Advertisement
ದಕ್ಷಿಣ ಕನ್ನಡ ಸಹಿತ ರಾಜ್ಯದ 21 ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಆಸ್ತಿ ಸರ್ವೆ ನಡೆಸಲು ಸರಕಾರ ಈ ಹಿಂದೆ ತೀರ್ಮಾನಿಸಿತ್ತು. “ಸ್ವಾಮಿತ್ವ’ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ82 ಗ್ರಾಮ ಪಂಚಾಯತ್‌ಗಳನ್ನು ಇದಕ್ಕಾಗಿ ಆಯ್ಕೆ ಮಾಡಿ ಟೆಂಡರ್ ಕೂಡ ಆಗಿತ್ತು. ಆದರೆ ಇಲ್ಲಿ ಡ್ರೋನ್ ಸಮೀಕ್ಷೆ ಮಾತ್ರ ಸಮರ್ಪಕವಾಗಿ ನಡೆಯಲೇ ಇಲ್ಲ.
ಡ್ರೋನ್ ಸರ್ವೆ ಬಗ್ಗೆ ದ.ಕ. ಜಿಲ್ಲೆಯಲ್ಲಿ ಆಕ್ಷೇಪವೂ ವ್ಯಕ್ತವಾಗಿತ್ತು. ಅವೈಜ್ಞಾನಿಕವಾಗಿ ಕೆಲವು ಕಡೆ ಸರ್ವೇ ಮಾಡಲಾಗಿದೆ ಎಂಬ ದೂರು ಇದೆ. ಕೆಲವು ಡ್ರೋನ್ ನಕ್ಷೆ ಪ್ರಿಂಟ್‌ಔಟ್ ತೆಗೆಯಲು ಸಾವಿರಾರು ರೂ. ವೆಚ್ಚ ವಾಗುತ್ತಿದೆ. ಜತೆಗೆ 10 ಸೆಂಟ್ಸ್ ಜಾಗ ಇದ್ದವರು 15 ಸೆಂಟ್ಸ್ ಜಾಗಕ್ಕೆ ಬೇಲಿ ಹಾಕಿ ಕಾಂಪೌಂಡ್ ಹಾಕಿದ್ದರೂ 15 ಸೆಂಟ್ಸ್ ಜಾಗಕ್ಕೂ ಸ್ವಾಮಿತ್ವ ಕಾರ್ಡ್ ನೀಡುವ ಪ್ರಮೇಯ ಡ್ರೋನ್ ಸರ್ವೇ ಮೂಲಕ ಆಗುತ್ತಿತ್ತು ಎಂಬ ಅಪವಾದವೂ ಕೆಲವರಿಂದ ಕೇಳಿ ಬಂದಿತ್ತು.
Related Articles
ಡ್ರೋನ್ ಹಾರುವ ಸಂದರ್ಭ ಆಸ್ತಿಯು ಸ್ಪಷ್ಟವಾಗಿ ಕಾಣಿಸಲು ನಾಲ್ಕು ಭಾಗದಲ್ಲಿ ಪೈಂಟ್ ಮಾಡಬೇಕಾಗುತ್ತದೆ. ಪೈಂಟ್ ಮೊತ್ತ ಸ್ಥಳೀಯ ಪಂಚಾಯತ್ ಹೆಗಲಿಗೆ ಬೀಳುತ್ತಿತ್ತು. ಹೀಗೆ ಹಣ ಖರ್ಚು ಮಾಡಲು ಸರಕಾರದ ಸೂಚನೆ ಇರಲಿಲ್ಲ. ಹೀಗಾಗಿ ಪಂಚಾಯತ್‌ಗೆ ಇದೊಂದು ಭಾರ!
Advertisement
ಏನಿದು ಡ್ರೋನ್ ಸರ್ವೇ?“ಸ್ವಾಮಿತ್ವ’ ಯೋಜನೆಯಡಿ ಆಯ್ಕೆ ಯಾಗಿರುವ ಗ್ರಾಮಗಳ ಜನವಸತಿ ಪ್ರದೇಶದ ಆಸ್ತಿಯನ್ನು ಕಂದಾಯ ಇಲಾಖೆಯ ಭೂಮಾಪಕರು ಹಾಗೂ ಗ್ರಾ.ಪಂ. ಅಧಿ ಕಾರಿ ಗಳು ಜಂಟಿಯಾಗಿ ಭೂಮಾಲಕರ ಸಮ್ಮುಖದಲ್ಲಿ ಪರಿಶೀಲಿಸಿ ಗುರುತಿಸಲಾಗುತ್ತದೆ. ಬಳಿಕ ಡ್ರೋಣ್ ಆಧಾರಿತ ಸರ್ವೇ ನಡೆಸಿ ಆಸ್ತಿಗಳ ಫೋಟೋ ಸೆರೆ ಹಿಡಿಯಲಾಗುತ್ತದೆ. ಬಳಿಕ ಚಿತ್ರಗಳನ್ನು ಸಂಸ್ಕರಿಸಿ ಗುರುತಿಸಲಾದ ಆಸ್ತಿಗಳ ನಕಾಶೆ ತಯಾರಿಸಲಾಗುತ್ತದೆ. ಗ್ರಾ.ಪಂ.ಗಳಲ್ಲಿ ನಮೂದಾಗಿರುವ ದಾಖಲಾತಿಗಳ ಜತೆಗೆ ಹೊಂದಾಣಿಕೆ ಮಾಡಿ ಪರಿಶೀಲಿಸಲಾಗುತ್ತದೆ. ಬಳಿಕ ಗ್ರಾಮಸ್ಥರ ಜತೆಗೆ ಸಭೆ ನಡೆಸಿ ತಕರಾರು ಇದ್ದರೆ ಇತ್ಯರ್ಥಪಡಿಸಲಾಗುತ್ತದೆ. ಎಲ್ಲವೂ ಸರಿಯಾದ ಬಳಿಕ ಸರಕಾರದ ದಾಖಲಾತಿಗೆ ರವಾನಿಸಲಾಗುತ್ತದೆ. ಡ್ರೋನ್ ಸಮೀಕ್ಷೆಗೆ ಹಿನ್ನಡೆ ಯಾಕೆ?
ರಾಜ್ಯದಲ್ಲಿ ಈ ಹಿಂದೆ ಮದ್ರಾಸ್ ಪ್ರಾಂತಕ್ಕೆ ಒಳಪಟ್ಟಿದ್ದ ಕರಾವಳಿ ಜಿಲ್ಲೆಯಲ್ಲಿ ಭೂದಾಖಲೆಗಳು ಸರ್ವೇ ನಂಬರ್ ಸ್ವರೂಪದಲ್ಲಿವೆ. ಉಳಿದ ಜಿಲ್ಲೆಗಳಲ್ಲಿ ಗ್ರಾಮಠಾಣಾ ಸ್ವರೂಪದಲ್ಲಿದೆ. ಇದರಿಂದಾಗಿ ಡ್ರೋನ್ ಸರ್ವೇ ದಾಖಲೆ ಅನುಷ್ಠಾನಕ್ಕೆ ತಾಪತ್ರಯ ಉಂಟಾಗಿದೆ. ಜತೆಗೆ ಕರಾವಳಿಯಲ್ಲಿ ಬೆಟ್ಟ ಗುಡ್ಡ ಸಹಿತ ಪ್ರಾಕೃತಿಕವಾಗಿ ಭಿನ್ನ ಪ್ರದೇಶ ಇರುವ ಕಾರಣದಿಂದ ಡ್ರೋನ್ ಸರ್ವೇ ಕಷ್ಟವಾಗಿದೆ. ಸರಕಾರಿ ಭೂಮಿಯಲ್ಲಿದ್ದವರಿಗೆ ಆಶ್ರಯ ಯೋಜನೆಯಡಿ ಇರುವಲ್ಲಿ ಡ್ರೋನ್ ಸರ್ವೆ ಮಾಡಲಾಗಿತ್ತು. ಆದರೆ ಇಲ್ಲಿ 100 ಮನೆ ಇದ್ದರೆ 50 ಮಂದಿಯಲ್ಲಿ ಮಾತ್ರ ಹಕ್ಕುಪತ್ರಗಳಿತ್ತು. ಉಳಿದವರಲ್ಲಿ ಹಕ್ಕುಪತ್ರವಿಲ್ಲ. ಅವರಿಗೆ ದಾಖಲೆ ಇಲ್ಲದ ಕಾರಣದಿಂದ ಸ್ವಾಮಿತ್ವ ಕಾರ್ಡ್ ನೀಡಲು ಆಗುತ್ತಿಲ್ಲ. ಡ್ರೋನ್ ಸಮೀಕ್ಷೆ ಸ್ಥಗಿತ
ಗ್ರಾಮ ಠಾಣ ಇರುವ ಜಿಲ್ಲೆಗಳಲ್ಲಿ ಡ್ರೋನ್ ಹಾರಿಸಿ ಇ ಖಾತಾ ಮಾದರಿಯಲ್ಲಿ ಸ್ವಾಮಿತ್ವ ಕಾರ್ಡ್ ನೀಡಲಾಗುತ್ತಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಠಾಣಾ ವ್ಯವಸ್ಥೆ ಇಲ್ಲ. ಜತೆಗೆ ಡ್ರೋನ್ ಹಾರಾಟಕ್ಕೆ ಸೂಕ್ತವಾಗುವ ಭೂಪ್ರದೇಶವೂ ಇಲ್ಲಿ ಇಲ್ಲ. ಹೀಗಾಗಿ ಡ್ರೋನ್ ಸಮೀಕ್ಷೆಯನ್ನು ನಿಲ್ಲಿಸಲಾಗಿದೆ. ಸರಕಾರದ ಸೂಚನೆಯ ಪ್ರಕಾರ ಮುಂದಿನ ತೀರ್ಮಾನ ಮಾಡಲಾಗುವುದು.
– ಪ್ರಸಾದಿನಿ, ಸಹಾಯಕ ನಿರ್ದೇಶಕರು, ಭೂಮಾಪನ ಇಲಾಖೆ -ದಿನೇಶ್ ಇರಾ