Advertisement

ಭಕ್ತರ ದೇಣಿಗೆಯಲ್ಲಿಯೇ ಸುವರ್ಣರಥ: ದೇವಾಲಯ ಸ್ಪಷ್ಟನೆ

06:56 AM Apr 30, 2019 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ದೇವರ ಸುವರ್ಣ ರಥವನ್ನು ಕ್ಷೇತ್ರದ ಭಕ್ತರ ದೇಣಿಗೆ ಮತ್ತು ದೇಗುಲದ ಆದಾಯ ಬಳಸಿ ನಿರ್ಮಿಸಲಾಗುತ್ತಿದೆ. ಸರಕಾರದ ಹಣಕಾಸು ಒಪ್ಪಿಗೆ ದೊರೆತ ತಕ್ಷಣ ರಥ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು.

Advertisement

ಮುಂದಿನ ಅಕ್ಟೋಬರ್‌ ಒಳಗೆ ನಿರ್ಮಾಣ ಪೂರ್ಣವಾಗಲಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ. ದೇಗುಲದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ, ದೇವಸ್ಥಾನದ ಆದಾಯದಲ್ಲಿ ರಥ ನಿರ್ಮಿಸಿ ಮುಖ್ಯಮಂತ್ರಿಗಳು ಹರಕೆ ತೀರಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದುದು.

ಮುಖ್ಯಮಂತ್ರಿಯವರು ರಥ ನಿರ್ಮಾಣಕ್ಕೆ ಹರಕೆ ಹೇಳಿಕೊಂಡ ವಿಚಾರ ಕೂಡ ಆಡಳಿತ ಮಂಡಳಿಯ ಗಮನಕ್ಕೆ ಬಂದಿಲ್ಲ. ಮುಖ್ಯಮಂತ್ರಿಯವರು ತಮ್ಮ ಅವಧಿಯಲ್ಲಿ ಅನುಮೋದನೆ ಸಿಕ್ಕಿ ಅರ್ಧಕ್ಕೆ ನಿಂತ ಕಾರ್ಯ ಪೂರ್ಣಗೊಳಿಸಲು ಹಸಿರು ನಿಶಾನೆ ತೋರಿದ್ದಾರೆ.

ರಥ ನಿರ್ಮಾಣಕ್ಕೆ ಅವರು ದೇಣಿಗೆ ರೂಪದಲ್ಲಿ ನಗದು, ಬಂಗಾರ ನೀಡಲೂಬಹುದು; ಇದನ್ನು ಅಲ್ಲಗಳೆಯುವಂತಿಲ್ಲ ಎಂದರು. ಸೋಮವಾರ ಆಡಳಿತ ಮಂಡಳಿ ಸಮಿತಿಯ ಸಭೆಯಲ್ಲಿ ರಥ ನಿರ್ಮಾಣದ ಕುರಿತು ಚರ್ಚೆ ನಡೆದಿದೆ. ಅ.15ರೊಳಗೆ ರಥ ನಿರ್ಮಾಣ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ.

ರಥ ನಿರ್ಮಾಣ ಸಮಿತಿ ರಚಿಸಿ ಪ್ರತ್ಯೇಕ ಖಾತೆಯನ್ನು ತೆರೆಯಲಾಗುತ್ತದೆ. ಭಕ್ತರಿಂದ ಚಿನ್ನ ಮತ್ತು ನಗದು ರೂಪದ ದೇಣಿಗೆ ಸ್ವೀಕರಿಸಲಾಗುತ್ತದೆ. ಆರಂಭದಲ್ಲಿ 13 ಕೆ.ಜಿ.ಯಷ್ಟು ದೇಗುಲದ ಚಿನ್ನವನ್ನೇ ಬಳಸಿಕೊಳ್ಳಲಾಗುವುದು. ರಥವು 14 ಅಡಿ 8 ಇಂಚು ಎತ್ತರವಿರಲಿದೆ ಎಂದರು.

Advertisement

ದೇಗುಲದ ಹೊರಾಂಗಣ ಸುತ್ತುಪೌಳಿ ನಿರ್ಮಾಣಕ್ಕೆ 14 ಕೋಟಿ ರೂ.ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಿ ಸರಕಾರದ ಹಣಕಾಸು ಅನುಮೋದನೆಗೆ ಕಳುಹಿಸಿಕೊಟ್ಟಿದ್ದೇವೆ. ಶೀಘ್ರ ಅನುಮೋದನೆ ದೊರಕುವ ವಿಶ್ವಾಸವಿದೆ. 68 ಕೋಟಿ ರೂ.ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಪ್ರಗತಿಯಲ್ಲಿದೆ.

ಆದಿಸುಬ್ರಹ್ಮಣ್ಯದಲ್ಲಿ 182 ಕೊಠಡಿಗಳ ನೂತನ ವಸತಿಗೃಹ ಶೀಘ್ರ ಲೋಕಾರ್ಪಣೆಗೊಳ್ಳಲಿದೆ. ಕುಮಾರಧಾರೆ ನದಿಯಲ್ಲಿ ಭಕ್ತರಿಗೆ ಪುಣ್ಯ ಸ್ನಾನಕ್ಕೆ ತೆರಳಲು ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಎಲ್ಲೆಂದರಲ್ಲಿ ನದಿಗೆ ತ್ಯಾಜ್ಯ ಸುರಿಯದಂತೆ ಕಡಿವಾಣ ಹಾಕಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next