Advertisement

ಮಂಗಳೂರು ವಿಮಾನ ಪ್ರಯಾಣಿಕನ ಬಳಿ ಸಂಶಯಾಸ್ಪದ ವಸ್ತು ಪತ್ತೆ

08:53 AM Sep 20, 2017 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೋರ್ವನ ಬಳಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಭೀತಿ ಸೃಷ್ಟಿಸಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ತೀವ್ರ ತಪಾಸಣೆ ಮತ್ತು ವಿಚಾರಣೆಯ ಬಳಿಕ ಇದು ಯಾವುದೇ ಅಪಾಯಕಾರಿ ವಸ್ತು ಅಥವಾ ಸ್ಫೋಟಕ ಅಲ್ಲ ಎಂಬ ನಿಲುವಿಗೆ ಪೊಲೀಸ್‌ ಮತ್ತು ತನಿಖಾಧಿಕಾರಿಗಳು ಬಂದಿದ್ದಾರೆ ಎನ್ನಲಾಗಿದೆ.

Advertisement

ಘಟನೆಯ ಹಿನ್ನೆಲೆ: ಕಣ್ಣೂರು ಸಮೀಪದ ಪ್ರಯಾಣಿಕ ನೋರ್ವ ಮಂಗಳವಾರ ರಾತ್ರಿಯ ವಿಮಾನದಲ್ಲಿ ತೆರಳಲು ಆಗಮಿಸಿದ ಸಂದರ್ಭ ಆತನ ಬಳಿ ಅನುಮಾನಾಸ್ಪದ ವಸ್ತು ಪತ್ತೆಯಾಯಿತು. ಕೂಡಲೇ ವಿಮಾನ ನಿಲ್ದಾಣ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡು ತೀವ್ರ 
ತಪಾಸಣೆಗೊಳಪಡಿಸಿದರು. ಪತ್ತೆಯಾಗಿರುವ ಅನುಮಾನಾಸ್ಪದ ಸಾಧನ ಮೇಲ್ನೋಟಕ್ಕೆ ಮೊಬೈಲ್‌ ಚಾರ್ಜ್‌ ಮಾಡಲು ಬಳಸುವ ಪವರ್‌ ಬ್ಯಾಂಕ್‌ನಂತಿತ್ತು. ಆದರೂ ಜಾಗೃತಗೊಂಡ ಅಧಿಕಾರಿಗಳು ಕೂಡಲೇ ನಿಲ್ದಾಣಕ್ಕೆ ಬಾಂಬ್‌ ತಪಾಸಣಾ ದಳವನ್ನು ಕರೆಸಿ ಎಲ್ಲೆಡೆ ಎಚ್ಚರಿಕೆ ಘೋಷಿಸಿದರು.

ಮೊಬೈಲ್‌ ಪವರ್‌ಬ್ಯಾಂಕ್‌ ಚೀನ ಕಂಪೆನಿಯದ್ದಾಗಿದ್ದು, ಅವೈಜ್ಞಾನಿಕವಾಗಿ ಪ್ಯಾಕ್‌ ಮಾಡಿದ್ದರಿಂದ ತಪಾಸಣಾ ಸಿಬಂದಿಗೆ ಸಂಶಯ ಬಂದಿತ್ತು. ಅವರು ಕೂಡಲೇ ಭದ್ರತಾ ಸಿಬಂದಿಗೆ ವಿಷಯ ತಿಳಿಸಿದರು. ಕೂಡಲೇ ಪ್ರಯಾಣಿಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು. 
ಮಂಗಳೂರಿನಿಂದ ಬೆಂಗಳೂರಿಗೆ ಹೋಗಿ ದುಬಾೖಗೆ ಹೋಗಲೆಂದು ಆತ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಆತನನ್ನು ವಿಚಾರಣೆಗಾಗಿ ಪೊಲೀಸರು
ವಶದಲ್ಲಿರಿಸಿಕೊಂಡಿದ್ದಾರೆ. ವಿಮಾನವು ಸುಮಾರು ಒಂದು ಗಂಟೆ ವಿಳಂಬವಾಗಿ ಸಂಚಾರ ಬೆಳೆಸಿತು. ಇತರ ವಿಮಾನಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ ಎಂದು ತಿಳಿದುಬಂದಿದೆ. 

ವಿಮಾನ ನಿಲ್ದಾಣಗಳಲ್ಲಿ ದಾಳಿ ನಡೆಯುವ ಸಂಭವವಿದೆ ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲ ಪ್ರಯಾಣಿಕರನ್ನು ವಿಶೇಷವಾಗಿ ತಪಾಸಣೆ ಗೊಳಪಡಿಸಲಾಗುತ್ತಿದೆ. ಕಟ್ಟುನಿಟ್ಟಿನ ತಪಾಸಣೆಯ ವೇಳೆ ಪ್ರಯಾಣಿಕನ ಬಳಿ ಸಂಶಯಾಸ್ಪದ ವಸ್ತು ಪತ್ತೆಯಾಯಿತು.

ಮೊಬೈಲ್‌ ಬಾಂಬ್‌ ಪತ್ತೆ ವದಂತಿ !
ರಾಷ್ಟ್ರೀಯ ಖಾಸಗಿ ವಾಹಿನಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೊಬೈಲ್‌ ಬಾಂಬ್‌ ಪತ್ತೆ ಎಂಬ ಸುದ್ದಿಯನ್ನು ಪ್ರಕಟಿಸಿದ್ದರಿಂದ ವಿಮಾನ ನಿಲ್ದಾಣದಲ್ಲಿದ್ದವರು ಭೀತಿಗೊಳಗಾದರು. ಈ ಸುದ್ದಿಯಿಂದಾಗಿ ಮಂಗಳೂರಿನ ಜನತೆಯೂ ಗೊಂದಲಕ್ಕೀಡಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next