Advertisement

ಸ್ವಚ್ಛ ಶಿರ್ವ-ನಮ್ಮ ಶಿರ್ವ ಅಭಿಯಾನ: ಕಸ ತ್ಯಾಜ್ಯ ನಿರ್ಮೂಲನೆಗೆ ಪಣತೊಟ್ಟ ಗ್ರಾ.ಪಂ.ಅಧ್ಯಕ್ಷ

04:21 PM Oct 20, 2021 | Team Udayavani |

ಶಿರ್ವ: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು ,ಶಿರ್ವಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ಸ್ಥಳ ,ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಕಸ ತುಂಬಿರುವ ದೃಶ್ಯ ಸಾಮಾನ್ಯವಾಗಿದ್ದು ಸಾರ್ವತ್ರಿಕ ಸಮಸ್ಯೆಯಾಗಿದೆ. ಈ ಸಂಬಂಧ ಜನಜಾಗೃತಿಗಾಗಿ ಸ್ವಚ್ಛ ಶಿರ್ವ-ನಮ್ಮ ಶಿರ್ವ ಕಾರ್ಯಕ್ರಮದಡಿ ಗ್ರಾ.ಪಂ. ಎಸ್‌ಎಲ್‌ಆರ್‌ಎಂ ಘಟಕದ ಸಿಬಂದಿಗಳೊಂದಿಗೆ ಸೇರಿ ಸ್ವಚ್ಛತೆ ಕಾರ್ಯ ನಡೆಸುವ ಮೂಲಕ ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌. ಪಾಟ್ಕರ್‌ ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ.

Advertisement

ವಾಟ್ಸಪ್‌ ಮೂಲಕ ಸಾರ್ವಜನಿಕ ಸ್ಥಳ,ರಸ್ತೆ ಬದಿ,ಬಸ್ಸು ತಂಗುದಾಣ,ಶಾಲೆ ಹಾಗೂ ಅಂಗನವಾಡಿ ಪರಿಸರದಲ್ಲಿ ಕಸ ತ್ಯಾಜ್ಯ ಕಂಡುಬಂದಲ್ಲಿ ಗ್ರಾ.ಪಂ.ಗೆ ಪೋಟೋ ಸಹಿತ ಮಾಹಿತಿ ನೀಡಲು ಕೋರಲಾಗಿದ್ದು ಗ್ರಾ.ಪಂ. ವ್ಯಾಪ್ತಿಯ ಕಸದ ರಾಶಿ ವಿಲೇವಾರಿ ಮಾಡಲಾಗುತ್ತಿದೆ. ಕಸ ವಿಲೇವಾರಿ ವಾಹನದ ಮೂಲಕ ಕಸ ನಿರ್ಮೂಲನೆ ಜಾಗೃತಿ ಸಂದೇಶ ನೀಡಲಾಗುತ್ತಿದ್ದು,ಸಾರ್ವಜನಿಕ ಸ್ಥಳಗಳಲ್ಲಿ ಕಸ, ತ್ಯಾಜ್ಯ ಬಿಸಾಡುವವರನ್ನು ಗುರುತಿಸಿ ಹಿಡಿದು ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕವಾಗಿ ಉಗುಳುವವರು ಕಂಡುಬಂದಲ್ಲಿ ಅವರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿಯಂತ್ರಣ ಕಾಯ್ದೆಯಡಿ ದಂಡವನ್ನೂ ವಿಧಿಸಲಾಗುತ್ತಿದೆ.

ಕಸ ಹೆಕ್ಕುವ ಸ್ಪರ್ಧೆ:

ಸ್ವಚ್ಛತೆಯ ಪರಿಕಲ್ಪನೆಯೊಂದಿಗೆ ತಾನು ಪ್ರತಿನಿಧಿಸುತ್ತಿದ್ದ ಬಂಟಕಲ್ಲು ವಾರ್ಡ್‌ನಲ್ಲಿ ಕೆ.ಆರ್‌. ಪಾಟ್ಕರ್‌ ಪರಿಸರದ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಕಸ ಹೆಕ್ಕುವ ಸ್ಪರ್ಧೆ ಆಯೋಜಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಹರಡಿರುವ ಕಸ,ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ ಸಂಗ್ರಹಿಸುವ ಸ್ಪರ್ಧೆ ನಡೆಸಿಜನರಲ್ಲಿ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಪಣತೊಟ್ಟಿದ್ದರು. ಆದರೆ ಇದಾದ ಒಂದು ವಾರದಲ್ಲಿಯೇ ಜನರ ಹಳೆ ಚಾಳಿ ಮುಂದುವರೆದಿದ್ದು, ಸ್ವಚ್ಛ ಗ್ರಾಮ – ಸ್ವಚ್ಛ ವಾರ್ಡ್‌ ಮರೀಚಿಕೆಯಾಗಿಯೇ ಉಳಿದಿತ್ತು.

Advertisement

ಸಾಮಾಜಿಕ ಕಳಕಳಿ :

ಸುವರ್ಣ ಗ್ರಾಮ ಯೋಜನೆಯಡಿ ಮಟ್ಟಾರಿನಲ್ಲಿ ಸುಸಜ್ಜಿತ ತ್ಯಾಜ್ಯ ವಿಲೇವಾರಿ ಘಟಕ ಹೊಂದಿದ್ದು,ಮನೆಮನೆಗೆ ತೆರಳಿ ಹಸಿ ಮತ್ತು ಒಣಕಸ ಸಂಗ್ರಹಿಸುವ ವ್ಯವಸ್ಥೆ ಇದ್ದರೂ, ಜನರು ರಸ್ತೆಬದಿ,ಎಲ್ಲೆಂದರಲ್ಲಿ ಕಸ ಬಿಸಾಡುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ನಾಗರಿಕರು ತಮ್ಮ ಮನೆ ಮತ್ತು ವ್ಯಾಪಾರಸ್ಥರು ವಾಣಿಜ್ಯ ಮಳಿಗೆಗಳ ಕಸ ತ್ಯಾಜ್ಯವನ್ನು ಕಸ ಸಂಗ್ರಹಿಸುವ ವಾಹನಕ್ಕೆ ನೀಡಿ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡು ಗ್ರಾಮವನ್ನು ತ್ಯಾಜ್ಯ ಮುಕ್ತ ಮಾಡಿ ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕಾಗಿದೆ ಎಂಬುದು ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ. ಆರ್‌. ಪಾಟ್ಕರ್‌ ಅವರ ಸಾಮಾಜಿಕ ಕಳಕಳಿಯಾಗಿದೆ.

ಎಲ್ಲರ ಹೊಣೆಗಾರಿಕೆ:

ಸ್ವಚ್ಛ ಮನಸ್ಸು ಮತ್ತು ನಿರ್ಮಲ ಹೃದಯದ ಪ್ರತೀಕವಾದ ಸ್ವಚ್ಛ ಪರಿಸರ ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ ಯಾಗಿದ್ದು,ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಪ್ರವೃತ್ತಿ ನಿಲ್ಲಬೇಕು. ಹೆತ್ತವರು ತಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ಸಂಸ್ಕೃತಿ ಪಾಲಿಸಬೇಕಾಗಿದೆ. – ರೆ|ಫಾ| ಡೆನ್ನಿಸ್‌ ಡೇಸಾ, ಧರ್ಮಗುರುಗಳು, ಶಿರ್ವ ಆರೋಗ್ಯ ಮಾತಾ ದೇವಾಲಯ.

ಕಳೆದೆರಡು ದಿನಗಳಿಂದ ಬೆಳಿಗ್ಗೆ 7-30ರಿಂದ 9ಗಂಟೆಯವರೆಗೆ ಗ್ರಾ.ಪಂ.ನ ಎಸ್‌ಎಲ್‌ಆರ್‌ಎಂ ಘಟಕದ ಸಿಬಂದಿಯೊಂದಿಗೆ ಕಸ,ತ್ಯಾಜ್ಯದ ರಾಶಿ ಇರುವ ಮಾಹಿತಿ ಬಂದ ಕಡೆ ತೆರಳಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಸಾರ್ವಜನಿಕರು,ಗ್ರಾಮಸ್ಥರು,ಸಂಘಸಂಸ್ಥೆಗಳು ಕಸ,ತ್ಯಾಜ್ಯ ಮುಕ್ತ ಗ್ರಾಮ ಮಾಡುವಲ್ಲಿ ಗ್ರಾ.ಪಂ. ನೊಂದಿಗೆ ಸಹಕರಿಸಿ ಕೈಜೋಡಿಸಿದಾಗ ಸ್ವಚ್ಛ,ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. -ಕೆ.ಆರ್‌. ಪಾಟ್ಕರ್‌, ಶಿರ್ವ ಗಾ.ಪಂ. ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next