ಚಾಮರಾಜನಗರ: ತಮಿಳುನಾಡಿನ ದಿಂಬಂ, ಸತ್ಯಮಂಗಲ, ರಾಜ್ಯದ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಸತತ ಮಳೆ ಬೀಳುತ್ತಿರುವ ಕಾರಣ, ತಾಲೂಕಿನ ಸುವರ್ಣಾವತಿ ಜಲಾಶಯ ಭರ್ತಿಯಾಗಿದ್ದು, 600 ಕ್ಯುಸೆಕ್ ನೀರನ್ನು ನದಿ ಹಾಗೂ ನಾಲೆಗೆ ಬಿಡಲಾಗುತ್ತಿದೆ.
ಸುವರ್ಣಾವತಿ ಜಲಾಶಯ ಭರ್ತಿಯಾಗಲು ಕೇವಲ 5 ಇಂಚು ಬಾಕಿಯಿದ್ದ ಕಾರಣ, ಭಾನುವಾರ ಬೆಳಗಿನ ಜಾವ ನೀರು ಹೊರ ಬಿಡಲಾಯಿತು. ಮೂರು ಕ್ರೆಸ್ಟ್ ಗೇಟ್‌ಗಳ ಪೈಕಿ 2 ಕ್ರೆಸ್ಟ್ ಗೇಟ್‌ಗಳ ಮೂಲಕ 450 ಕ್ಯುಸೆಕ್ ನೀರನ್ನು ನದಿಗೆ, 150 ಕ್ಯುಸೆಕ್ ನೀರನ್ನು ನಾಲೆಗೆ ಬಿಡಲಾಗಿದೆ.
ನಾಲೆಗೆ ಬಿಡಲಾಗೀರು ಸುವರ್ಣಾವತಿ ವ್ಯಾಪ್ತಿಗೊಳಪಟ್ಟ 13 ಕೆರೆಗಳಿಗೆ ಹರಿಯುತ್ತಿದೆ. ಸುವರ್ಣಾವತಿ ಜಲಾಶಯದ ಗರಿಷ್ಠ ಮಟ್ಟ 2,455 ಅಡಿಯಿದ್ದು, ಶನಿವಾರ ರಾತ್ರಿ 2,454.5 ಅಡಿಗೆ ತಲುಪಿದ ಕಾರಣ ಭಾನುವಾರ ಬೆಳಗಿನ ಜಾವ ಗೇಟ್ ತೆರೆದು ನೀರು ಹರಿಸಲಾಯಿತು.
ತಮಿಳುನಾಡಿನ ದಿಂಬಂ, ಬೇಡಗುಳಿ ಸೇರಿದಂತೆ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಈ ಜಲಾಶಯಕ್ಕೆ ನೀರು ಹರಿದು ಬರುತ್ತದೆ. ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಾಯಿತು. 5 ಇಂಚು ಬಾಕಿಯಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನೀರು ಹರಿಸಲಾಗಿದೆ.
ಇದನ್ನೂ ಓದಿ:- ಒಳನಾಡು ಮೀನುಗಾರಿಕೆಗೆ ಜಿಲ್ಲೆ ಪರಿಸರ ಸೂಕ್ತ
ನೆರೆಯ ತಮಿಳುನಾಡು, ಬಿಆರ್‌ಟಿ ಅರಣ್ಯ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ತಾಲೂಕಿನ ಸುವರ್ಣಾವತಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನದಿ ಹಾಗೂ ನಾಲೆಗೆ ಸುವರ್ಣಾವತಿಯಿಂದ ನೀರು ಹೊರಬಿಟ್ಟ ಹಿನ್ನೆಲೆಯಲ್ಲಿ ಭಾನುವಾರ ನೂರಾರು ಮಂದಿ ಸ್ಥಳಕ್ಕೆ ಭೇಟಿ ನೀಡಿ, ಆ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡರು. ಸುಮಾರು 6 ವರ್ಷ ಬಳಿಕ ಡ್ಯಾಂ ಭರ್ತಿಯಾಗಿದೆ. ಸುವರ್ಣಾವತಿ ಜಲಾಶಯವು 1.26 ಟಿಎಂಸಿ ನೀರು ತುಂಬುವ ಸಾಮರ್ಥ್ಯ ಹೊಂದಿದೆ.
ಸುವರ್ಣಾವತಿ, ಚಿಕ್ಕಹೊಳೆ ಅವಳಿ ಜಲಾಶಯ – ಸುವರ್ಣಾವತಿ ಜಲಾಶಯದಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಚಿಕ್ಕಹೊಳೆಯ ಗರಿಷ್ಠ ಮಟ್ಟ 2,474 ಅಡಿ. ಈಗ 2,469 ಅಡಿಗಳಷ್ಟು ನೀರು ತುಂಬಿದೆ. ಇನ್ನೂ 5 ಅಡಿ ನೀರು ಹರಿದು ಬಂದರೆ ಚಿಕ್ಕಹೊಳೆ ಜಲಾಶಯವೂ ತುಂಬುತ್ತದೆ. ತಮಿಳುನಾಡಿನ ತಲಮಲೈ, ತಾಳವಾಡಿ, ಕೊಂಗಳ್ಳಿ ಬೆಟ್ಟ ಸುತ್ತಮುತ್ತಲಿನ ಪ್ರದೇಶಗಳು ಈ ಜಲಾಶಯದ ಜಲಾನಯನ ಪ್ರದೇಶಗಳಾಗಿವೆ. ಈ ಭಾಗದಲ್ಲಿ ಮಳೆಯಾಗುತ್ತಿರುವ ಕಾರಣ ಚಿಕ್ಕಹೊಳೆಗೆ ನೀರು ಹರಿದುಬರುತ್ತಿದೆ. ಭಾನುವಾರ 100 ಕ್ಯುಸೆಕ್ ಒಳ ಹರಿವು ಇತ್ತು. ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳನ್ನು ಅವಳಿ ಜಲಾಶಯಗಳು ಎಂದೇ ಕರೆಯಲಾಗುತ್ತದೆ. ಈ ಡ್ಯಾಂ 1.26 ಟಿಎಂಸಿ ಸಾಮಾರ್ಥ್ಯ ಹೊಂದಿದೆ.