ಕುಷ್ಟಗಿ: ಅಸಮರ್ಪಕ ಮಳೆಯಿಂದ ಕೃಷಿಯಲ್ಲಿ ಸುಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಅನುಷ್ಠಾನಗೊಂಡ ಕೇಂದ್ರ ಸರ್ಕಾರದ ರಾಷ್ಟ್ರೀಯ ಸುಸ್ಥಿರ ಕೃಷಿ ಯೋಜನೆ(ಎನ್‌ಎಂಎಸ್‌ಎ-ಆರ್‌ಎಡಿ)ಅನುಷ್ಠಾನ ಸಮರ್ಪಕವಾಗಿಲ್ಲ.
ಕೆಲ ವರ್ಷಗಳಿಂದ ಮಳೆ ಕೊರತೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶದ ಶೇ. 60 ಕೃಷಿ ಭೂಮಿಯಲ್ಲಿ ಮಾತ್ರ ಬಿತ್ತನೆ ಮಾಡಲಾಗುತ್ತಿದ್ದು, ಒಟ್ಟು ಆಹಾರ ಉತ್ಪಾದನೆ ಶೇ. 40ರಷ್ಟಾಗಿದೆ. ಮಳೆಯಾಧಾರಿತ ಕೃಷಿ ಅಭಿವದ್ಧಿಯೊಂದಿಗೆ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಬೇಡಿಕೆಗಳ ಅನುಗುಣವಾಗಿ ಆಹಾರ ಪೂರೈಸುವ, ಉತ್ಪಾದಿಸುವ ಉದ್ದೇಶದಿಂದ ರಾಷ್ಟ್ರೀಯ ಸುಸ್ಥಿರ ಕೃಷಿ ಯೋಜನೆ (ನ್ಯಾಶನಲ್ ಮಿಷನ್ ಫಾರ್ ಸ್ಟೈನಬಲ್ ಅಗ್ರಿಕಲ್ಚರ್)ತಾಲೂಕಿನಲ್ಲಿ ದಾಖಲೆಯಲ್ಲಿ ಮಾತ್ರ ಪ್ರಗತಿಯಲ್ಲಿದೆ.
49 ಲಕ್ಷ ರೂ.: 2018-19ನೇ ಸಾಲಿನಲ್ಲಿ ತಾಲೂಕಿನ ಕೆ. ಬೋದೂರು ತಾಂಡಾ, ವಣಗೇರಾ ಹಾಗೂ ಟಕ್ಕಳಕಿ ಗ್ರಾಮಗಳ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 44 ಫಲಾನುಭವಿಗಳನ್ನು ಆಯ್ಕೆ ಮಾಡಿ 49 ಲಕ್ಷ ರೂ. ವೆಚ್ಚ ತೋರಿಸಲಾಗಿದೆ. ನಿಗದಿತ 2 ಹೆಕ್ಟೇರ್ ಗರಿಷ್ಠ ಮಿತಿಯಲ್ಲಿ ಎಸ್‌ಸಿ, ಎಸ್‌ಟಿ ವರ್ಗದ ಕೊಳವೆಬಾವಿ ನೀರಾವರಿ ಆಶ್ರಿತ ಹಿಡುವಳಿದಾರರನ್ನು ಯೋಜನಾ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಡ್ರಿಪ್ ವ್ಯವಸ್ಥೆ ಮಾಡಿಕೊಡುವುದು, ಹಸು, ಜೇನು ಸಾಕಾಣಿಕೆಗೆ ಪ್ರೋತ್ಸಾಹಿಸಿ ರೈತರ ಆದಾಯ ವರ್ಷಪೂರ್ತಿ ಆದಾಯ ಸ್ಥಿರೀಕರಿಸುವುದು ಯೋಜನೆಯ ಉದ್ದೇಶವಾಗಿದೆ.
ಹಣ ಕೇಳಿಲ್ಲ, ರೈತರು ಕೊಟ್ಟಿಲ್ಲ: ಈ ಯೋಜನೆ ಫಲಾನುಭವಿಗಳಾಗಲು ಶೇ. 50 ಖರ್ಚು ಭರಿಸಬೇಕು. ಆದರೆ ಕೃಷಿ ಇಲಾಖೆ ಸದರಿ ಫಲಾನುಭವಿಗಳಿಂದ ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಪುಸ್ತಕ ಮಾತ್ರ ಪಡೆದಿದ್ದು, ಯೋಜನೆಯ ಸವಿಸ್ತಾರದ ಮಾಹಿತಿ ನೀಡಿಲ್ಲ. ತಾನೇ ಖಾಸಗಿ ಏಜೆನ್ಸಿಗೆ ವಹಿಸಿದೆ. ಫಲಾನುಭವಿಗಳ ಜಮೀನಿನಲ್ಲಿ ಬೇಕಾಬಿಟ್ಟಿ ಗೇಣುದ್ದದ ಗುಂಡಿ ಅಗೆದು, ನಿಂಬೆ, ಮಾವು ಇನ್ನಿತರ ಸಸಿಗಳನ್ನು ನೆಡಲಾಗಿದೆ. ಆದರೆ ಸಕಾಲಿಕವಾಗಿ ಡ್ರಿಪ್ ವ್ಯವಸ್ಥೆ ಇಲ್ಲದೇ ನಾಟಿ ಮಾಡಿದ ಗಿಡಗಳು ಒಣಗಿವೆ. ರೈತರು ಸುಸ್ಥಿರ ಕೃಷಿ ಕೈ ಬಿಟ್ಟು, ಯಥಾಸ್ಥಿತಿ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿದ್ದಾರೆ.
ಡ್ರಿಪ್ ಸೆಟ್ ಕೊಟ್ಟಿಲ್ಲ: ರೈತರ ಜಮೀನಿನಲ್ಲಿ ತೋಟಗಾರಿಕೆ ಸಸಿ ನಾಟಿ ಮಾಡಿದ ನಂತರ ಏಜೆನ್ಸಿ ಡ್ರಿಪ್ ವ್ಯವಸ್ಥೆ ಮಾಡಿಲ್ಲ.
ರೈತರಾದ ಯಮನಪ್ಪ ಪೀರಾ ನಾಯಕ, ನಾಗಪ್ಪ ಲಚಮಪ್ಪ ರಾಠೊಡ್, ಲಲಿತಾ ಲಮಾಣಿ, ಕೃಷ್ಣಪ್ಪ ವಚಡಿ, ಲಚಮಪ್ಪ ಶಿವಪ್ಪ ರಾಠೊಡ್, ದೊಡ್ಡಪ್ಪ ಮೇಘಪ್ಪ ರಾಠೊಡ್, ಯಮನಪ್ಪ ರಾಠೊಡ್, ಫಕೀರವ್ವ ರಾಠೊಡ್, ರಾಮಪ್ಪ ತವರಪ್ಪ ರಾಠೊಡ್ ಇವರ ಜಮೀನಿನಲ್ಲಿ ಡ್ರಿಪ್ ವ್ಯವಸ್ಥೆಯೂ ಇಲ್ಲ.
ಕೆ. ಬೋದೂರು ತಾಂಡಾದ ಯಂಕಪ್ಪ ಪತ್ತಾರ ಅವರ ಒಂದು ಎಕರೆ ಜಮೀನಿನಲ್ಲಿ ಕೊಳವೆಬಾವಿ ನೀರಾವರಿ ವ್ಯವಸ್ಥೆ ಇಲ್ಲ. ತೋಟಗಾರಿಕೆ ಸಸಿಗಳನ್ನು ನಾಟಿ ಮಾಡಿಲ್ಲ. ಇವರಿಗೆ ಮಾತ್ರ ಡ್ರಿಪ್ ಪೈಪ್ ನೀಡಲಾಗಿದೆ.
ಬೇಕಾಬಿಟ್ಟಿ ನಿರ್ವಹಣೆ, ಕಾಟಾಚಾರಕ್ಕೆ ಕೆಲಸ ನಿರ್ವಹಿಸಲಾಗಿದೆ. ದಾಖಲೆ ಪ್ರಕಾರ ಕೆ. ಬೋದೂರು ತಾಂಡಾ, ವಣಗೇರಾ ಹಾಗೂ ಟಕ್ಕಳಕಿ ಗ್ರಾಮಗಳ 44 ಫಲಾನುಭವಿಗಳು ಸುಸ್ಥಿರ ಕೃಷಿ ಅಳವಡಿಸಿಕೊಂಡಿದ್ದಾರೆ. ಕೃಷಿ ಇಲಾಖೆ ಅಸಮರ್ಪಕ ನಿರ್ವಹಣೆ ಹಿನ್ನೆಲೆಯಲ್ಲಿ ಫಲಾನುಭವಿಗಳ ಕೃಷಿ ಬದುಕು ಅಸ್ಥಿರವಾಗಿದೆ.
•ಮಂಜುನಾಥ ಮಹಾಲಿಂಗಪುರ