Advertisement

ಶ್ರೀಕೃಷ್ಣಮಠದ ಸುವರ್ಣಗೋಪುರ: ಚಿನ್ನದ ಹಾಳೆ ಜೋಡಣೆಗೆ ಮುಹೂರ್ತ

11:11 PM May 05, 2019 | sudhir |

ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರದ ಮೇಲ್ಛಾವಣಿಗೆ ಸ್ವರ್ಣದ ಹೊದಿಕೆ ಹೊದೆಸುವ ಕೆಲಸಕ್ಕೆ ಮುಹೂರ್ತ ಮಾಡಲಾಗಿದ್ದು ನಿತ್ಯ 400 ಹಾಳೆಗಳನ್ನು ಜೋಡಿಸಲು ನಿರ್ಧರಿಸಲಾಗಿದೆ. ಒಟ್ಟು 4,000 ಹಾಳೆಗಳನ್ನು ತಯಾರಿಸಲಾಗಿದೆ.

Advertisement

ಮೊದಲು ಸೋಮವಾರದಿಂದ ಸ್ವರ್ಣದ ಶೀಟುಗಳನ್ನು ಹೊದೆಸಲು ನಿರ್ಧರಿಸಿದ್ದರೂ ಈಗ ಗರ್ಭಗುಡಿಯ ಕೆಳಭಾಗದ ಕೆಲಸವನ್ನು ಮುಗಿಸಿ ಎರಡನ್ನೂ ಜತೆಜತೆಯಾಗಿ ಮಾಡಲು ನಿರ್ಧರಿಸಲಾಗಿದೆ. ಆದ್ದರಿಂದ ಗರ್ಭಗುಡಿಯ ಕೆಳಭಾಗದ ಮರದ ಪರಿಕರಗಳನ್ನು ಶನಿವಾರ ರಾತ್ರಿಯಿಡೀ ಸುಮಾರು 10 ಜನರು ತೆಗೆದು ಕೆಲಸ ಮಾಡಿದರು.

ರಾಮಟಂಕೆ
100 ಕೆ.ಜಿ. ಚಿನ್ನ, 900 ಕೆ.ಜಿ. ಬೆಳ್ಳಿ, 300 ಕೆ.ಜಿ. ತಾಮ್ರದ ಫ‌ಲಕಗಳಿಂದ ಗೋಪುರವನ್ನು ಸಮರ್ಪಿಸಲಾಗುತ್ತಿದೆ. ಸುಮಾರು 700 ಸಿಎಫ್ಟಿ ಸಾಗುವಾನಿ ಮರವನ್ನು ಬಳಸಲಾಗುತ್ತಿದೆ. ಗರ್ಭಗುಡಿಯ ಮೇಲ್ಛಾವಣಿಯಲ್ಲಿ ಒಟ್ಟು 1,500 ಕೆ.ಜಿ. ತಾಮ್ರವಿದ್ದು ಜೀರ್ಣವಾದ ಈ ತಾಮ್ರದ ತಗಡಿನಿಂದ ರಾಮ ಟಂಕೆ ತಯಾರಿಸಿ ಸುವರ್ಣ ಗೋಪುರ ನಿರ್ಮಾಣಕ್ಕೆ ಸಹಾಯಧನ ಮಾಡಿರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುವುದು. ಟಂಕೆಯಲ್ಲಿ ಒಂದು ಭಾಗದಲ್ಲಿ ಶ್ರೀ ಕೃಷ್ಣ ಹಾಗೂ ಇನ್ನೊಂದು ಬದಿಯಲ್ಲಿ ಶ್ರೀರಾಮನ
ವಿಗ್ರಹ ಇರಲಿದೆ.

ಮೇ 31-ಜೂ. 10: ವಿವಿಧ ಕಾರ್ಯಕ್ರಮಗಳು
ಗೋಪುರ ಸಮರ್ಪಣೆ, ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮೇ 31ರಿಂದ ಜೂ. 10ರವರೆಗೆ ನಡೆಯಲಿದೆ. ಜೂ. 1ರಂದು ಗರ್ಭಗುಡಿಯ ಸುವರ್ಣ ಲೇಪಿತ ಮೂರು ಕಲಶಗಳನ್ನು
ಜೋಡುಕಟ್ಟೆಯಿಂದ ಮೆರವಣಿಗೆ ಮೂಲಕ ತರಲಾಗುತ್ತದೆ. ಜೂ. 6ರಂದು ಸುವರ್ಣಗೋಪುರದ ಪ್ರತಿಷ್ಠಾಪನೆ ನಡೆಯಲಿದ್ದು, ಜೂ. 9ರಂದು ಬ್ರಹ್ಮ ಕಲಶೋತ್ಸವ ನಡೆಯಲಿದೆ.

70 ಕೆ.ಜಿ. ಚಿನ್ನ ಸಂಗ್ರಹ
ಸುಮಾರು 70 ಕೆ.ಜಿ. ಚಿನ್ನ ಈಗಾಗಲೇ ಬಂದಿದ್ದು, ಅಕ್ಷಯ ತದಿಗೆಯಂದು ಭಕ್ತರಿಗೆ ವಿಶೇಷ ಅವಕಾಶ ಕೊಡಲಾಗಿದೆ. ಈ ಅವಧಿಯಲ್ಲಿ ಮತ್ತಷ್ಟು ಚಿನ್ನ ಸೇರುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next