ಮುದ್ದೇಬಿಹಾಳ: ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆ ತ್ವರಿತವಾಗಿ ಬಗೆಹರಿಸುವಲ್ಲಿ ನಿರ್ಲಕ್ಷé ತೋರಿದರೆ ಅಂಥ ಪಿಡಿಒಗಳನ್ನು ಸಸ್ಪೆಂಡ್ ಮಾಡಬೇಕು. ಸಮಸ್ಯೆ ಬಗೆಹರಿಸುವಲ್ಲಿ ತಾಪಂ ಇಒ ನಿಷ್ಕಾಳಜಿ ತೋರಿದರೆ ಅವರ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಎಚ್ಚರಿಕೆ ನೀಡಿದರು.
ಹಿರೇಮುರಾಳ ಗ್ರಾಮದಲ್ಲಿ ಗ್ರಾಮಸ್ಥರು ಕುಡಿವ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆದಾಗ ಗ್ರಾಪಂ ಕಟ್ಟಡ ಉದ್ಘಾಟನೆ ವೇದಿಕೆಯಲ್ಲೇ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಸಮಸ್ಯೆ ಉದ್ಭವವಾದ 24 ಗಂಟೆಯಲ್ಲಿ ಪರಿಹಾರ ಕಲ್ಪಿಸಬೇಕು. ಹಣಕಾಸಿನ ಕೊರತೆ ಇದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಪರಿಹಾರ ಕಲ್ಪಿಸಬೇಕು. ಗ್ರಾಮೀಣ ಭಾಗದ ನೀರಿನ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ತೋರುವವರು ಯಾವುದೇ ಹಂತದ ಅಧಿಕಾರಿಯಾಗಿದ್ದರೂ ನಾನು ಸಹಿಸೋಲ್ಲ ಎಂದು ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡರು.
ಸಮಸ್ಯೆ ಗೊತ್ತಾದ ಕೂಡಲೇ ಪರಿಹಾರಕ್ಕೆ ಮುಂದಾಗಬೇಕು. ಸಮಸ್ಯೆ ಗಂಭೀರಗೊಳ್ಳುವವರೆಗೂ ಸುಮ್ಮನಿದ್ದು ಆಮೇಲೆ ಓಡಾಡಿದರೆ ಎಲ್ಲವೂ ವ್ಯರ್ಥ. ಇನ್ಮುಂದೆ ಬೇಸಿಗೆ ಪ್ರಾರಂಭಗೊಳ್ಳಲಿದ್ದು, ಆದಷ್ಟು ಜಾಗ್ರತೆಯಿಂದ ಗ್ರಾಪಂ ಮಟ್ಟದಲ್ಲಿ ಪಿಡಿಒಗಳು, ತಾಲೂಕು ಮಟ್ಟದಲ್ಲಿ ಇಒ ಹಾಗೂ ಮತ್ತಿತರ ಅಧಿಕಾರಿಗಳು ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ವೇದಿಕೆಯಲ್ಲೇ ಪಿಡಿಒ ಪಿ.ಎಸ್. ಕಸನಕ್ಕಿ ಅವರನ್ನು ಕರೆಸಿದ ಶಾಸಕರು ಗ್ರಾಮಸ್ಥರ ಆರೋಪ ಅವರ ಗಮನಕ್ಕೆ ತಂದು ಸೂಕ್ತ ಪ್ರತಿಕ್ರಿಯೆ ಪಡೆದುಕೊಂಡು ಶೀಘ್ರ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸೂಚಿಸಿದರು.