ಮಲ್ಪೆ :ನಾಪತ್ತೆಯಾಗಿರುವ ಸುವರ್ಣ ತ್ರಿಭುಜದ ಮಾಲಕ ಚಂದ್ರಶೇಖರ್ ಕೋಟ್ಯಾನ್ ಹಿಂದೆ ದುರ್ಗಾಂಬ, ಹೊಯ್ಸಳ ಹೆಸರಿನ ಆಳಸಮುದ್ರ ಬೋಟುಗಳಲ್ಲಿ ಕಾರ್ಮಿಕ (ತಂಡೇಲ)ನಾಗಿ ಕೆಲಸ ಮಾಡುತ್ತಿದ್ದು, ಎರಡು ವರ್ಷ ಹಿಂದೆ ಪಾಲುದಾರಿಕೆಯಲ್ಲಿ ಈ ಆಳಸಮುದ್ರ ಸ್ಪೀಡ್ ಬೋಟ್ ಮಾಡಿದ್ದರು. ಈಗಾಗಲೇ ಎರಡು ಋತು ಮುಗಿಸಿ, ಮೂರನೇ ವರ್ಷದ ಮೀನುಗಾರಿಕೆಯಲ್ಲಿ ತೊಡಗಿತ್ತು. ಆಗಸ್ಟ್‌ನಿಂದ ನವೆಂಬರ್ ವರೆಗೆ ಮೀನುಗಾರಿಕೆ ನಡೆಸಿ, ಸಣ್ಣ ಪುಟ್ಟ ದುರಸ್ತಿ ಕೆಲಸ ಮುಗಿಸಿ, ಪೂಜೆ ಮಾಡಿ ಮೀನುಗಾರಿಕೆಗೆ ತೆರಳಿದ್ದರು.
ಚಂದ್ರಶೇಖರ್ ಕೋಟ್ಯಾನ್ ಮೀನುಗಾರಿಕೆ ವೃತ್ತಿಯಲ್ಲಿ ಅತ್ಯಂತ ನಿಪುಣರಾಗಿದ್ದವರು. ಅನಗತ್ಯವಾಗಿ ಡೀಸೆಲ್ ಖರ್ಚು ಮಾಡದೆ ಹೆಚ್ಚು ಮೀನು ಹಿಡಿದು ತರುವಲ್ಲಿ ನಿಸ್ಸೀಮರಾಗಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ವರ್ಷದ ಹಿಂದೆ ಹೊಸ ಮನೆ ಕಟ್ಟಿದ್ದರು. 10 ವರ್ಷಗಳ ಹಿಂದೆ ಶ್ಯಾಮಲಾ ಅವರನ್ನು ಮದುವೆಯಾಗಿದ್ದ ಅವರಿಗೆ ಮಕ್ಕಳಿಲ್ಲ. ಚಂದ್ರಶೇಖರ ಕೋಟ್ಯಾನ್ ಒಟ್ಟು 8 ಜನ ಮಕ್ಕಳಲ್ಲಿ 3ನೆಯವರು.
ದಾಮೋದರ ಸಾಲ್ಯಾನ್ ಅವರು ಚಂದ್ರಶೇಖರ್ ಅವರ ಪಕ್ಕದ ಮನೆಯವರು. ಈ ಹಿಂದೆ ಬೇರೆ ಬೋಟಿನಲ್ಲಿ ದುಡಿಯುತ್ತಿದ್ದ ಅವರು ಈ ವರ್ಷ ಚಂದ್ರಶೇಖರ್ ಅವರ ಬೋಟಿನಲ್ಲಿ ದುಡಿಯಲು ಸೇರಿದ್ದರು.
ದಾಮೋದರ ಅವರ ತಾಯಿ ಸೀತಾ ಸಾಲ್ಯಾನ್ ವಿಷಯ ತಿಳಿದಂದಿನಿಂದ ಹಾಸಿಗೆ ಹಿಡಿದಿದ್ದಾರೆ. ತಂದೆ ಸುವರ್ಣ ತಿಂಗಳಾಯ ಅನಾರೋಗ್ಯದಲ್ಲಿದ್ದು, ನಡೆದಾಡಲು ಸಾಧ್ಯವಾಗುತ್ತಿಲ್ಲ. 6 ಮಂದಿ ಮಕ್ಕಳಲ್ಲಿ ದಾಮೋದರ ಸಾಲ್ಯಾನ್ 2ನೆಯವರು. 5 ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೂ ಮಕ್ಕಳಿಲ್ಲ. ನಾಪತ್ತೆಯಾದ ಇನ್ನುಳಿದ 5 ಮಂದಿ ಭಟ್ಕಳ, ಕುಮಟಾ ಮತ್ತು ಮಂಕಿ ಮೂಲದ ಮೀನುಗಾರ ಕಾರ್ಮಿಕರು.
ಮಹಾರಾಷ್ಟ್ರದ ಸಿಂಧುದುರ್ಗ ಮತ್ತು ಮಾಲ್ವಣ್‌ನಲ್ಲಿ ಎಸ್.ಟಿ. ಎಂದು ಬರೆದಿರುವ ಮೀನುಗಳನ್ನು ತುಂಬಿಸುವ ಎರಡು ಕಂಟೈನರ್‌ಗಳು ಪತ್ತೆಯಾಗಿದ್ದು, ಅವುಗಳನ್ನು ಸ್ಥಳೀಯ ಮೀನುಗಾರರು ಬಣ್ಣ ಬದಲಾಯಿಸಿ ಉಪಯೋಗಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರ ಸಹೋದರ ನಿತ್ಯಾನಂದ ಪೊಲೀಸರ ಜತೆ ಪರಿಶೀಲನೆಗೆ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ. ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ.
ಪ್ರಮೋದ್ ಸಾಲ್ಯಾನ್, ಪಾವಂಜಿಗುಡ್ಡೆ (ದಾಮೋದರ ಸಾಲ್ಯಾನ್ ಅವರ ಸಹೋದರ)