ಸುಬ್ರಹ್ಮಣ್ಯ: ಗಾಂಧೀಜಿ ಕಂಡ ಸ್ವಚ್ಛ ಭಾರತ ನಿರ್ಮಾಣ ಕನಸಿಗೆ ವಿಶೇಷ ಅರ್ಥವಿದೆ. ಸ್ವಚ್ಛತೆ ಎಂದರೆ ಕೇವಲ ಕಸಕಡ್ಡಿ ಹೆಕ್ಕುವುದಲ್ಲ. ಸ್ವಚ್ಛ ಶರೀರ, ಮನಸ್ಸು, ಭ್ರಷ್ಟಾಚಾರ ರಹಿತ ವ್ಯವಸ್ಥೆ – ಇವೆಲ್ಲವೂ ಆಗಿವೆ. ಮಂದಿರವಿರುವ ಪರಿಸರ ಸ್ವಚ್ಛತೆ ಜತೆಗೆ ಮನಸ್ಸು ಕೂಡ ಸ್ವಚ್ಛವಾಗಿರಬೇಕು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಭಾರತ ದಿವಸ 2018 ಆಚರಣೆ ಅಂಗವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗುರುವಾರ ನಡೆದ ಸ್ವಚ್ಛ ಮಂದಿರ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ದಿನಗಳಿಗೆ ಹೋಲಿಸಿದರೆ ಕ್ಷೇತ್ರದಲ್ಲಿ ಸಾಕಷ್ಟು ಸ್ವಚ್ಛತೆಯನ್ನು ಕಾಣುತ್ತೇವೆ. ಇದಕ್ಕೆ ಈ ಭಾಗದಲ್ಲಿ ನಿರಂತರ ಸ್ವಚ್ಛತೆ ಅಭಿಯಾನಗಳು ನಡೆಯುತ್ತಿರುವುದು ಕಾರಣ ಎಂದರು. ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಮಾತನಾಡಿ, ಸಂಘ – ಸಂಸ್ಥೆಗಳ ನೆರವಿನಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ. ಇದು ಯಶಸ್ವಿಯಾಗಲಿ ಎಂದರು.
ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಎಂ.ಎಚ್. ರವೀಂದ್ರ, ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಹೊಸಮನೆ, ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಶಿವರಾಮ ರೈ, ತಾಲೂಕು ವೈದ್ಯಾಧಿಕಾರಿ ಡಾ| ಸುಬ್ರಹ್ಮಣ್ಯ, ಎಸ್‌ಎಸ್‌ಪಿಯು ಪ್ರಾಂಶುಪಾಲೆ ಸಾವಿತ್ರಿ ಕೆ., ಪ್ರೌಢಶಾಲಾ ಮುಖ್ಯಸ್ಥ ಯಶವಂತ ರೈ, ಗ್ರಾ.ಪಂ. ಕಾರ್ಯದರ್ಶಿ ಮೋನಪ್ಪ ಡಿ., ವರ್ತಕರ ಸಂಘದ ಅಧ್ಯಕ್ಷ ಶಿವಕುಮಾರ್ ಕಾಮತ್, ಸಂಘ ಸಂಸ್ಥೆಗಳ ಪ್ರಮುಖರಾದ ರವಿ ಕಕ್ಕೆಪದವು, ಉಮೇಶ್ ಕೆ.ಎನ್., ಅನುಗ್ರಹ ಎಜುಕೇಶನ್ ಟ್ರಸ್ಟ್‌ನ ಗಣೇಶ್ ಪ್ರಸಾದ್, ಪಿಡಿಒ ಮುತ್ತಪ್ಪ, ಸುಬ್ರಹ್ಮಣ್ಯ ಪ್ರಾ.ಆ.ಕೇ. ವೈದ್ಯಾಧಿಕಾರಿ ತ್ರಿಮೂರ್ತಿ ಉಪಸ್ಥಿತರಿದ್ದರು. ಕೆಎಸ್‌ಎಸ್ ಕಾಲೇಜು ಪ್ರಾಂಶುಪಾಲ ಪ್ರೊ| ರಂಗಯ್ಯ ಶೆಟ್ಟಿಗಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿಶ್ವನಾಥ ನಡುತೋಟ ನಿರೂಪಿಸಿದರು.
ಸುಬ್ರಹ್ಮಣ್ಯ ಗ್ರಾ.ಪಂ., ಸರಕಾರಿ ಇಲಾಖೆಗಳು, ವರ್ತಕರ ಸಂಘ, ಕೆಎಸ್ ಎಸ್ ಕಾಲೇಜು, ಎಸೆಸ್‌ಪಿಯು ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು, ದೇವಸ್ಥಾನದ ಸಿಬಂದಿ, ಪ್ರಾಥಮಿಕ ಶಾಲೆ, ಪ್ರಶಾಂತ್ ನ್ಪೋಟ್ಸ್ ಕ್ಲಬ್ ಸದಸ್ಯರು, ವಿದ್ಯಾಸಾಗರ ಭಜನ ಮಂಡಳಿ ಸದಸ್ಯರು, ವಾಣಿವನಿತಾ ಸಮಾಜ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಆಟೋ ಚಾಲಕ ಮಾಲಕ ಸಂಘ, ಬಿಎಂಎಸ್ ಆಟೋ ಚಾಲಕ ಮಾಲಕ ಸಂಘ, ಸುಬ್ರಹ್ಮಣ್ಯ ವಲಯ ಕಾರ್ಯನಿರತ ಪತ್ರಕರ್ತರ ಸಂಘ ಸಹಿತ ಹಲವು ಸಂಘ – ಸಂಸ್ಥೆಗಳು ಸ್ವಚ್ಛತೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡವು. ಕೆಎಸ್‌ಎಸ್ ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ತೊಡಗಿಸಿಕೊಂಡರು. ದೇವಸ್ಥಾನದ ಸುತ್ತಮುತ್ತ, ಆದಿ ಸುಬ್ರಹ್ಮಣ್ಯ ದೇವಸ್ಥಾನ, ಪೇಟೆ ಮೊದಲಾದ ಕಡೆಗಳಲ್ಲಿ ಸ್ವಚ್ಛತೆ ಕಾರ್ಯ ನಡೆಸಲಾಯಿತು.