Advertisement

ದೇವಿಂದರ್ ಸಿಂಗ್ ಸಹಿತ ನಾಲ್ವರಿಗೆ 15 ದಿನಗಳ ಎನ್.ಐ.ಎ. ಕಸ್ಟಡಿ

09:53 AM Jan 24, 2020 | Hari Prasad |

ನವದೆಹಲಿ: ಉಗ್ರರನ್ನು ತನ್ನ ವಾಹನದಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಭದ್ರತಾ ಪಡೆಗಳ ಕೈಯಲ್ಲಿ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿ ಅಮಾನತುಗೊಂಡಿರುವ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ದೇವಿಂದರ್ ಸಿಂಗ್ ಹಾಗೂ ಇತರೇ ನಾಲ್ವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ 15 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳದ ವಶಕ್ಕೆ ನೀಡಲಾಗಿದೆ.

Advertisement

ಬಂಧಿತ ನಾಲ್ವರನ್ನು ಎನ್.ಐ.ಎ. ತಂಡ ಟ್ರಾನ್ಸಿಟ್ ರಿಮಾಂಡ್ ಪಡೆದು ಕುಲ್ಗಾಂನಿಂದ ದೆಹಲಿಗೆ ಕರೆದುಕೊಂಡು ಬಂದಿತ್ತು ಮತ್ತು ಹಿಜ್ಬುಲ್ ಉಗ್ರರಿಗೆ ನೆರವು ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರವಾದ ತನಿಖೆಯನ್ನು ಎನ್.ಐ.ಎ. ಅಧಿಕಾರಿಗಳು ನಡೆಸಿದ್ದರು. ಕೇಂದ್ರ ಗೃಹಸಚಿವಾಲಯವು ಜನವರಿ 16ರಂದು ನೀಡಿದ ಸೂಚನೆಯಂತೆ ಎನ್.ಐ.ಎ. ಅಧಿಕಾರಿಗಳು, ದೇವಿಂದರ್ ಸಿಂಗ್ ಭಾಗಿಯಾಗಿರಬಹುದಾದ ಉಗ್ರ ನೆರವು ಚಟುವಟಿಕೆಗಳ ಕುರಿತಾಗಿ ವಿಚಾರಣೆಯನ್ನು ಪ್ರಾರಂಭಿಸಿದ್ದರು.

ದೇವಿಂದರ್ ಸಿಂಗ್ ಬಂಧನಕ್ಕೊಳಗಾದ ಮರುದಿನವೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಿಂಗ್ ಅವರ ಮನೆ ಮೇಲೆ ದಾಳಿ ನಡೆಸಿ ಎಕೆ-47, ಹ್ಯಾಂಡ್ ಗ್ರೆನೇಡ್ ಹಾಗೂ ಪಿಸ್ತೂಲ್ ಗಳನ್ನು ವಶಪಡಿಸಿಕೊಂಡಿದ್ದರು.

ಸಿಂಗ್ ಅವರನ್ನು ಕೇಂದ್ರ ಹಾಗೂ ಜಮ್ಮು-ಕಾಶ್ಮೀರದ ಜಂಟಿ ವಿಚಾರಣಾಧಿಕಾರಿಗಳ ತಂಡವು ತೀವ್ರ ವಿಚಾರಣೆಯನ್ನು ನಡೆಸುತ್ತಿದೆ ಮತ್ತು ಈ ಸಂಬಂಧವಾಗಿ ಸಿಂಗ್ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ಅಡಿಯಲ್ಲಿ ಪ್ರಕರಣವನ್ನೂ ಸಹ ದಾಖಲು ಮಾಡಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next