ಕಲಬುರಗಿ: ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣೆ ನಗರಗಳ ಪಟ್ಟಿಯಲ್ಲಿ ಮಹಾನಗರ ಪಾಲಿಕೆಯ ಸ್ಥಾನ ತುಸು ಏರಿಕೆ ಕಂಡಿದ್ದು, ಪಾಲಿಕೆ ಅಧಿಕಾರಿಗಳಿಗೆ ಕೊಂಚ ನೆಮ್ಮದಿ ತರಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಸರ್ಕಾರ ಸ್ವಚ್ಛ ನಗರಗಳನ್ನು ಪಟ್ಟಿ ಮಾಡಿ ರ್‍ಯಾಂಕಿಂಗ್ ನೀಡುತ್ತಿದೆ. ಕಳೆದ ದೇಶದ ರ್‍ಯಾಂಕಿಂಗ್ ಪಟ್ಟಿಯಲ್ಲಿ 366ನೇ ಸ್ಥಾನ ಪಡೆದಿದ್ದ ಇಲ್ಲಿನ ಈ ವರ್ಷ ಮಹಾನಗರ ಪಾಲಿಕೆ ಸ್ವಲ್ಪ ಸುಧಾರಣೆ ಕಂಡಿದೆ. ಈ ಬಾರಿ 312ನೇ ಸ್ಥಾನ ಪಾಲಿಕೆಗೆ ದಕ್ಕಿದೆ. ದೇಶಾದ್ಯಂತ 3ರಿಂದ 10 ಲಕ್ಷ ಜನ ಸಂಖ್ಯೆ ಹೊಂದಿರುವ ಒಟ್ಟು 382 ನಗರ ಪೈಕಿ ಕಲಬುರಗಿ ಪಾಲಿಕೆ 312ನೇ ಸ್ಥಾನ ಪಡೆದಿದೆ. ರಾಜ್ಯದ 25 ಪಾಲಿಕೆಗಳ ಪಟ್ಟಿಯಲ್ಲಿ 20ನೇ ಸ್ಥಾನದಲ್ಲಿ ಇದೆ. ರಾಷ್ಟ್ರ ಮತ್ತು ರಾಜ್ಯಮಟ್ಟ ಎರಡರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೂ ಹೋಲಿಕೆ ಮಾಡಿದರೂ ವಿಭಾಗೀಯ ಕೇಂದ್ರವಾದ ಕಲಬುರಗಿಯದ್ದು ಕಳಪೆ ಸಾಧನೆ. ಆದರೆ, ರ್‍ಯಾಂಕಿಂಗ್‌ನಲ್ಲಿ ಸುಧಾರಣೆ ಕಂಡಿರುವುದೇ ಸಮಾಧಾನದ ಸಂಗತಿ. ಬೀದರ ಪಾಲಿಕೆ ರಾಷ್ಟ್ರ ಮಟ್ಟದಲ್ಲಿ 213 ಮತ್ತು ರಾಜ್ಯದಲ್ಲಿ 11ನೇ ಸ್ಥಾನ ಗಳಿಸಿದೆ. ಬಳ್ಳಾರಿ ಪಾಲಿಕೆ ರಾಷ್ಟ್ರ ದಲ್ಲಿ 219 ಹಾಗೂ ರಾಜ್ಯ ಮಟ್ಟದಲ್ಲಿ 16ನೇ ಸ್ಥಾನ ಪಡೆದುಕೊಂಡಿದೆ.
ಹೇಗೆ ಸಿಗುತ್ತದೆ ರ್‍ಯಾಂಕ್?: ಸ್ವಚ್ಛ ಸರ್ವೇಕ್ಷಣೆಗೆ ಪ್ರಮುಖವಾದ ನಾಲ್ಕು ಮಾನದಂಡಗಳನ್ನು ಪಾಲಿಸಲಾಗುತ್ತದೆ. ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮತ್ತು ಬಯಲು ಮುಕ್ತ ಶೌಚಾಲಯ ಪ್ರಮುಖವಾದ ಪಾತ್ರ ವಹಿಸುತ್ತದೆ. ನಗರದ ಸ್ವಚ್ಛತೆ ಬಗ್ಗೆ ಪಾಲಿಕೆ ಅಧಿಕಾರಿಗಳಿಂದ ಕೇಂದ್ರದ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಾರೆ. ಯಾರಿಗೂ ಮಾಹಿತಿ ನೀಡದೆ ಖುದ್ದು ನಗರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಾರೆ. ಜತೆಗೆ ಸಾರ್ವಜನಿಕರ ಅಭಿಪ್ರಾಯ ಸಹ ಸಂಗ್ರಹಿಸಲಾಗುತ್ತದೆ. ಪ್ರಸಕ್ತ ಸರ್ವೆಯಲ್ಲಿ 606 ಜನರು ಪಾಲ್ಗೊಂಡು ನಗರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪಾಲಿಕೆ ಹಿನ್ನಡೆಗೆ ಕಾರಣವೇನು?: ಕಲಬುರಗಿ ಪಾಲಿಕೆ ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನವಾಗಿದೆ. ಆದರೆ, ಸ್ವತ್ಛತೆ ವಿಷಯದಲ್ಲಿ ತೀರಾ ಹಿಂದೆ ಉಳಿದಿದೆ. ಒಣ ಕಸ ಮತ್ತು ಹಸಿ ಕಸ ವಿಂಗಡಣೆ ಸರಿಯಾಗಿ ಆಗುತ್ತಿಲ್ಲ. ಹಲವು ಬಡಾವಣೆಗಳಲ್ಲಿ ಇನ್ನೂ ಬಯಲು ಶೌಚಾಲಯ ಇದೆ. ಈ ಎರಡೂ ಸುಧಾರಣೆ ಕಂಡಲ್ಲಿ 100ರೊಳಗೆ ಕಲಬುರಗಿ ಸ್ಥಾನ ಪಡೆಯುವ ನಿರೀಕ್ಷೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ಗುರುವಾರ ಬಿಡುಗಡೆಗೊಂಡ ಸ್ವಚ್ಛ ಸರ್ವೇಕ್ಷಣೆ ಪಟ್ಟಿಯಲ್ಲಿ ಕಲಬುರಗಿ ಪಾಲಿಕೆ ತುಸು ಏರಿಕೆ ಕಂಡಿದೆ. ಈ ಬಾರಿ 312ನೇ ರ್‍ಯಾಂಕ್ ಬಂದಿದ್ದು, ಕಳೆದ ವರ್ಷ 366ನೇ ಸ್ಥಾನದಲ್ಲಿತ್ತು. ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಹಾಗೂ ಬಯಲು ಮುಕ್ತ ಶೌಚಾಲಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ತಾರ್‌ಫೈಲ್ ಬಡಾವಣೆಯಲ್ಲಿ 500 ಶೌಚಾಲಯಗಳನ್ನು ಕಟ್ಟಿಸಲಾಗಿದೆ. ಮುಂದಿನ ದಿನಗಳನ್ನು ಮತ್ತಷ್ಟು ಸುಧಾರಣೆಗೆ ಒತ್ತು ನೀಡಲಾಗುತ್ತದೆ.-
ರಾಹುಲ್ ಪಾಂಡ್ವೆ, ಆಯುಕ್ತರು, ಮಹಾನಗರ ಪಾಲಿಕ
-ವಿಶೇಷ ವರದಿ