ಪಡುಬಿದ್ರಿ : ಇಲ್ಲಿನ ಸುಜ್ಲಾನ್ ಎನರ್ಜಿ ಘಟಕವನ್ನು ಕಂಪೆನಿಯು ಸೋಮವಾರ ಮಧ್ಯರಾತ್ರಿಯಿಂದ ತನ್ನ ನೌಕರರಿಗೆ ಮುಚ್ಚಲಾಗಿದೆ.
ಕೈಗಾರಿಕಾ ವಿವಾದ ಕಾಯಿದೆ ಸೆ.22 ಉಪ ಸೆ.2ರ ಪ್ರಕಾರ ಲಾಕೌಟ್ ಘೋಷಿಸಲು ಕಂಪೆನಿಯು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.
ಅದರೆ ಕಂಪೆನಿಯು ತನ್ನ ನೌಕರರಿಗೆ ಲಾಕೌಟ್ ಘೋಷಣೆಯ ಯಾವುದೇ ಮುನ್ಸೂಚನೆ ನೀಡಿಲ್ಲವೆಂದು ತಿಳಿದುಬಂದಿದೆ. ಸುಜ್ಲಾನ್ ಕಂಪೆನಿಯು ತನ್ನ ಪಡುಬಿದ್ರಿ ಘಟಕದಲ್ಲಿ ಗಾಳಿ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಬೇಕಾಗುವ ರೆಕ್ಕೆಗಳನ್ನು ಉತ್ಪಾದಿಸುತ್ತಿತ್ತು.
ಕಂಪೆನಿಯು ತಾನು ಲಾಕೌಟ್ ಘೋಷಿಸಲು ನೌಕರರ ದುರ್ವರ್ತನೆ ಮತ್ತು ವಿಧ್ವಂಸಕ ಕೃತ್ಯಗಳೇ ಕಾರಣ ಎಂದು ಹೇಳಿದೆ. ಇದರಿಂದ ತನಗೆ ಅಪಾರ ನಾಶ ನಷ್ಟ ಉಂಟಾಗಿದೆ ಎಂದು ಹೇಳಿದೆ.
ಸೋಮವಾರ ರಾತ್ರಿ ಪಾಳಿ ನೌಕರರನ್ನು ಇದ್ದಕ್ಕಿದ್ದಂತೆಯೇ ಕಂಪೆನಿಯ ಆವರಣದಿಂದ ಹೊರಕಳಿಸಲಾಯಿತು. ಪರಿಣಾಮವಾಗಿ 326 ಕೆಲಸಗಾರರು ಸೇರಿದಂತೆ ಒಟ್ಟು 600 ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದು ಕೊಂಡರು. ಮಂಗಳವಾರ ಬೆಳಗ್ಗಿನಿಂದ ಭಾರೀ ಸಂಖ್ಯೆಯ ಕಾರ್ಮಿಕರು ಕಂಪೆನಿಯ ಪ್ರಮುಖ ದ್ವಾರದ ಮುಂದೆ ಜಮಾಯಿಸಿದರು.
ಎರಡು ವಾರಗಳ ಹಿಂದೆ ಕಂಪೆನಿಯ ಆವರಣದಲ್ಲಿ ಧರಣಿ ನಡೆಸಿದ್ದರು. ಅವರನ್ನು ಕೂಡಲೇ ತೆರವುಗೊಳಿಸಲಾಗಿ ಯಾವುದೇ ಮುನ್ಸೂಚನೆ ನೀಡದೆ ಅವರನ್ನು ಉದ್ಯೋಗದಿಂದ ತೆಗೆದುಹಾಕಲಾಗಿತ್ತು.