ಕಲಬುರಗಿ: ರಾಮೇಶ್ವರಂ ಕೆಫೆ ಬಾಂಬರ್ ಕಲಬುರಗಿ ನಗರಕ್ಕೆ ಎರಡು- ಮೂರು ದಿನಗಳ ಹಿಂದೆ ಬಸ್ ಅಥವಾ ರೈಲಿನ ಮೂಲಕ ಬಂದು ಹೋಗಿರುವ ಸಾಧ್ಯತೆಯ ಶಂಕೆಯ ಹಿನ್ನೆಲೆಯಲ್ಲಿ ಶನಿವಾರ ಎನ್ಐಎ ಅಧಿಕಾರಿಗಳು ಕೇಂದ್ರ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ತಪಾಸಣೆ ನಡೆಸಿದರು.
ಈ ವೇಳೆಯಲ್ಲಿ ಬಸ್ ನಿಲ್ದಾಣದ 18ಕ್ಕೂ ಹೆಚ್ಚು ಹಾಗೂ ರೈಲು ನಿಲ್ದಾಣದ 12ಕ್ಕೂ ಹೆಚ್ಚು ಸಿಸಿ ಕೆಮರಾಗಳ ಫೂಟೇಜ್ ಗಳನ್ನು ವೀಕ್ಷಣೆ ಮಾಡಿದರು.
ಈ ವೇಳೆಯಲ್ಲಿ ಅನುಮಾನಾಸ್ಪದವಾಗಿ ನಡೆದಾಡಿದ ಮತ್ತು ಓಡಾಡಿದ ಹಾಗೂ ಇತರೆ ಕೆಲ ವ್ಯಕ್ತಿಗಳೊಂದಿಗೆ ಮಾತನಾಡಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೆಕೆಆರ್ಟಿಸಿಯ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಅವರನ್ನು ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ಅಧಿಕಾರಿಗಳು ಬೆಳಗ್ಗೆಯಿಂದ ರೈಲ್ವೆ ನಿಲ್ದಾಣ ಮತ್ತು ಕೇಂದ್ರ ಬಸ್ ನಿಲ್ದಾಣದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಬಸ್ ನಿಲ್ದಾಣದಲ್ಲಿನ ಸಿಸಿ ಕೆಮರಾಗಳ ದೃಶ್ಯಾವಳಿಗಳನ್ನು ಅಧಿಕಾರಿಗಳು ವೀಕ್ಷಣೆ ಮಾಡಿದ ಬಳಿಕ ಬಳ್ಳಾರಿಯಿಂದ ಕಲ್ಬುರ್ಗಿಗೆ ಆಗಮಿಸಿರುವ ಕೆ ಎ 32, ಎಫ್ 1885 ಸಂಖ್ಯೆಯ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಕರೆದು ವಿಚಾರಣೆ ಮಾಡಿದ್ದಾರೆ. ಎನ್ನಲಾಗುತ್ತಿದೆ. ಕ್ಯಾಪ್ ಹಾಕಿಕೊಂಡ ಮತ್ತು ನೇರಳೆ ಬಣ್ಣದ ಟಿ ಶರ್ಟ್ ಹಾಕಿಕೊಂಡಿದ್ದ ಶಂಕಿತ ವ್ಯಕ್ತಿಯೇ ರಾಮೇಶ್ವರಂ ಕೆಫೆ ಬಾಂಬರ್ ಆಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕೆ ಕೆ ಆರ್ ಟಿ ಸಿ ಯ ಚಾಲಕ ಮತ್ತು ನಿರ್ವಾಹಕರಲ್ಲೂ ಕೂಡ ತುಸು ಭಯದ ವಾತಾವರಣ ನಿರ್ಮಾಣವಾಗಿದೆ. ಅಧಿಕಾರಿಗಳು ಬಸ್ ನಿಲ್ದಾಣದಲ್ಲಿ ವಿಚಾರಣೆ ಮಾಡುತ್ತಿರುವುದರಿಂದ ಕೆಲಕಾಲ ಬಸ್ ಸಂಚಾರದಲ್ಲೂ ಕೂಡ ಸಣ್ಣ ಪ್ರಮಾಣದ ವ್ಯತ್ಯಯ ಕೂಡ ಉಂಟಾಗಿತ್ತು. ನಂತರ ಎಲ್ಲವೂ ಎಂದಿನಂತೆ ನಡೆಯಿತು ಎಂದು ಕೇಂದ್ರ ಬಸ್ ನಿಲ್ದಾಣದ ಮೂಲಗಳು ತಿಳಿಸಿವೆ.
ಇನ್ನು ಹುಬ್ಬಳ್ಳಿಯ ಮೂಲಕ ಕಲಬುರಗಿಗೆ ರೈಲಿನ ಮೂಲಕ ಬಂದಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಆರ್ ಪಿ ಎಫ್ ಕಚೇರಿಯಲ್ಲಿ ಸಿಸಿ ಕೆಮರಾ ದೃಶ್ಯಗಳನ್ನು ಅಧಿಕಾರಿಗಳು ವೀಕ್ಷಣೆ ಮಾಡಿದ್ದಾರೆ.ಆದರೆ ತಪಾಸಣೆ ಮಾಹಿತಿಯನ್ನು ಅಧಿಕೃತವಾಗಿ ಅಧಿಕಾರಿಗಳು ಮಾಧ್ಯಮಗಳಿಗೆ ನೀಡಲು ಒಪ್ಪಲಿಲ್ಲ.