“ಜೆ ಕೆ ಮತ್ತು ನನ್ನ ಕಾಂಬಿನೇಷನ್ ಮೂರನೇ ಚಿತ್ರವಿದು. ಮುಂದೆ ಕೂಡ ಇದೇ ಕಾಂಬಿನೇಶನ್‌ನಲ್ಲಿ ಚಿತ್ರಗಳು ಬರಲಿವೆ..’ – ಹೀಗೆ ಹೇಳುತ್ತಾ ಹೋದರು ನಿರ್ದೇಶಕ ನಾಗೇಂದ್ರ ಅರಸ್. ಅವರು ಹೇಳಿದ್ದು, “ನನ್ನ ಗುರಿ ವಾರೆಂಟ್’ ಚಿತ್ರದ ಬಗ್ಗೆ. ಚಿತ್ರಕ್ಕೆ ಸೆನ್ಸಾರ್‌ಆಗಿದ್ದು ಯಾವುದೇ ಕಟ್ಸ್ ಇಲ್ಲದೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಈ ಕುರಿತು ಒಂದಷ್ಟು ಹೇಳಿಕೊಳ್ಳಲು ತಮ್ಮ ತಂಡದೊಂದಿಗೆ ಪತ್ರಕರ್ತರ ಮುಂದೆ ಆಗಮಿಸಿದ್ದರು ನಾಗೇಂದ್ರ ಅರಸ್.
“ಈ ಚಿತ್ರಕ್ಕೆ ಮೊದಲು “ವಾರೆಂಟ್’ ಎಂಬ ಶೀರ್ಷಿಕೆ ಇತ್ತು. ಸಬ್ಸಿಡಿ ಸಿಗಲ್ಲ ಅನ್ನುವ ಕಾರಣಕ್ಕೆ, “ನನ್ನ ಗುರಿ ವಾರೆಂಟ್’ ಎಂದು ಹೆಸರಿಡಲಾಗಿದೆ. ಚಿತ್ರ ನೋಡಿದವರಿಗೆ ಶೀರ್ಷಿಕೆ ಯಾಕಿಡಲಾಗಿದೆ ಅನ್ನೋದು ಗೊತ್ತಾಗಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರ. ಇಲ್ಲಿ ಗ್ಲಾಮರ್ ಇದೆ. ಆದರೆ ವಲ್ಗರ್ ಇಲ್ಲ. ಸಿನಿಮಾದಲ್ಲಿ ಜೆಕೆ ಮತ್ತು ತಾಂಡವ್ ಇದ್ದಾರೆ. ಮನೀಶ ವೈಗನ್‌ಕರ್ ನಾಯಕಿಯಾಗಿದ್ದಾರೆ. ನಿರ್ಮಾಣ ಕೂಡ ಅವರದೇ. ಹಾಗಂತ, ಇದು ತ್ರಿಕೋನ ಪ್ರೇಮಕಥೆ ಅಲ್ಲ. ಆರಂಭದಿಂದ ಅಂತ್ಯದವರೆಗೂ ಸಸ್ಪೆನ್ಸ್‌ನಲ್ಲೇ ಚಿತ್ರ ಸಾಗಲಿದೆ. ಚಿತ್ರಕ್ಕೆ ಮೂವರು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ. ವಿ.ಮನೋಹರ್ ಒಂದು ಸಾಂಗ್ ಸಂಯೋಜಿಸಿದರೆ, ಮ್ಯಾಥ್ಯೂಸ್ ಮನು ಮೂರು ಹಾಡುಗಳನ್ನು ಸಂಯೋಜಿಸಿದ್ದಾರೆ. ಸತೀಶ್ ಬಾಬು ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಹಾಗೆಯೇ, ಮೂವರು ಛಾಯಾಗ್ರಾಹಕರುಕ್ಯಾಮೆರಾ ಹಿಡಿದಿದ್ದಾರೆ.
ಎಂ.ಬಿ.ಅಳ್ಳಿಕಟ್ಟೆ, ಡಿಸೋಜ ಹಾಗು ಸಂದೀಪ್ ಛಾಯಾಗ್ರಹಣ ಮಾಡಿದ್ದಾರೆ. “ವಾರೆಂಟ್’ ಯಾರಿಗೆ, ಯಾಕೆ? ಅನ್ನೋ ಕುತೂಹಲವಿದ್ದರೆ ಸಿನಿಮಾ ನೋಡಬೇಕು. ಬ್ಯಾಂಕಾಕ್‌ನಲ್ಲಿ 15 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಇಷ್ಟರಲ್ಲೇ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ’ ಎಂದು ವಿವರ ಕೊಟ್ಟರು ನಾಗೇಂದ್ರ ಅರಸ್. ನಾಯಕ ಜೆ.ಕೆ ಅವರಿಗೆ ನಿರ್ದೇಶಕರ ಜೊತೆ ಮೂರನೇ ಚಿತ್ರವಂತೆ. “ಫಸ್ಟ್ ಲವ್’,” ಮೇ 1′ ನಂತರ ಈಗ “ನನ್ನ ಗುರಿ ವಾರೆಂಟ್’ ಮಾಡಿದ್ದೇನೆ. ಇಲ್ಲಿ ಕಥೆಯೇ ಹೈಲೈಟ್. ನಿರ್ಮಾಪಕರ ಕಥೆಗೆ ನಿರ್ದೇಶಕರು ನ್ಯಾಯ ಸಲ್ಲಿಸಿದ್ದಾರೆ.
ಇದೊಂದು ಹೊಸಬಗೆಯ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಹೊಂದಿದೆ. ಇಲ್ಲಿ ಒಂದಷ್ಟು ಪಾತ್ರಗಳಿದ್ದರೂ ಎಲ್ಲಾ ಪಾತ್ರಗಳಿಗೂ ಆದ್ಯತೆ ನೀಡಲಾಗಿದೆ. ನಾನಿಲ್ಲಿ ಉದ್ಯಮಿಯೊಬ್ಬರ ಮಗನಾಗಿ ನಟಿಸಿದ್ದೇನೆ. ವಾರೆಂಟ್ ಯಾರಿಗೆ ಹೋಗುತ್ತೆ, ಕೊಡೋರು ಯಾರು ಎಂಬುದು ಸಿನಿಮಾದಲ್ಲಿ ಗೊತ್ತಾಗಲಿದೆ’ ಎಂದರು ಜೆಕೆ. ನಿರ್ಮಾಪಕಿ ಮನೀಶ ವೈಗನ್‌ಕರ್ ಅವರಿಗೆ ಇದು ಕನ್ನಡದ ಮೊದಲ ಚಿತ್ರ. ಕಥೆ ಬರೆಯುವುದರ ಜೊತೆಯಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ. ಮೂಲತಃ ಕಾರವಾರದವರಾದ ಮನೀಶ ವೈಗನ್ ಕರ್, ಮುಂಬೈನಲ್ಲಿ ನೆಲೆಸಿದ್ದಾರೆ. ಈ ಹಿಂದೆ ರಾಜಸ್ತಾನಿ ಭಾಷೆಯಲ್ಲೊಂದು ಚಿತ್ರ ನಿರ್ಮಿಸಿದ್ದು, ಈಗ ಕನ್ನಡತಿಯಾಗಿ ಕನ್ನಡ ಸಿನಿಮಾ ಮಾಡುವ ಆಸೆ ಈಡೇರಿಸಿಕೊಂಡಿದ್ದಾರೆ. “ಒಳ್ಳೆಯ ಚಿತ್ರ ಮಾಡಿದ ಖುಷಿ ನನ್ನದು’ ಎಂಬುದು ಅವರ ಮಾತು.
ಸಂಗೀತ ನಿರ್ದೇಶಕ ಮ್ಯಾಥುಸ್ ಮನು ಅವರಿಲ್ಲಿ ಮೂರು ಹಾಡುಗಳನ್ನು ಕೊಟ್ಟಿದ್ದಾರಂತೆ. ವಿ.ಮನೋಹರ್ ಸರ್ ಜೊತೆಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ಮ್ಯಾಥುಸ್, ಚಿತ್ರ ಎಲ್ಲಾ ವರ್ಗದವರಿಗೂ ಇಷ್ಟವಾಗಲಿದೆ’ ಅಂದರು. ವಿ.ಮನೋಹರ್ ಅವರಿಲ್ಲಿ “ಆಸೆ ಅಂಗಲಂಗುಲ..’ ಎಂಬ ಹಾಡು ಬರೆದ ಬಗ್ಗೆ ಹೇಳಿಕೊಂಡರು. ಹಿನ್ನೆಲೆ ಸಂಗೀತ ನೀಡಿರುವ ಸತೀಶ್ ಬಾಬು ನಾಗೇಂದ್ರ ಅರಸ್ ಅವರೊಂದಿಗಿನ ಕೆಲಸದ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಎಂ.ಬಿ.ಅಳ್ಳಿಕಟ್ಟೆ ಅವರು, ನಾಗೇಂದ್ರ ಅರಸ್ ಅವರ ಜೊತೆ ಎರಡನೇ ಚಿತ್ರದಲ್ಲಿ ಕೆಲಸ ಮಾಡಿದ ಖುಷಿ ಹಂಚಿಕೊಂಡರು. ಎಲ್ಲರೂ ಮಾತನಾಡಿ ಮುಗಿಸುವ ಹೊತ್ತಿಗೆ ಚಿತ್ರದ ಹಾಡುಗಳನ್ನೂ ಬಿಡುಗಡೆ ಮಾಡಲಾಯಿತು. ವಿತರಕ ವಿಜಯ್ ತಮ್ಮ ವಿಜಯ್ ಸಿನಿಮಾಸ್ ಮೂಲಕ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಹೇಳಿಕೊಂಡರು.