರಣ ಮತ್ತು ನೀರಿನ ಪ್ರಜ್ಞಾವಂತಿಕೆ ಬಳಕೆ ಕುರಿತು ಅರಿವು, ಸ್ವಚ್ಛತೆ ಮತ್ತು ಆರೋಗ್ಯಕ್ಕಾಗಿ ಶ್ರಮದಾನ ಕಾರ್ಯಕ್ರಮಗಳು ವರ್ಷವಿಡೀ ನಡೆಯಲಿವೆ.
Advertisement

Udayavani is now on Telegram. Click here to join our channel and stay updated with the latest news.

Next