ಕುಂದಾಪುರ: ಸುಮಾರು ನಾಲ್ಕೂವರೆ ತಿಂಗಳುಗಳಿಂದ ನಾಪತ್ತೆಯಾಗಿದ್ದ ಏಳು ಮಂದಿ ಮೀನುಗಾರರ ಸಹಿತ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಮೇ 1ರಂದು ಪತ್ತೆಯಾಗಿದ್ದು ಲೋಕಸಭಾ ಚುನಾವಣೆ ಕಾರಣಕ್ಕಾಗಿ ಇದರ ಮಾಹಿತಿಯನ್ನು ಮೊದಲೇ ಬಹಿರಂಗಗೊಳಿಸದೇ ವಂಚಿಸಲಾಗಿದೆ ಎಂದು ಆರೋಪಿಸಿರುವ ಸಿಐಟಿಯು ಉಡುಪಿ ಜಿಲ್ಲಾ ಸಮಿತಿ, ಕೂಡಲೇ ಈ ಬಗ್ಗೆ ನ್ಯಾಯಾಂಗ ತನಿಖೆಗೆ ರಾಜ್ಯ ಸರಕಾರ ಆದೇಶಿಸಬೇಕು ಎಂದು ಆಗ್ರಹಿಸಿದೆ.
ಮಹಾರಾಷ್ಟ್ರ ಕರಾವಳಿಯಿಂದ ಕೇವಲ 33 ಕಿ.ಮೀ. ದೂರದಲ್ಲಿ ಬೋಟು ಪತ್ತೆಯಾಗಿದೆ. ಡಿ. 15 ರಿಂದ ಈ ವರೆಗೆ ಅರಬಿ ಸಮುದ್ರದಲ್ಲಿ ಯಾವುದೇ ಹವಾಮಾನ ವೈಪರೀತ್ಯ ಆದ ವರದಿ ಇಲ್ಲ. ಅಂದರೆ ಬೋಟು ಹಾಳಾಗಿ ಅಥವಾ ಹಿಡಿತ ತಪ್ಪಿ ಮುಳುಗಿದರೆ ಕೆಲವರಾದರೂ ಬದುಕಿ ಉಳಿಯುವ ಸಾಧ್ಯತೆ ಇತ್ತು. ಮೀನುಗಾರರು ಬದುಕಿ ಉಳಿದಿರುವ ಲಕ್ಷಣಗಳು ಕಾಣುತ್ತಿಲ್ಲ.
ಇದೀಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಸೇರಿದ ಉಡುಪಿ ಶಾಸಕರು ಭಾರತೀಯ ನೌಕಾಪಡೆಯ ಐ.ಎನ್.ಎಸ್. ಕೊಚ್ಚಿನ್ ನೌಕೆಯು ಮೀನುಗಾರರ ಬೋಟಿಗೆ ಢಿಕ್ಕಿ ಹೊಡೆದು ಮುಳುಗಿಸಿರುವ ಸಂಶಯ ವ್ಯಕ್ತಪಡಿಸಿದ್ದಾರೆ. ದೋಣಿ ಪತ್ತೆಯಾಗಿರುವುದು ಭಾರತದ ಸಾಗರದ ಗಡಿಯೊಳಗೆ ಆಗಿರುವುದರಿಂದ ಇದು ಶತ್ರು ಪಡೆಯ ಕೆಲಸ ಅಲ್ಲ ಎಂದೇ ಹೇಳಬಹುದು. ಭಾರತ ನೌಕಾಪಡೆಯು ಬೋಟನ್ನು ಮುಳುಗಿಸಿರುವ ಸಾಧ್ಯತೆ ಹೆಚ್ಚು ಎಂದು ಸಂಶಯ ವ್ಯಕ್ತವಾಗುತ್ತದೆ ಎಂದು ಸಿಐಟಿಯು ಆರೋಪಿಸಿದೆ.
ಎ. 29ರ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿ ಮೇ 1 ರಂದು ಬೋಟಿನ ಅವಶೇಷಗಳು ಕಾಣಿಸಿದವು ಎಂದು ಅಲ್ಲಿಗೆ ತೆರಳಿದ್ದ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ. ಸೋನಾರ್ ತಂತ್ರಜ್ಞಾನದ ಮೂಲಕ 3 ದಿನಗಳಲ್ಲಿ ಅವಶೇಷಗಳ ಪತ್ತೆ ಸಾಧ್ಯವಾಗುವುದಾದರೆ ನಾಲ್ಕೂವರೆ ತಿಂಗಳಲ್ಲಿ ಯಾಕೆ ಸಾಧ್ಯವಾಗಲಿಲ್ಲ ಎಂದು ಬಿಜೆಪಿ ಮುಖಂಡರು ಮತ್ತು ಕೇಂದ್ರ ಸರಕಾರ ಉತ್ತರ ನೀಡಬೇಕಾಗಿದೆ ಎಂದು ಸಿಐಟಿಯುವಿನ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ಅಧ್ಯಕ್ಷ ಕೆ. ಶಂಕರ್ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
ಏಳು ಮಂದಿ ಮೀನುಗಾರರ ಕುಟುಂಬದವರಿಗೆ ಹಾಗೂ ಬೋಟಿಗೆ ಸಂಪೂರ್ಣ ಪರಿಹಾರವನ್ನು ಕೇಂದ್ರ ಮತ್ತು ರಾಜ್ಯ ಸರಕಾರ ನೀಡಬೇಕೆಂದು ಸಿಐಟಿಯು ಒತ್ತಾಯಿಸಿದೆ.