ಬೆಳಗಾವಿಯಲ್ಲಿರುವ ಸುವರ್ಣಸೌಧದಲ್ಲಿ ಸೋಮವಾರ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಉತ್ತರ ಕರ್ನಾಟಕದವರ ನಿರೀಕ್ಷೆಗಳೂ ಹೆಚ್ಚಾಗಿವೆ. ಒಟ್ಟು 10 ದಿನಗಳ ಕಾಲ ಈ ಅಧಿವೇಶನ ನಡೆಯಲಿದ್ದು, 14 ಮಸೂದೆಗಳು ಮಂಡನೆಯಾಗಲಿವೆ. ಗದ್ದಲಗಳಿಗೆ ಆಸ್ಪದ ನೀಡದೇ ಉತ್ತರ ಕರ್ನಾಟಕದ ಸಮಸ್ಯೆಗಳಿಗೇ ಹೆಚ್ಚಿನ ಒತ್ತು ಕೊಟ್ಟು ಚರ್ಚೆ ನಡೆಯಲಿ ಎಂಬುದು ಆಗ್ರಹವಾಗಿದೆ.
ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ ಬೆಳಗಾವಿ ಗಡಿ ವಿವಾದದ ಬಗ್ಗೆ ಕಿಚ್ಚು ಹಚ್ಚಿದ್ದು, ಈ ಬಗ್ಗೆ ಇನ್ನೂ ವಿವಾದದ ಹೊಗೆ ಹಾರಾಡುತ್ತಲೇ ಇದೆ. ಇದರ ಮಧ್ಯೆಯೇ ಸೋಮವಾರ ಎಂಇಎಸ್ ಮಹಾಮೇಳಾವ ಹಮ್ಮಿಕೊಂಡಿದೆ. ಈಗಾಗಲೇ ಕರ್ನಾಟಕ ಸರಕಾರ ಅಲ್ಲಿನ ಯಾವುದೇ ಶಾಸಕರು, ಸಚಿವರು, ಸಂಸದರು ಇದರಲ್ಲಿ ಭಾಗವಹಿಸದಂತೆ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಆದರೂ ಇದು ವಿವಾದವಾಗುವ ಎಲ್ಲ ಲಕ್ಷಣಗಳು ತೋರುತ್ತಿವೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಿ, ಬೆಳಗಾವಿ ಗಡಿ ವಿವಾದಕ್ಕೊಂದು ಶಾಶ್ವತ ಮುಕ್ತಿ ಸಿಗುವಂತೆ ನೋಡಿಕೊಳ್ಳಬೇಕಿದೆ.
ಇದರ ಜತೆಗೇ ಕಬ್ಬು ಬೆಳೆಗಾರರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಕೇಂದ್ರ ಸರಕಾರ ಘೋಷಿಸಿರುವ ಪ್ರತೀ ಟನ್‌ಗೆ 3,050 ರೂ.ಗಳ ಜತೆಗೆ ರಾಜ್ಯ ಸರಕಾರವೂ 500 ರೂ. ಸೇರಿಸಿಕೊಡಬೇಕು ಎಂದು ಕಬ್ಬು ಬೆಳೆಗಾರರು ಆಗ್ರಹಿಸುತ್ತಿದ್ದಾರೆ. ಬೆಳಗಾವಿ ಭಾಗದಲ್ಲೇ ಹೆಚ್ಚು ಕಬ್ಬು ಬೆಳೆಯುವುದರಿಂದ ಈ ಅಧಿವೇಶನದಲ್ಲಿ ತಮ್ಮ ಬೇಡಿಕೆಗೆ ಒಪ್ಪಿಗೆ ಸಿಗಬಹುದು ಎಂಬುದು ಅವರ ಆಶಯವಾಗಿದೆ.
ಹಾಗೆಯೇ ಕಳೆದ 15 ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ಇಲ್ಲಿನವರ ಸಮಸ್ಯೆಗಳಿಗೆ ಇದು ಉತ್ತರ ಕಂಡುಕೊಳ್ಳುವ ಯತ್ನ ಎಂದೇ ಭಾವಿಸಲಾಗಿದೆ. ಆದರೆ ಇದುವರೆಗೆ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಉತ್ತರ ಕೊಡುವ ಪ್ರಯತ್ನವಾಗಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಬೆಳಗಾವಿಯ ಮೊದಲ ಅಧಿವೇಶನ ದಲ್ಲಿಯೇ ಮಹಾದಾಯಿ, ಕಳಸಾ-ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆ ಸಹಿತ ಅನೇಕ ನೀರಾವರಿ ಯೋಜನೆಗಳು, ಉತ್ತರದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಿವೆಯೇ ವಿನಾ ಫಲ ನಗಣ್ಯವಾಗಿದೆ.
ಏಕೆಂದರೆ ಮಹಾದಾಯಿ, ಕಳಸಾಬಂಡೂರಿ ಯೋಜನೆಗಳು ಜಾರಿಯಾಗಿಲ್ಲ. ಯುಕೆಪಿ-3ನೇ ಹಂತದ ಯೋಜನೆ, ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆಯಾಗುತ್ತದೆ. ಆದರೂ ನಿರೀಕ್ಷಿತ ಫಲ ಸಿಕ್ಕಿಲ್ಲ. ಹೀಗಾಗಿ ಈ ಅಧಿವೇಶನದ ವೇಳೆಗಾದರೂ ಸರಕಾರ ಮತ್ತು ವಿಪಕ್ಷಗಳು, ಉತ್ತರ ಕರ್ನಾಟಕದ ಸಮಸ್ಯೆಗಳತ್ತ ಕಿವಿಗೊಟ್ಟು ಕೇಳಿ, ಚರ್ಚೆ ನಡೆಸಬೇಕಾಗಿದೆ. ಹಾಗೆಯೇ ಬಾಕಿ ಉಳಿದಿರುವ ಯೋಜನೆಗಳನ್ನು ಶೀಘ್ರದಲ್ಲೇ ಮುಗಿಸುವ ಬಗ್ಗೆಯೂ ಗಮನ ಹರಿಸಬೇಕಾಗಿದೆ.
ಚಿಲುಮೆ ಮತದಾರರ ಪಟ್ಟಿ ಕಳವು, ಕುಕ್ಕರ್ ಬ್ಲಾಸ್ಟ್ ಮತ್ತು ಈ ಕುರಿತ ಕೆಪಿಸಿಸಿ ಅಧ್ಯಕ್ಷರ ಹೇಳಿಕೆ, 40 ಪರ್ಸೆಂಟ್ ಕಮಿಷನ್, ಗಡಿ ಸಮಸ್ಯೆಯಂಥ ವಿಚಾರಗಳೂ ಚರ್ಚೆಗೆ ಬರುವ ಸಾಧ್ಯತೆಗಳಿವೆ. ಈ ಬಗ್ಗೆಯೂ ಸರಕಾರ ಮತ್ತು ವಿಪಕ್ಷಗಳು ಸಮನ್ವಯದಿಂದ ವರ್ತಿಸಿ, ಇವುಗಳ ಚರ್ಚೆ ಜತೆಗೇ ಉತ್ತರ ಕರ್ನಾಟಕದ ಕಲ್ಯಾಣಕ್ಕೆ ಮಾಡಬೇಕಾಗಿರುವ ಕೆಲಸಗಳೇನು ಎಂಬ ಬಗ್ಗೆ ನೋಡಬೇಕಾಗಿದೆ. ಇದನ್ನು ಬಿಟ್ಟು 10 ದಿನಗಳು ಬೆಳಗಾವಿಯಲ್ಲಿದ್ದು, ಯಾವುದೇ ಫಲಪ್ರದವಾಗುವಂಥ ಚರ್ಚೆ ನ‚ಡೆಯದೇ ಹೋದರೆ, ಉತ್ತರ ಕರ್ನಾಟಕದ ಜನತೆಗೆ ಮೋಸ ಮಾಡಿದಂತಾಗುತ್ತದೆ.