ಮೈಸೂರು: 1986ರ ಡಿಸೆಂಬರ್ 5ರಂದು ಸುತ್ತೂರಿನ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಲಿಂಗೈಕ್ಯರಾದರು. ಡಿ.6ರಂದು ರಾಜೇಂದ್ರ ಶ್ರೀಗಳ ಅಂತ್ಯ ಸಂಸ್ಕಾರಕ್ಕೆ ಶಿವಕುಮಾರ ಮಹಾ ಸ್ವಾಮೀಜಿ ತಾವೇ ಮುಂದೆ ನಿಂತು ಮಾರ್ಗದರ್ಶನ ಮಾಡಿದ್ದರು. 1986ರ ಡಿಸೆಂಬರ್ 18ರಂದು ಈಗಿನ ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಪಟ್ಟಾಧಿಕಾರ ಸಮಾರಂಭ ಕೂಡ ಶಿವಕುಮಾರ ಮಹಾಸ್ವಾಮೀಜಿ ನೇತೃತ್ವದಲ್ಲೇ ನಡೆಯಿತು.
ಅಟ್ಟಣಿಗೆ ಹತ್ತಿದ್ದರು: 1999ರ ಜನವರಿ 15ರಂದು ಸುತ್ತೂರು ಶ್ರೀಕ್ಷೇತ್ರದಲ್ಲಿ ಕತೃ ಗದ್ದುಗೆಯ ಗೋಪುರ ಸುವರ್ಣ ಕಲಶಾರೋಹಣ ಸಮಾರಂಭಕ್ಕೆ ಆಗಮಿಸಿದ್ದ ಶಿವಕುಮಾರಸ್ವಾಮೀಜಿಗಳು ಯಾರ ಸಹಾಯವಿಲ್ಲದೆ ಅಟ್ಟಣಿಗೆ ಹತ್ತಿ ಕಲಶಾರೋಹಣ ಮಾಡಿ ಇಳಿದು ಬಂದರು ಎಂದು ಸ್ಮರಿಸುತ್ತಾರೆ ಸುತ್ತೂರು ಮಠದ ಸಭೆ, ಸಮಾರಂಭಗಳನ್ನು ತಮ್ಮ ಕ್ಯಾಮರಾ ಕಣ್ಣಿಂದ ಸೆರೆ ಹಿಡಿಯುತ್ತಿದ್ದ ಹಿರಿಯ ಛಾಯಾಗ್ರಾಹಕ ಎಸ್.ಎಂ.ಜಂಬುಕೇಶ್ವರ.
ಸುತ್ತೂರಿನಲ್ಲಿ ಅನ್ನ ದಾಸೋಹಕ್ಕೆ ಪ್ರೇರಣೆ: ಸ್ವಾತಂತ್ರ್ಯ ಪೂರ್ವದಲ್ಲೇ ಐದಾರು ಸಾವಿರ ಮಕ್ಕಳಿಗೆ ವಿದ್ಯೆಯ ಜೊತೆಗೆ ಅನ್ನ ದಾಸೋಹ ಮಾಡುತ್ತಾ ಬಂದಿದ್ದ ಶಿವಕುಮಾರ ಸ್ವಾಮಿಗಳು ಸುತ್ತೂರು ಶ್ರೀಕ್ಷೇತ್ರದಲ್ಲಿ ಅನ್ನ ದಾಸೋಹ ವಿಸ್ತರಣೆಗೆ ಪ್ರೇರಕರು.
ಸುತ್ತೂರು ಮಠದ ಮಂತ್ರ ಮಹರ್ಷಿಗಳಿಗೆ ದಾಸೋಹ ಪರಂಪರೆಗೆ ನಾಂದಿ ಹಾಡಲು ಇಚ್ಛೆಯಿತ್ತಾದರೂ ಸಂಪನ್ಮೂಲ ಹೊಂದಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರ ನಂತರ ಪೀಠ ಅಲಂಕರಿಸಿದ ರಾಜೇಂದ್ರ ಶ್ರೀಗಳಿಗೂ ಆರ್ಥಿಕ ಸಮಸ್ಯೆ ಕಾಡಿತ್ತು. ಆದರೆ, ಶಿವಕುಮಾರ ಮಹಾಸ್ವಾಮಿಗಳು ಧೈರ್ಯ ನೀಡಿದ್ದರಿಂದ ಅಕ್ಷರ-ಅನ್ನ ದಾಸೋಹ ಮಾಡಬೇಕೆಂಬ ಸಂಕಲ್ಪದೊಂದಿಗೆ
ಮೈಸೂರಿನ ವಾಣಿ ವಿಲಾಸ ರಸ್ತೆಯಲ್ಲಿ 1936ರ ಸುಮಾರಿಗೆ ಹತ್ತು ವಿದ್ಯಾರ್ಥಿಗಳೊಂದಿಗೆ ಆರಂಭಿಸಿದ ಕ್ಯಾತನಹಳ್ಳಿ ಪಾಠಶಾಲೆ, ಜೆಎಸ್‌ಎಸ್‌ನ ಮೊಟ್ಟ ಮೊದಲ ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿನಿಲಯ.ಇಂದು ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆ. ಸಾಮಾಜಿಕ ಸಮಸ್ಯೆ, ದಾಸೋಹದ ಸಮಸ್ಯೆ ಎದುರಾದಾಗ ರಾಜೇಂದ್ರ ಶ್ರೀಗಳು ಸಿದ್ಧಗಂಗಾ ಮಠಕ್ಕೆ ತೆರಳಿ ಶಿವಕುಮಾರ ಸ್ವಾಮೀಜಿಯವರ ಮಾರ್ಗದರ್ಶನ ಪಡೆದು ಬರುತ್ತಿದ್ದರು.