ಆಗ್ರಾ: ಸ್ಕಾರ್ಪಿಯೋ ಎಸ್ ಯುವಿ ಮತ್ತು ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಗುರುವಾರ ಮುಂಜಾನೆ ಆಗ್ರಾ- ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ-2ರ ಆಗ್ರಾದ ಎತ್ಮಾದಪುರ ಪ್ರದೇಶದಲ್ಲಿ ಮುಂಜಾನೆ 5.15ರ ಸುಮಾರಿಗೆ ಈ ಅಪಘಾತ ನಡೆದಿದೆ. ಸ್ಕಾರ್ಪಿಯೋ ಕಾರಿನ ಚಾಲಕ ನಿದ್ದೆಯ ಮಂಪರಿನ ಕಾರಣ ವಾಹನದ ನಿಯಂತ್ರಣ ಕಳೆದುಕೊಂಡ ಕಾರಣ ಅಪಘಾತ ನಡೆದಿದೆ ಎಂದು ವರದಿಗಳು ತಿಳಿಸಿದೆ.
ಇದನ್ನೂ ಓದಿ:ತಂದೆಯೇ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿ ಸಿಲುಕಿದ ಎಂಟರ ಹರೆಯದ ಬಾಲಕ ದಾರುಣ ಬಲಿ!
ಸ್ಕಾರ್ಪಿಯೋ ವಾಹನದಲ್ಲಿ 12 ಜನರು ಪ್ರಯಾಣಿಸುತ್ತಿದ್ದರು. ಎತ್ಮಾದಪುರ ಕಡೆಯಿಂದ ಬರುತ್ತಿದ್ದ ಸ್ಕಾರ್ಪಿಯೋ ಕಾರು ರಸ್ತೆ ವಿಭಜಕದ ಮೇಲೆ ಮತ್ತೊಂದು ಬದಿಯ ರಸ್ತೆಗೆ ಹೋಗಿತ್ತು. ಆ ವೇಳೆ ಆಗ್ರಾ ಕಡೆಯಿಂದ ಬರುತ್ತಿದ್ದ ಟ್ರಕ್ ಗೆ ಢಿಕ್ಕಿ ಹೊಡೆದಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಕಾರ್ಪಿಯೋ ಕಾರು ಜಾರ್ಖಂಡ್ ರಾಜ್ಯದ ನೋಂದಣಿ ಸಂಖ್ಯೆ ಹೊಂದಿದೆ ಎಂದು ಆಗ್ರಾ ಎಸ್ಎಸ್ ಪಿ ಬಬ್ಲು ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರಿಗೆ ಶಿವರಾತ್ರಿ ಸಂಭ್ರಮ! ಅಂತರ್ ನಿಗಮಗಳ ವರ್ಗಾವಣೆಗೆ ಅಸ್ತು
ಅಪಘಾತದ ರಭಸಕ್ಕೆ ಸ್ಕಾರ್ಪಿಯೋ ನಜ್ಜುಗುಜ್ಜಾಗಿದೆ. ಟ್ರಕ್ ಕೂಡಾ ತಿರುಗಿ ನಿಂತಿದೆ. ಅಪಘಾತದವಾದ ಕೂಡಲೇ ಸ್ಥಳೀಯರು ಕಾರಿನಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಎಂಟು ಮಂದಿ ಮೃತಪಟ್ಟಿದ್ದಾರೆ.