Advertisement

ಪಡುತೋನ್ಸೆ, ಕೋಡಿಬೆಂಗ್ರೆಯ ಸ್ವರ್ಣಾ ನದಿಯಲ್ಲಿ  ತೇಲಲಿದೆ ದೋಣಿ ಮನೆ

07:28 PM Apr 03, 2017 | |

ಮಲ್ಪೆ: ಕೇರಳ ಮಾದರಿಯ ಬೋಟ್‌ ಹೌಸ್‌ ಇನ್ನು ಮುಂದೆ ಕೋಡಿಬೆಂಗ್ರೆ ಸ್ವರ್ಣಾ ನದಿಯಲ್ಲೂ ತೇಲಲಿದೆ. ಇದೀಗ ದೇಶ ವಿದೇಶದ ಪ್ರವಾಸಿಗರಿಗಾಗಿ ಉಡುಪಿ ಜಿಲ್ಲೆಯ ಪಡುತೋನ್ಸೆ, ಕೋಡಿಬೆಂಗ್ರೆ ಸ್ವರ್ಣ ನದಿಯಲ್ಲಿ ಪಾಂಚಜನ್ಯ ಕ್ರೂಸ್‌ನ ಬೋಟ್‌ ಹೌಸ್‌ ಆರಂಭಗೊಳ್ಳಲಿದ್ದು ಎ. 8 ರಿಂದ ಸಾರ್ವಜನಿಕವಾಗಿ ತೆರೆದುಕೊಳ್ಳಲಿದೆ.

Advertisement

ಐಷಾರಾಮಿ ಮನೆ
35ರಿಂದ 40 ಮಂದಿಯ ಸಾಮರ್ಥ್ಯವನ್ನು ಹೊಂದಿರುವ ಈ ಅತ್ಯಾಧುನಿಕ ಶೈಲಿಯಲ್ಲಿ ವಿನ್ಯಾಸಗೊಳಿಸಿದ ದೋಣಿ ಮನೆಯಲ್ಲಿ ಒಂದು ಹವಾನಿಯಂತ್ರಿತ ಬೆಡ್‌ರೂಂ, ಬೆಡ್‌ರೂಂ ಅಟ್ಯಾಚ್‌ಡ್‌ ಮತ್ತು ಪ್ರತ್ಯೇಕ ಬಾತ್‌ರೂಂ, ಅಡುಗೆ ಕೋಣೆ, ಆಕರ್ಷಕ ಲಿವಿಂಗ್‌ರೂಮ್‌, ವರ್ಕ್‌ಶಾಪ್‌, ಸಣ್ಣ ಪಾರ್ಟಿ ಆಯೋಜನೆ ಮಾಡಲು ಸ್ಥಳಾವಕಾಶವನ್ನು ಹೊಂದಿದೆ. ಸುಂದರ ಪರಿಸರದ ದೃಶ್ಯವನ್ನು ನೋಡಲು ಬಾಲ್ಕನಿ ಇದ್ದು ಆಧುನಿಕ ಸೌಲಭ್ಯಗಳ ಎಲ್ಲಾ ಅನುಕೂಲತೆಯನ್ನು ಹೊಂದಿದೆ. ಅಡುಗೆ ತಯಾರು ಮಾಡಲು ಒಬ್ಬ ಅಡುಗೆಯವನು, ಒಬ್ಬ ಸಹಾಯಕ, ವೈಟರ್‌, ದೋಣಿ ನಿಯಂತ್ರಕ ಮತ್ತು ಪ್ರವಾಸಿಗರ ಸುರಕ್ಷತೆಗೆ ನುರಿತ ಈಜು ತಜ್ಞರನ್ನು ಬೋಟಿನಲ್ಲಿ ಇರಿಸಲಾಗಿದ್ದು ಒಟ್ಟು 5 ಮಂದಿ ಬೋಟಿನಲ್ಲಿ ಖಾಯಂ ಆಗಿ ಇರುತ್ತಾರೆ.

3 ವಿಭಾಗದಲ್ಲಿ ಯಾನ
ಕ್ರೂಸಿಂಗ್‌ ದರ ರೂ. 12 ಸಾವಿರ ನಿಗದಿ ಪಡಿಸಲಾಗಿದ್ದು, ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ, ಸಂಜೆ 5 ರಿಂದ  ರಾತ್ರಿ 9 ಗಂಟೆ ಮತ್ತು  ರಾತ್ರಿ 9 ರಿಂದ ಬೆಳಗ್ಗೆ 9 ಗಂಟೆಯ ವರೆಗೆ ಒಟ್ಟು ಮೂರು ವಿಭಾಗದಲ್ಲಿ ಕ್ರೂಸಿಂಗ್‌ ನಡೆಸಲಾಗುತ್ತದೆ. ಬೆಳಗ್ಗಿನ ಕ್ರೂಸಿಂಗ್‌ನಲ್ಲಿ ಆರು ಮಂದಿ, ಸಂಜೆಯ ಪ್ಯಾಕೇಜ್‌ನಲ್ಲಿ 4 ಮಂದಿಗೆ ಮತ್ತು ರಾತ್ರಿಯಲ್ಲಿ  ಮಗು ಸೇರಿ ಮೂರು ಮಂದಿಗೆ ಅವಕಾಶ ನೀಡಲಾಗುತ್ತದೆ. ಹೆಚ್ಚು ಜನ ಇದ್ದಲ್ಲಿ  ಒಬ್ಬರಿಗೆ ತಲಾ 1 ಸಾವಿರದಂತೆ ಹೆಚ್ಚುವರಿ ನೀಡಬೇಕಾಗುತ್ತದೆ ಎಂದು ಬೋಟ್‌ ಹೌಸ್‌ ಮಾಲಕರು ತಿಳಿಸಿದ್ದಾರೆ.

Advertisement

ಊಟದ ಮೆನು
ಕೊಚ್ಚಿಗೆ ಅಥವಾ ಬೆಳ್ತಿಗೆ ಅನ್ನ,  ದಾಲ್‌, ರಸಂ, ಪಲ್ಯ, ಚಪಾತಿ, ಕೋರಿ ರೋಟ್ಟಿ, ಮೀನು ಅಥವಾ ಚಿಕನ್‌ ಸುಕ್ಕ ಇದ್ದು, ದೋಣಿ ಒಳಗೆ ಪ್ರವೇಶಸಿದಾಗಲೇ ವೆಲ್‌ಕಂ ಜ್ಯೂಸ್‌, ಸ್ಥಳೀಯ ತಿನಸು ಮತ್ತು ಕಾಫಿ, ಟೀ ನೀಡಲಾಗುತ್ತದೆ. ಇದಲ್ಲದೆ ಪ್ರವಾಸಿಗರು ಬಯಸಿದ ಆಹಾರ ಪದಾರ್ಥಗಳನ್ನು ಮಾಡಿಕೊಡಲಾಗುತ್ತದೆ ಆದರೆ ಹೆಚ್ಚುವರಿ ದರವನ್ನು ನೀಡಬೇಕು. ಬೋಟ್‌ನಲ್ಲಿಯೇ ರಾತ್ರಿಯನ್ನು ಕಳೆಯ ಬೇಕೆನಿಸಿದವರಿಗೆ ಮಂದ ಬೆಳಕಿನ ವ್ಯವಸ್ಥೆಯನ್ನು ಹೊಂದಿದೆ. ಪ್ರವಾಸಿಗರಿಗೆ ಸ್ವರ್ಣ ನದಿಯಲ್ಲಿ 8 ರಿಂದ 10 ಕಿ.ಮೀ ದೂರ ಸುತ್ತಾಡಬಹುದಾಗಿದೆ.

ಬೋಟ್‌ ಹೌಸ್‌ನ ಒಟ್ಟು ಉದ್ದ 73 ಅಡಿ, ಅಗಲ 15 ಅಡಿಯನ್ನು ಹೊಂದಿದೆ. ಕಬ್ಬಿಣ ದೋಣಿಯ ಮೇಲೆ ಸಂಪೂರ್ಣ ಮರದಿಂದ ಮನೆಯನ್ನು ಕಲಾತ್ಮಕವಾಗಿ ರಚಿಸಲಾಗಿದೆ. 40 ಅಶ್ವಶಕ್ತಿಯ ಇಂಜಿನ್‌ ಅಳವಡಿಸಲಾಗಿದೆ. ದೋಣಿ ಪಯಣ ಕೇವಲ ಪ್ರವಾಸಿಗರಿಗೆ ಮಾತ್ರವಲ್ಲ ಸ್ಥಳೀಯರಿಗೂ ನಿಜವಾಗಿಯೂ ಇದೊಂದು ಅದ್ಭುತ ಮತ್ತು ಮರೆಯಲಾಗದ ಅನುಭವ. ತೇಲುವ ಮನೆಯಲ್ಲಿ ಒಂದು ಇಡೀ ದಿನ ಕಳೆಯುವುದು ಅವಿಸ್ಮರಣೀಯ ಅನುಭವ. ಇದು ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿ ತನ್ನಡೆಗೆ ಸೆಳೆಯುವ, ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ದೊರಕಿಸಿಕೊಡಲಿದೆ.

ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಪಂಚಾಯತ್‌ನಿಂದ ಈಗಾಗಲೇ ಅನುಮತಿ.  ಕೇರಳಕ್ಕಿಂತ ಇಲ್ಲಿ ಸುತ್ತ ಹಸಿರಿನ ಪರಿಸರ, ಸುಂದರ ನದಿಯನ್ನು ಹೊಂದಿದೆ. ಅಲ್ಲಿಲ್ಲಿ ಕುದ್ರು ಗಳಿದ್ದು ನೋಡಲು ಇನ್ನಷ್ಟು ಆಕರ್ಷಣೀಯವಾಗಿದೆ. ಕರಾವಳಿಯಲ್ಲಿ ಪಾರ್ಟಿ ಮಾಡಿ ಸಂಭ್ರಮಿಸುವವರು ಜಾಸ್ತಿ. ಅವರಿಗಾಗಿಯೇ ಹೆಚ್ಚು ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದೆ ಹೆಚ್ಚು ಬೇಡಿಕೆ ಇದ್ದಲ್ಲಿ ಹೆಚ್ಚುವರಿ ದೋಣಿ ಮನೆಯನ್ನು ವ್ಯವಸ್ಥೆಗೊಳಿಸುವಲ್ಲಿ ಪ್ರಯತ್ನಿಸಲಾಗುವುದು.
ಸುಜಾತಾ ಕಾಮತ್‌, ಬೋಟ್‌ಹೌಸ್‌ ಮಾಲಕರು

ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next