ಬೆಂಗಳೂರು: ಐವರು ಶಂಕಿತ ಉಗ್ರರ ವಿಚಾರಣೆ ವೇಳೆ ಹಲವು ರೋಚಕ ಸಂಗತಿ ಗೊತ್ತಾಗಿದೆ. ಕಳೆದ 1 ತಿಂಗಳು 10 ದಿನದ ಹಿಂದೆ ಶಂಕಿತ ಸೈಯದ್ ಸುಹೈಲ್ ಖಾನ್ ಸುಲ್ತಾನ್ ಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿದ್ದ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದರೂ ಪೇಂಟಿಂಗ್ ವೃತ್ತಿ ಮಾಡುತ್ತಿರುವುದಾಗಿ ಮನೆ ಮಾಲೀಕರಿಗೆ ತಿಳಿಸಿದ್ದ. ಒಂದು ಗಂಡು, ಒಂದು ಹೆಣ್ಣು ಮಕ್ಕಳು, ಪತ್ನಿ ಜತೆಗೆ ವಾಸಿಸುತ್ತಿದ್ದ. 50 ಸಾವಿರ ರೂ. ಮುಂಗಡ ಹಣ ಕೊಟ್ಟು, 5 ಸಾವಿರ ರೂ. ಮನೆ ಬಾಡಿಗೆ ನೀಡಲು ಮಾತುಕತೆ ನಡೆದಿತ್ತು. ಮುಂಗಡ ಹಣ ಬಾಕಿ ಉಳಿಸಿಕೊಂಡಿದ್ದರು.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿ ಕಣ್ಣೀರು ಹಾಕಿದ ಮನೆ ಮಾಲಕಿ, “ಸೈಯದ್‌ನ ಪತ್ನಿ ಹೆಣ್ಣುಮಗಳ ಜತೆ ಬಂದು ಮನೆ ಬಾಡಿಗೆ ಕೇಳಿದರು. 5 ಸಾವಿರ ರೂ. ಕೊಟ್ಟು ಬಾಡಿಗೆಗೆ ಬಂದರು. ಅಡ್ವಾನ್ಸ್ ಕೊಡದೇ ಮತ್ತೆ 5 ಸಾವಿರ ರೂ. ಕೊಡಲು ಬಂದಾಗ 50 ಸಾವಿರ ರೂ. ಕೊಡಲು ಹೇಳಿದ್ದೆ. ನಮಗೆ ಸರಿಯಾಗದಿದ್ದರೆ 9 ದಿನಗಳಲ್ಲಿ ಮನೆ ಖಾಲಿ ಮಾಡುವುದಾಗಿ ತಿಳಿಸಿದ್ದರು. 40 ವರ್ಷದಿಂದ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಬಂಧಿತ ಉಗ್ರ ಸೈಯ್ಯದ್ ಪತ್ನಿ ಸುದ್ದಿಗಾರರ ಜತೆ ಮಾತನಾಡಿ, ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ. ಮನೆಯಲ್ಲಿ ನಾನು, ನನ್ನ ಪತಿ, ಅತ್ತೆ ವಾಸಿಸುತ್ತಿದ್ದೇವೆ. ಬೇರೆ ಯಾರು ಬರುತ್ತಿರಲಿಲ್ಲ. ಜುನೇದ್ ಬಗ್ಗೆ ಗೊತ್ತಿತ್ತು. ಕೊಲೆ ಪ್ರಕರಣವೊಂದರಲ್ಲಿದ್ದ ಎಂಬ ವಿಚಾರ ಗೊತ್ತಾಗಿದೆ. ಪೊಲೀಸರು ಇಲ್ಲಿಗೆ ಬಂದು ಪರಿಶೀಲಿಸಿದಾಗ ಇಲ್ಲಿ ಏನು ಸಿಕ್ಕಿಲ್ಲ. ಆದರೆ, ಗನ್‌ಗಳು ಎಲ್ಲಿಂದ ಬಂದಿವೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮನೆ ಖಾಲಿ ಮಾಡಿದ ಆರೋಪಿಗಳ ಕುಟುಂಬ: ಜಾಹಿದ್ ತಬ್ರೇಜ್ (ಎ5) ಖಾಸಗಿ ಕಂಪನಿಯಲ್ಲಿ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದ. ಕುಟುಂಬಸ್ಥರು ನಮ್ಮ ಹುಡುಗನನ್ನು ಹಾಳು ಮಾಡಿದ್ದು ಮತ್ತೂಬ್ಬ ಆರೋಪಿ ಉಮಾರ್ ಎಂದು ಆರೋಪಿಸಿದ್ದಾರೆ. 2017ರಲ್ಲಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದು ಸುಧಾರಿಸಿದ್ದ. ಬಳಿಕ ತಬ್ರೇಜ್‌ನನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದ ಉಮಾರ್ ಆತನನ್ನು ಹಾಳು ಮಾಡಿರುವುದು ಬೇಸರ ತಂದಿದೆ. ಜಾಹಿದ್ ತಬ್ರೇಜ್ ದಿನವೂ ಕೆಲಸಕ್ಕೆ ಹೋಗಿ ದುಡಿಯುತ್ತಿದ್ದ. ಜಿಮ್‌ಗೆ ಹೋಗುತ್ತಿದ್ದ. ಭಾನುವಾರ ಬೆಳಗ್ಗೆಯೇ ಪೊಲೀಸರು ಮನೆಗೆ ಬಂದು ಆತನ ಬಗ್ಗೆ ವಿಚಾರಿಸಿ ಕರೆದುಕೊಂಡು ಹೋದರು. ಟೀವಿ ನೋಡಿದಾಗ ವಿಚಾರ ಗೊತ್ತಾಗಿದೆ ಎಂದು ಜಾಹಿದ್ ಸಹೋದರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಉಮಾರ್‌ಗೆ (ಎ4) ಕಳೆದ 5 ತಿಂಗಳ ಹಿಂದೆಯಷ್ಟೆ ವಿವಾಹವಾಗಿತ್ತು. ವಿವಾಹವಾದ ಬಳಿಕ ದಂಪತಿ ಅನ್ಯೋನ್ಯವಾಗಿದ್ದರು. ಆದರೆ, ಉಮಾರ್ ಭಯೋತ್ಪಾದಕ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ವಿಚಾರ ತಿಳಿದು ಆತನ ಪತ್ನಿ ಚಿಂತೆಗೀಡಾಗಿದ್ದಾರೆ. ಉಮಾರ್ ತಂದೆ ಜನರಲ್ ಸ್ಟೋರ್ ನಡೆಸುತ್ತಿದ್ದು, ಆತನೂ ಇಲ್ಲೇ ಕೆಲಸ ಮಾಡುತ್ತಿದ್ದ. ಕೋಡಿಗೆಹಳ್ಳಿಯ ದೇವಿನಗರದಲ್ಲಿ ಸ್ವಂತ ಮನೆಯೂ ಇದೆ. ಉಮಾರ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಆತನ ಕುಟುಂಬಸ್ಥರು ಮನೆ ಖಾಲಿ ಮಾಡಿ ಬೇರೆಡೆ ಹೋಗಿದ್ದಾರೆ. ಮೊಹಮ್ಮದ್ ಫೈಜಲ್ ರಬ್ಟಾನಿ (ಎ7) ಕುಟುಂಬವು ಸ್ಪೆನ್ಸರ್ ರಸ್ತೆಯ ಅಪಾರ್ಟ್‌ಮೆಂಟ್ ವೊಂದರಲ್ಲಿ ವಾಸಿಸುತ್ತಿತ್ತು. ಕಾರು ಮಾರಾಟಗಾರನಾಗಿದ್ದ. ಈಗ ಆತನ ಬಂಧನದ ಬಳಿಕ ಅವರ ಕುಟುಂಬವೂ ವಾಸ್ತವ್ಯ ಬದಲಿಸಿರುವ ಮಾಹಿತಿ ಸಿಕ್ಕಿದೆ.
ನಮ್ಮ ಮನೆಗೆ ಜುನೇದ್‌ಗೆ ಸೇರಿದ ಪಾರ್ಸೆಲ್ ಬಂದಿತ್ತು. ಬೇರೆಯವರು ಮಾಡಿದ ತಪ್ಪನ್ನು ನನ್ನ ಪತಿಯ ಮೇಲೆ ಹಾಕಲಾಗುತ್ತಿದೆ ಎಂದು ಸೊಹೈಲ್ ಪತ್ನಿ ಕಣ್ಣೀರು ಹಾಕಿದ್ದಾರೆ. ಐವರು ಶಂಕಿತ ಉಗ್ರರ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ, ಐಪಿಸಿ 121 , 120ಬಿ, 121, 122 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜನಸಂದಣಿ ಪ್ರದೇಶದಲ್ಲಿ ಸ್ಫೋಟಕ್ಕೆ ಯತ್ನ: ಶಂಕಿತ ಉಗ್ರರನ್ನು ವಶಕ್ಕೆ ಪಡೆದ ಬಳಿಕ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್‌ಎಲ್) ಆವರಣದಲ್ಲಿರುವ ಇಂಟರಾಗೇಶನ್ ಸೆಲ್‌ಗೆ ಕರೆತಂದ ಸಿಸಿಬಿ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ್ದರು. ಬೆಂಗಳೂರಿನಲ್ಲಿ ತಲೆ ಎತ್ತಿರುವ ಬಹುಮಹಡಿ ಕಟ್ಟಡಗಳು, ಐಟಿ-ಬಿಟಿ ಕಂಪನಿಗಳು, ಪ್ರಮುಖ ಸರ್ಕಾರಿ ಕಚೇರಿಗಳು, ಐಷಾರಾಮಿ ಹೋಟೆಲ್ ಗಳು, ಬಸ್ ನಿಲ್ದಾಣಗಳು ಸೇರಿದಂತೆ ಜನಸಂದಣಿ ಇರುವ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿರುವುದಾಗಿ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಶಂಕಿತರು 7 ದಿನ ಸಿಸಿಬಿ ವಶಕ್ಕೆ : ಸಿಸಿಬಿ ಎಸಿಪಿ ಕುಮಾರ್ ನೇತೃತ್ವದ ಪೊಲೀಸರ ತಂಡವು ಬೆಂಗಳೂರಿನ ಎನ್ ಐಎ ವಿಶೇಷ ನ್ಯಾಯಾಲಯಕ್ಕೆ ಐವರು ಶಂಕಿತ ಉಗ್ರ ರನ್ನು ಹಾಜರು ಪಡಿಸಿ ಹೆಚ್ಚಿನ ವಿಚಾರಣೆ ನಡೆಸಲು 15 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ನ್ಯಾಯಾಲಯವು 7 ದಿನ ಆರೋಪಿ ಗಳನ್ನು ವಶಕ್ಕೆ ನೀಡಿದೆ. ಆರೋಪಿಗಳನ್ನು ನ್ಯಾಯಾಲ ಯಕ್ಕೆ ಕರೆ ತಂದಾಗ ಕೋರ್ಟ್ ಆವರಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.