ಸಸಿಹಿತ್ಲು: ಇಲ್ಲಿನ ಮುಂಡ ಬೀಚ್‌ನಲ್ಲಿ ತೀವ್ರವಾದ ನದಿ ಕೊರೆತಕ್ಕೆ ಪರೋಕ್ಷವಾಗಿ ಕಾರಣವಾಗಿರುವ ಸೇತುವೆಗಳ ಹೂಳು ತೆರವು ಕಾರ್ಯಾಚರಣೆ ಕಳೆದ ಹದಿನೈದು ದಿನಗಳಿಂದ ಪಾವಂಜೆ ಹೆದ್ದಾರಿಯ ಸೇತುವೆಯ ಕೆಳಗೆ ನಡೆಯುತ್ತಿದೆ. ಎರಡನೇ ಹಂತದಲ್ಲಿ ಸಸಿಹಿತ್ಲು ಕದಿಕೆ ಸೇತುವೆಯ ಕೆಳಗಿನ ಹೂಳು ತೆರವು ಕಾರ್ಯಾಚರಣೆ ಗುರುವಾರ ಅಧಿ ಕೃತವಾಗಿ ಪ್ರಾರಂಭವಾಗಿದೆ.
ಕದಿಕೆ ಸೇತುವೆಯಲ್ಲಿನ ನಾಲ್ಕು ಪಿಲ್ಲರ್‌ಗಳ ನಡುವೆ ಇರುವ ಹೂಳನ್ನು ತೆರವು ಮಾಡಲು ಕಾರ್ಮಿಕರು ಹಗ್ಗದ ಮೂಲಕ ಹಾಗೂ ನದಿಯಲ್ಲಿ ಈಜಿ ಕೊಂಡು ತೆರಳಿದ್ದು, ಅಲ್ಲಿನ ಗಟ್ಟಿಯಾದ ಮಣ್ಣನ್ನು ತೆರವು ಮಾಡಿ ದೋಣಿಯ ಮೂಲಕ ದಡಕ್ಕೆ ಸಾಗಿಸುತ್ತಿದ್ದಾರೆ.ಪಾವಂಜೆಯಲ್ಲಿ ಜೆಸಿಬಿ ಮೂಲಕ ತೆರವು ನಡೆಯುತ್ತಿದ್ದರೆ,ಕದಿಕೆಯಲ್ಲಿ ಸುಮಾರು 10 ಮಂದಿ ಕಾರ್ಮಿಕರು ತೆರವು ಕಾರ್ಯಾಚರಣೆಯಲ್ಲಿ ತೊಡಗಿ ಕೊಂಡಿದ್ದಾರೆ.
ಇತೀ¤ಚೆಗೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಸ್ಥಳೀಯ ಜಿ.ಪಂ.ಸದಸ್ಯ ವಿನೋದ್ ಬೊಳ್ಳೂರು, ತಾ.ಪಂ.ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು ಹಾಗೂ ಸ್ಥಳೀಯ ಮೀನುಗಾರರ ಪ್ರಮು ಖರೊಂದಿಗೆ ನಿಯೋಗದ ಮೂಲಕ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರೊಂದಿಗೆ ಮಾತುಕತೆ ನಡೆಸಿದ್ದರ ಪರಿಣಾಮ ಚಾಲನೆ ಸಿಕ್ಕಿದೆ.
ಮುಂಡ ಬೀಚ್‌ನಲ್ಲಿ ಸಮುದ್ರ ಕೊರೆತದಿಂದ ಹಳೆಯಂಗಡಿ ಗ್ರಾ.ಪಂ. ನಿರ್ಮಿಸಿದ್ದ ಅಂಗಡಿ ಕೋಣೆ ಸಮುದ್ರ ಪಾಲಾಗಿ ಸುಮಾರು 100 ಮೀ. ಗಿಂತಲೂ ಹೆಚ್ಚು ಬೀಚ್‌ನ ಭಾಗ ಸಮುದ್ರ ಪಾಲಾಗಿದೆ. ಸೇತುವೆಗಳನ್ನು ನಿರ್ಮಿಸು ವಾಗ ಮಣ್ಣು ತುಂಬಿಸಿದ್ದನ್ನು ತೆರವು ಗೊಳಿಸದೇ ಇರುವುದರಿಂದ ಹೂಳು ತುಂಬಿ ಅದು ಗಟ್ಟಿಯಾಗಿ ನಂದಿನಿ ನದಿಯ ಒತ್ತಡವನ್ನು ಕಡಿಮೆ ಮಾಡಿ ದ್ದರಿಂದ ಅಳಿವೆಯಲ್ಲಿ ನದಿ ಕೊರೆತ ತೀವ್ರವಾಗಿತ್ತು.
ಮೀನುಗಾರರ ಮುಖಂಡ ಶೋಭೇಂದ್ರ ಸಸಿಹಿತ್ಲು ಮಾತನಾಡಿ, ಬಲೆ ಹಾಕಿ ಮೀನು ಹಿಡಿಯುವ ಮೀನುಗಾರರು ಸಹ ದೋಣಿಯ ಮೂಲಕ ಈ ಸೇತುವೆಯನ್ನು ದಾಟಿ ತೆರಳ ಬೇಕಾದರೆ ಒಂದೇ ಕಿಂಡಿಯಲ್ಲಿ ಸಾಗಬೇಕಾಗಿತ್ತು. ಉಳಿದೆಡೆ ಮಣ್ಣು ತುಂಬಿರುವುದರಿಂದ ದೋಣಿ ಸಾಗಲು ಕಷ್ಟವಾಗಿದೆ. ಸಂಪೂರ್ಣವಾಗಿ ತೆರವು ನಡೆಸಿದ ಅನಂತರ ಮೀನುಗಾರರ ವೃತ್ತಿಯವರಿಗೂ ಅನು ಕೂಲವಾಗುತ್ತದೆ. ಅಮಾವಾಸ್ಯೆಯ ದಿನದಂದು ಹೂಳೆತ್ತಲು ಬಹಳಷ್ಟು ಅನುಕೂಲವಾಗಿದೆ. ಮಳೆಗಾಲ ಆರಂಭವಾಗುವ ಮೊದಲೇ ಕಾಮಗಾರಿ ಮುಗಿದಲ್ಲಿ ಉತ್ತಮ ಎಂದರು.
ತಾ.ಪಂ.ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು, ಹಳೆ ಯಂಗಡಿ ಗ್ರಾ.ಪಂ.ನ ಸದಸ್ಯರಾದ ವಿನೋದ್ ಕುಮಾರ್ ಕೊಳುವೈಲು,ಸುಕೇಶ್ ಪಾವಂಜೆ,ಹಳೆಯಂಗಡಿಯ ಮನೋಜ್ ಕುಮಾರ್ ಉಪಸ್ಥಿತರಿದ್ದರು.
ಮುಂಡ ಬೀಚ್ ಉಳಿಸಲು ಪ್ರಯತ್ನ
ಕಾಮಗಾರಿ ಸಂದರ್ಭದಲ್ಲಿ ಸ್ಥಳಕ್ಕೆ ಸ್ಥಳೀಯ ನಿಯೋಗದೊಂದಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು ಉದಯವಾಣಿಯೊಂದಿಗೆ ಪ್ರತಿಕ್ರಿಯಿಸಿ,ಬೇಸಗೆ ಹಾಗೂ ನದಿ ನೀರಿನ ಒತ್ತಡ ಕಡಿಮೆ ಇರುವ ಕಾರಣ ಮಣ್ಣನ್ನು ತೆಗೆಯಲು ಶಾಸಕರ ಸೂಚನೆಯಂತೆ ಜಿಲ್ಲಾಧಿಕಾರಿಗಳ ಮೂಲಕ ಕಾರ್ಯ ಪ್ರವೃತ್ತರಾಗಿದ್ದಾರೆ.ಪ್ರವಾಸೋದ್ಯಮ ಕೇಂದ್ರವಾಗುತ್ತಿರುವ ಮುಂಡ ಬೀಚ್ ಅನ್ನು ಉಳಿಸಿಕೊಳ್ಳಲು ಈ ಪ್ರಯತ್ನ ನಡೆದಿದೆ ಎಂದರು.