ಮುಳಬಾಗಿಲು: ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಅಮಾನತುಗೊಂಡ ಬಿಇಒ ಗಿರಿಜೇಶ್ವರಿ ದೇವಿ, ಸರ್ಕಾರದ ಅಮಾನತು ಆದೇಶಕ್ಕೆ ತಡೆ ತಂದು, ಸರ್ಕಾರಿ ಅಧಿಕಾರಿಗಳನ್ನು ಲೆಕ್ಕಿಸದೇ ಬಿಇಒ ಕಚೇರಿಯಲ್ಲಿ ಕುಳಿತು ನಿತ್ಯ ಒಂದಿಲ್ಲೊಂದು ಅವಾಂತರ ಸೃಷ್ಟಿಸುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಪ್ರಸ್ತುತ ತಾಲೂಕಿನಲ್ಲಿ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಾಗಿ ಮಂಗಳವಾರ ಬೆಳಗ್ಗೆ ಪ್ರೌಢ ಶಾಲೆಗಳಿಗೆ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆಯನ್ನು ಸಾಗಿಸುವ ವಾಹನವನ್ನು ತೆಗೆದುಕೊಂಡು ಹೋಗಲು ಚಾಲಕ ಶಂಕರ್ 9.30ಕ್ಕೆ ಬಿಇಒ ಕಚೇರಿಗೆ ಬಂದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಅಮಾನತಾದ ಬಿಇಒ ಗಿರಿಜೇಶ್ವರಿ ದೇವಿ ಅವರು ವಾಹನದ ಮುಂದೆ ಅಡ್ಡ ನಿಂತು ಅಡ್ಡಿಪಡಿಸಿದ್ದಾರೆ. ವಾಹನ ಚಾಲಕ ಎಷ್ಟು ವಿನಂತಿಸಿದರೂ ವಾಹನ ಬಿಡದ ಕಾರಣ, ಬಿಇಒ ಅಶೋಕ್ ಅವರಿಗೆ ಮಾಹಿತಿ ನೀಡಿದ್ದರಿಂದ ಅವರು ಪೊಲೀಸರನ್ನು ಸ್ಥಳಕ್ಕೆ ಕರೆಸಿ, ಪೊಲೀಸರು ಬಂದ ನಂತರ 10.30ಕ್ಕೆ ವಾಹನವನ್ನು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
45 ನಿಮಿಷ ತಡ: ಈ ಕುರಿತು ಬಿಇಒ ವಾಹನ ಚಾಲಕ ಶಂಕರ್ ಪ್ರತಿಕ್ರಿಯಿಸಿ, ಪ್ರೌಢ ಶಾಲೆಗಳಿಗೆ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಸಾಗಿಸಲು 9.30ಕ್ಕೆ ಕಚೇರಿ ಶೆಡ್‌ನಲ್ಲಿ ವಾಹನ ತೆಗೆಯುತ್ತಿದ್ದಂತೆ ಅಲ್ಲಿಗೆ ಬಂದ ಗಿರಿಜೇಶ್ವರಿ ದೇವಿ ಅವರು, ವಾಹನ ಮುಂದೆ ಅಡ್ಡ ನಿಂತು ಜೀಪ್ ತೆಗೆದುಕೊಂಡು ಹೋಗಬಾರದು ಎಂದು ಅಡ್ಡಪಡಿಸಿದರು. ಆದ್ದರಿಂದ 45ನಿಮಿಷ ತಡವಾಯಿತು. ಈ ಕುರಿತು ಬಿಇಒ ಅಶೋಕ್,ಡಿಡಿಪಿಐ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದರು.
ಮೇಲಾಧಿಕಾರಿಗಳಿಗೆ ವರದಿ: ಬಿಇಒ ಸಿ.ಆರ್.ಅಶೋಕ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಾಗಿ ಶಾಲೆಗಳಿಗೆ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಸಾಗಿಸಲು ಜೀಪ್ ಅಗತ್ಯವಿದೆ. ಚಾಲಕ ಶಂಕರ್ ನಿಗದಿತ ಸಮಯಕ್ಕೆ ಬಂದುಜೀಪ್‌ನ್ನು ಶೆಡ್‌ನಿಂದ ಹೊರಗಡೆ ತೆಗೆಯುತ್ತಿದ್ದಂತೆ ಅಲ್ಲಿಗೆ ಬಂದ ಗಿರಿಜೇಶ್ವರಿದೇವಿ ಜೀಪ್ ತೆಗೆದುಕೊಂಡು ಹೋಗದಂತೆ ಜೀಪ್ ಮುಂದೆ ಅಡ್ಡ ನಿಂತಿದ್ದರಿಂದ 45 ನಿಮಿಷಗಳು ತಡವಾಗಿದ್ದರಿಂದ ಶಾಲೆಗಳಿಗೆ ವೀಕ್ಷಣೆಗೆತೆರಳಲು ತಡವಾಗಿದ್ದು, ಸದರೀ ವಿಚಾರವನ್ನು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದರು.