ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸುವೇಂದು ಅಧಿಕಾರಿ ನೀಡಿರುವ ರಾಜೀನಾಮೆ ಘಟನೆ ಶುಕ್ರವಾರ (ಡಿಸೆಂಬರ್ 18, 2020) ಯೂ ಟರ್ನ್ ಪಡೆದುಕೊಂಡಿದ್ದು, ಟಿಎಂಸಿ ಸುವೇಂದು ಅವರ ರಾಜೀನಾಮೆಯನ್ನು ಸ್ವೀಕರಿಸುವುದಿಲ್ಲ ಎಂದು ಪಶ್ಚಿಮಬಂಗಾಳ ವಿಧಾನಸಭೆಯ ಸ್ಪೀಕರ್ ಬಿಮನ್ ಬ್ಯಾನರ್ಜಿ ತಿಳಿಸಿದ್ದಾರೆ.
ಪಶ್ಚಿಮಬಂಗಾಳ ವಿಧಾನಸಭೆ ಸ್ಪೀಕರ್ ಬಿಮನ್ ಬ್ಯಾನರ್ಜಿ ಎಎನ್ ಐ ಜತೆ ಮಾತನಾಡುತ್ತ, ನಾನು ಸುವೇಂದು ರಾಜೀನಾಮೆ ಪತ್ರ ಪರಿಶೀಲಿಸಿದ್ದೇನೆ. ಆದರೆ ಅದರಲ್ಲಿ ಕರಾರುವಕ್ಕಾದ ದಿನಾಂಕ ನಮೂದಿಸಿಲ್ಲ. ಅಲ್ಲದೇ ಕೆಲವು ವಿವರಗಳನ್ನು ಸಂವಿಧಾನದ ಪ್ರಕಾರ ಉಲ್ಲೇಖಿಸಿಲ್ಲ ಎಂದು ತಿಳಿಸಿದ್ದಾರೆ.
ರಾಜೀನಾಮೆ ಸಹಜವಾಗಿದ್ದರೆ ನಾನು ಸ್ವೀಕರಿಸುತ್ತೇನೆ. ಆದರೆ ಇದು ಸ್ವಯಂಪ್ರೇರಿತ ಮತ್ತು ಸಹಜ ರಾಜೀನಾಮೆ ಎಂದು ಪತ್ರದಲ್ಲಿ ತಿಳಿಸಿಲ್ಲ. ಹೀಗಾಗಿ ಸಮರ್ಪಕವಾದ ರೂಪದಲ್ಲಿ ಇರದ ಕಾರಣ ಈ ರಾಜೀನಾಮೆ ಪತ್ರ ಸ್ವೀಕರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸುವೇಂದು ಅವರಿಗೆ ಡಿಸೆಂಬರ್ 21ರ ಮಧ್ಯಾಹ್ನ 2ಗಂಟೆಯೊಳಗೆ ಹಾಜರಾಗಲು ಸೂಚಿಸಿರುವುದಾಗಿ ಸ್ಪೀಕರ್ ಬ್ಯಾನರ್ಜಿ ತಿಳಿಸಿದ್ದಾರೆ.
ಟಿಎಂಸಿ ಹಿರಿಯ ಮುಖಂಡ ಸುವೇಂದು ಅಧಿಕಾರಿ ಬುಧವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಒಂದು ಗಂಟೆಯ ನಂತರ ಬಂಡಾಯ ಸಾರಿದ್ದ ಟಿಎಂಸಿ ಮುಖಂಡರ ಜತೆ ಅಧಿಕಾರಿ ಗುಪ್ತವಾಗಿ ಮಾತುಕತೆ ನಡೆಸಿದ್ದರು ಎಂದು ವರದಿ ತಿಳಿಸಿದೆ.
ಸುವೇಂದು ಅಧಿಕಾರಿ ನಂತರ ಟಿಎಂಸಿಯ ಶಾಸಕ ಜಿತೇಂದ್ರ ತಿವಾರಿ ಅಸಾನ್ ಸೋಲ್ ಪಾಲಿಕೆ ಆಡಳಿತಾಧಿಕಾರ ಮಂಡಳಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು.ಶುಕ್ರವಾರ(ಡಿ.18, 2020) ಶಾಸಕ ಸಿಲ್ ಭದ್ರಾ ದತ್ತಾ ಟಿಎಂಸಿಗೆ ರಾಜೀನಾಮೆ ನೀಡಿದ್ದಾರೆ.
ನಿಗದಿಯಂತೆ ಸುವೇಂದು ಅಧಿಕಾರಿ ಶನಿವಾರ(ಡಿಸೆಂಬರ್ 19, 2020) ಬಿಜೆಪಿ ಹಿರಿಯ ಮುಖಂಡ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಳ್ಳುವ ಕಾರ್ಯಕ್ರಮ ನಿಗದಿಯಾಗಿತ್ತು.