Advertisement

ಜನಸಾಗರದ ಮಧ್ಯೆ ಸುತ್ತೂರು ರಥೋತ್ಸವ

07:24 AM Feb 04, 2019 | |

ಮೈಸೂರು: ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಅದ್ಧೂರಿ ರಥೋತ್ಸವ ನಡೆಯಿತು. ರಥೋತ್ಸವದ ನಿಮಿತ್ತ ಮುಂಜಾನೆ 4 ಗಂಟೆಯಿಂದಲೇ ಶಿವರಾತ್ರೀದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಶಿವದೀಕ್ಷೆ, ಶ್ರೀಮಠದ ಗುರು ಪರಂಪರೆಯ ಸಂಸ್ಮರಣೋತ್ಸವ,

Advertisement

ಮಂತ್ರಮಹರ್ಷಿ ಗದ್ದುಗೆಗೆ ರುದ್ರಾಭಿಷೇಕ, 53ನೇ ಲಿಖೀತಮಂತ್ರ ಸಂಸ್ಮರಣೋತ್ಸವ, ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಗದ್ದುಗೆಗೆ ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ಬೆಳಗ್ಗೆ 8ಗಂಟೆಗೆ ಆದಿ ಜಗದ್ಗುರುಗಳವರ ಉತ್ಸವಮೂರ್ತಿಗೆ ರುದ್ರಾಭಿಷೇಕ, ರಾಜೋಪಚಾರ ನೆರವೇರಿಸಿದ ನಂತರ ಬೆಳಗ್ಗೆ 10.55ಕ್ಕೆ ರಥೋತ್ಸವಕ್ಕೆ ಚಾಲನೆ ದೊರೆಯಿತು.

ಬೃಹತ್‌ ರಥ: ಕರ್ತೃಗದ್ದುಗೆಯ ಮುಂಭಾಗದಿಂದ ಆರಂಭವಾದ ರಥೋತ್ಸವ ಸುತ್ತೂರು ಗ್ರಾಮದಲ್ಲಿ ಒಂದು ಸುತ್ತು ಹಾಕಿ ಮತ್ತೆ ಸ್ವಸ್ಥಾನ ಸೇರಿತು. ಕಳೆದ ವರ್ಷಮಾಡಿಸಿರುವ ಬೃಹತ್‌ ರಥವನ್ನೂ ಕರ್ತೃ ಗದ್ದುಗೆಯ ಮುಂಭಾಗದ ಕಾಂಕ್ರೀಟ್ ರಸ್ತೆಯಲ್ಲಿ ಮಾತ್ರ ಎಳೆಯಲಾಯಿತು.

ರಥೋತ್ಸವಕ್ಕೆ ಚಾಲನೆ ದೊರಕುತ್ತಿದ್ದಂತೆ ವಯೋವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳು ಶಿವರಾತ್ರೀಶ್ವರರಿಗೆ ಜಯ ಘೋಷ ಮೊಳಗಿಸಿ, ಹಣ್ಣು-ದವನವನ್ನು ತೇರಿಗೆ ಎಸೆದು ಧನ್ಯತೆ ಮೆರೆದರು. ಕೆಲವರು ರಥ ಎಳೆಯುವ ಹಗ್ಗಕ್ಕೆ ಕೈಕೊಟ್ಟು ಸ್ವಲ್ಪ ದೂರ ತೇರನ್ನೆಳೆದು ಭಕ್ತಿ ಭಾವ ಮೆರೆದರು. ಇನ್ನೂ ಕೆಲವರು ದೂರದಲ್ಲೇ ನಿಂತು ತೇರಿನಲ್ಲಿದ್ದ ಶಿವರಾತ್ರಿ ಶಿವಯೋಗಿಗಳವರ ಉತ್ಸವಮೂರ್ತಿಗೆ ಭಕ್ತಿಯಿಂದ ಕೈಮುಗಿದರು.

ಜನಸಾಗರ: ಭಾನುವಾರದ ರಜಾದಿನವಾದ್ದರಿಂದ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ನಾಡಿನ ಮೂಲೆ ಮೂಲೆಯಿಂದ ಶ್ರೀಮಠದ ಭಕ್ತರು ಆಗಮಿಸಿದ್ದರಿಂದ ಸುತ್ತೂರು ಗ್ರಾಮದಲ್ಲಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸಿದ್ದರು. ಹೀಗಾಗಿ ಸುತ್ತೂರು ಗ್ರಾಮದ ಎಲ್ಲಾ ರಸ್ತೆಗಳೂ ಜನರಿಂದ ತುಂಬಿ ಹೋಗಿದ್ದವು. ಬಂದೋಬಸ್ತ್ಗೆ ನಿಯೋಜಿತರಾಗಿದ್ದ ಪೊಲೀಸರು ಹಾಗೂ ಅಶ್ವಾರೋಹಿ ಪಡೆ ಜನರನ್ನು ನಿಯಂತ್ರಿಸಲು ಹರ ಸಾಹಸ ಪಡಬೇಕಾಯಿತು.

Advertisement

ಕಪಿಲೆಯಲ್ಲಿ ಮಿಂದೆದ್ದ ಜನ: ರಥೋತ್ಸವ, ಧಾರ್ಮಿಕ ಸಭೆಯ ನಂತರ ಪ್ರಸಾದ ಸ್ವೀಕರಿಸಿ ತಮ್ಮ ಊರುಗಳತ್ತ ಹೊರಟಿದ್ದರಿಂದ ಮಧ್ಯಾಹ್ನದ ನಂತರ ಸುತ್ತೂರು ಗ್ರಾಮದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿ ವಾಹನಗಳು ನಿಂತಲ್ಲೇ ನಿಲ್ಲಬೇಕಾಯಿತು. ಮಧ್ಯಾ ಹ್ನದ ಬಿಸಿಲಿನ ಝಳದಿಂದ ಮೈ-ಮನವನ್ನು ತಂಪಾಗಿಸಲು ನೂರಾರು ಯುವಕರು ಕಪಿಲಾ ನದಿಯಲ್ಲಿ ಮಿಂದೇಳುತ್ತಿದ್ದುದು ಕಂಡುಬಂತು.

ಕೃಷಿ ಮೇಳ ವೀಕ್ಷಣೆ: ಮಕ್ಕಳನ್ನು ಕರೆತಂದಿದ್ದ ದಂಪತಿ ಜಾತ್ರೆಯಲ್ಲಿ ಹಣ್ಣು-ದವನ ಖರೀದಿಯ ಜೊತೆಗೆ ಮಕ್ಕಳ ಆಟಿಕೆಗಳನ್ನೂ ಖರೀದಿಸಿದರು. ರೈತರು ದನಗಳ ಜಾತ್ರೆ ಹಾಗೂ ಕೃಷಿ ಮೇಳವನ್ನು ವೀಕ್ಷಿಸಿ ಮಾಹಿತಿ ಪಡೆಯುತ್ತಿದ್ದುದು ಕಂಡು ಬಂತು. ಸುತ್ತೂರು ಉಚಿತ ಶಾಲೆಯ ಬಳಿ ಚಿತ್ರ ಕಲೆ ಹಾಗೂ ಗಾಳಿ ಪಟ ಸ್ಪರ್ಧೆಯಲ್ಲಿ ಬಣ್ಣ ಬಣ್ಣದ ಗಾಳಿಪಟಗಳು ಆಗಸದಲ್ಲಿ ಚಿತ್ತಾರ ಬಿಡಿಸಿದವು.

ಸಂಜೆ 6ಗಂಟೆಗೆ ಮಹಾ ರುದ್ರಾಭಿಷೇಕ ನೆರವೇರಿಸಲಾಯಿತು. ರಾತ್ರಿ 9ಗಂಟೆಗೆ ನಂಜುಂಡೇಶ್ವರರು, ಜಗಜ್ಯೋತಿ ಬಸವೇಶ್ವರರು, ಎಡೆಯೂರು ಸಿದ್ಧಲಿಂಗೇಶ್ವರರು, ಜಗದ್ಗುರು ಈಶಾನೇಶ್ವರ ಒಡೆಯರು ಹಾಗೂ ಘನಲಿಂಗ ಶಿವಯೋಗಿಗಳವರ ಉತ್ಸವ, ಮಂತ್ರಮಹರ್ಷಿ ಶಿವರಾತ್ರೀಶ್ವರ ಮಹಾಸ್ವಾಮಿಗಳವರು ಮತ್ತು ಕಾಯಕ ತಪಸ್ವಿ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಭಾವಚಿತ್ರಗಳ ಉತ್ಸವ ನೆರವೇರಿಸಲಾಯಿತು.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next