ಈಶ್ವರಮಂಗಲ: ಎಲ್ಲರಿಗೂ ಕಾನೂನಿನ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ಕಾನೂನಿನ ಬಗ್ಗೆ ಸಮರ್ಪಕವಾದ ಅರಿವು ಹೊಂದಿದರೆ ಸಮಾಜದಲ್ಲಿ ಜಾಗೃತಿ ಮೂಡಿ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಪುತ್ತೂರು ಜೆಎಂಎಫ್ಸಿಯ ಹೆಚ್ಚುವರಿ ಹಿರಿಯ ವ್ಯಾವಹಾರಿಕ ನ್ಯಾಯಾಧೀಶೆ ಲತಾದೇವಿ ಅಭಿಪ್ರಾಯ ಪಟ್ಟರು.
ಅವರು ಈಶ್ವರಮಂಗಲ ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವಾ ಸಮಿತಿ ಪುತ್ತೂರು, ವಕೀಲರ ಸಂಘ ಪುತ್ತೂರು ಆಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಅಭಿಯಾನ ಮತ್ತು ಸಂಚಾರಿ ಲೋಕ ಅದಾಲತ್‌ನಲ್ಲಿ ಮಾತನಾಡಿದರು.
ಮೇನಾಲ ಮಧುರಾ ಇಂಟರ್ ನ್ಯಾಶನಲ್‌ನ ಸಂಚಾಲಕ ಅಬೂಬಕರ್ ಮಾತನಾಡಿ, ಕಾನೂನಿನ ಮಾಹಿತಿ ಗ್ರಾಮೀಣ ಪ್ರದೇಶದ ಜನರಲ್ಲಿ ಕಡಿಮೆ ಇದೆ. ಇಂತಂಹ ಕಾರ್ಯಕ್ರಮಗಳಿಂದ ಜನರಲ್ಲಿ ಕಾನೂನಿನ ಅರಿವು ಮೂಡಲು ಸಾಧ್ಯ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿ ದ.ಕ. ಜಿಲ್ಲಾ ಮಹಿಳಾ ಸಾಂತ್ವನ ಕೇಂದ್ರದ ಜೋಹರಾ ನಿಸಾರ್ ಅಹ್ಮದ್ ಅವರು ಮಹಿಳಾ ಮತ್ತು ಮಕ್ಕಳ ಹಕ್ಕುಗಳು ಮತ್ತು ಪೋಕ್ಸೋದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮಧುರಾ ಇಂಟರ್ ನ್ಯಾಶನಲ್ ಸ್ಕೂಲ್‌ನ ಅಧ್ಯಕ್ಷ ಹನೀಫ್ ಮಧುರಾ, ನಿರ್ದೇಶಕ ಅಬ್ದುಲ್ ರಹಿಮಾನ್, ಈಶ್ವರಮಂಗಲ ಪೊಲೀಸ್ ಹೊರಠಾಣೆಯ ಎಎಸೈ ಸುರೇಶ್ ರೈ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ರೇಷ್ಮಾ ಕೆ. ಸ್ವಾಗತಿಸಿದರು. ಸಂಯೋಜಕಿ ಸಾಯಿರಾ ಕೆ. ಝಬೇರ್ ವಂದಿಸಿದರು. ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸ್ಕೂಲ್‌ನ ಆಡಳಿತಾಧಿಕಾರಿ ಮಹಮ್ಮದ್ ಸಾಮು, ವಕೀಲರಾದ ರಾಜೇಶ್ವರಿ, ಜನಾರ್ದನ್, ಚಂದ್ರಾವತಿ, ಅಕ್ಷತಾ, ರಂಗಪ್ಪ ಸಹಕರಿಸಿದರು.
ಸಮಾನ ಹಕ್ಕು
ಅಧ್ಯಕ್ಷತೆ ವಹಿಸಿದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ. ಮಾತನಾಡಿ, ಕಾನೂನಿನಲ್ಲಿ ಹೆಣ್ಣು ಮತ್ತು ಗಂಡಿಗೆ ಸಮಾನ ಹಕ್ಕು ಇದೆ. ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು. ಕಾನೂನಿನ ಜ್ಞಾನ ಇರಬೇಕು ಎಂದು ಹೇಳಿದರು.