Advertisement

NIA; ವಾರಾಣಸಿ ಮಹಿಳೆಯ ಹೆಸರಲ್ಲಿ ಬ್ಯಾಂಕ್‌ ಖಾತೆ ಹೊಂದಿದ್ದ ಶಂಕಿತ ಉಗ್ರರು

11:42 PM Feb 14, 2024 | Team Udayavani |

ಮಂಗಳೂರು: ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟ ಹಾಗೂ ಶಿವಮೊಗ್ಗದಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಟ್ರಯಲ್‌ ಪ್ರಕರಣದ ಆರೋಪಿಗಳು ವಾರಾಣಸಿಯ ಮಹಿಳೆಯೋರ್ವರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ಹೊಂದಿದ್ದು ಅದರ ಮೂಲಕವೇ ವಹಿವಾಟು ನಡೆಸು ತ್ತಿದ್ದರು ಎಂಬ ವಿಚಾರವನ್ನು ಎನ್‌ಐಎ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

Advertisement

ಆರೋಪಿಗಳಾದ ಮಹಮ್ಮದ್‌ ಶಾರೀಕ್‌ ಮತ್ತು ಮಾಜ್‌ ಮುನೀರ್‌ ಮಂಗಳೂರನ್ನು ಕೇಂದ್ರೀ ಕರಿಸಿ ಬೆಂಗಳೂರು, ಮೈಸೂರು, ಶಿವಮೊಗ್ಗದಲ್ಲಿ ಓಡಾಟ ನಡೆಸುತ್ತಿದ್ದರು. ಆದರೆ ಸ್ವಂತ ಬ್ಯಾಂಕ್‌ ಖಾತೆ ಹೊಂದಿರಲಿಲ್ಲ. ಬೇರೆಯವರ ಹೆಸರಿನಲ್ಲಿದ್ದ ಬೇನಾಮಿ ಖಾತೆಯನ್ನು ಮಾಜ್‌ ನಿರ್ವಹಿಸುತ್ತಿದ್ದ. ಅದೇ ಹೆಸರಲ್ಲಿ ತನ್ನೆಲ್ಲ ಬ್ಯಾಂಕ್‌ ವಹಿವಾಟು ನಡೆಸು ತ್ತಿದ್ದ. ತನಿಖೆ ಸಂದರ್ಭ ಈ ಖಾತೆ ಉತ್ತರ ಪ್ರದೇಶದ ವಾರಣಾಸಿಯ ಮಹಿಳೆಯ ಹೆಸರಿನಲ್ಲಿರುವುದು ಪತ್ತೆಯಾಗಿದೆ.

ವಿದೇಶದಲ್ಲಿದ್ದ ಉಗ್ರನ ಸೂಚನೆಯಂತೆ ಮಂಗಳೂರಿನಲ್ಲಿ ಮಾಜ್‌ ವಾಸವಿದ್ದ ಮನೆಗೆ ಈ ಬ್ಯಾಂಕ್‌ ಖಾತೆಯ ರೂಪೇ ಕಾರ್ಡ್‌, ಎಟಿಎಂ ಕಾರ್ಡ್‌, ಬ್ಯಾಂಕ್‌ ಪುಸ್ತಕ, ಸಿಮ್‌ ಒಂದನ್ನು ಸೇರಿ ಕೊರಿಯರ್‌ ಮೂಲಕ ಕಳುಹಿಸ ಲಾಗಿತ್ತು. ಈ ಡೆಬಿಟ್‌ ಕಾರ್ಡ್‌ ಹಾಗೂ ಸಿಮ್‌ಗಳನ್ನು ಮಾಜ್‌ ಮುನೀರ್‌ ಮಂಗಳೂರಿನ ಕೋರ್ಟ್‌ ಆವರಣದಲ್ಲಿ ಮೊಹಮ್ಮದ್‌ ಶಾರೀಕ್‌ಗೆ ತಲುಪಿಸಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಕ್ರಿಪ್ಟೋ ಮೂಲಕ ನೆರವು
ಕರ್ನಾಟಕದಲ್ಲಿ ಐಸಿಸ್‌ ನೆಟ್‌ವರ್ಕ್‌ ಬಲಪಡಿಸಲು ವಿದೇಶದಿಂದ ಉಗ್ರರು ನೇರವಾಗಿ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ನೆರವು ನೀಡುತ್ತಿದ್ದರು. ಅದನ್ನು ಬಳಸಿಕೊಂಡು ಮಾಜ್‌ ಮುನೀರ್‌ ಮತ್ತು ಮೊಹಮ್ಮದ್‌ ಶಾರೀಕ್‌ ಐಸಿಸ್‌ ನೆಟ್‌ವರ್ಕ್‌ ಮತ್ತು ಉಗ್ರವಾದಿ ಕೃತ್ಯಗಳನ್ನು ನಡೆಸುತ್ತಿದ್ದರು. ಆರೋಪಿಗಳು ಕ್ರಿಪ್ಟೋ ವ್ಯವಹಾರಕ್ಕೆ ಬಳಸಿಕೊಂಡಿರುವ ಮಧ್ಯವರ್ತಿಗಳನ್ನು ಪ್ರಕರಣದಲ್ಲಿ ಸಾಕ್ಷಿದಾರರನ್ನಾಗಿ ಪರಿಗಣಿಸಲಾಗಿದೆ.
ಮಂಗಳೂರಿನಲ್ಲಿ ಎಂಜಿನಿ ಯರಿಂಗ್‌ ವಿದ್ಯಾರ್ಥಿ ಹಾಗೂ ಪಾರ್ಟ್‌ ಟೈಮ್‌ ಆಗಿ ಡೆಲಿವರ್‌ ಬಾಯ್‌ ಕೆಲಸ ಮಾಡುತ್ತಿದ್ದ ತೀರ್ಥಹಳ್ಳಿ ಮೂಲದ ಮಾಜ್‌ ಮುನೀರ್‌ ಜತೆಗೆ ಕರ್ನಲ್‌ ಎಂಬ ಹೆಸರುಳ್ಳ ಉಗ್ರನೊಬ್ಬ ನೇರ ಸಂಪರ್ಕದಲ್ಲಿದ್ದ. ಯುವಕರನ್ನು ಬ್ರೈನ್‌ವಾಶ್‌ ಮಾಡಿ ಉಗ್ರವಾದಿ ಸಂಘಟನೆಗೆ ಸೇರಿಸಿಕೊಳ್ಳಲು ಮಾಝ್ಗೆ ವಿದೇಶದಿಂದಲೇ ಕ್ರಿಪ್ಟೋ ಕರೆನ್ಸಿಯ ಮೂಲಕ 2.5 ಲ.ರೂ.ಗೂ ಹೆಚ್ಚು ಹಣದ ನೆರವು ನೀಡಿದ್ದ ಎಂಬುದನ್ನು ದಾಖಲೆ ಸಹಿತ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಮಾಜ್‌ ಮುನೀರ್‌ ಮತ್ತು ಮೊಹಮ್ಮದ್‌ ಶಾರೀಕ್‌ ತಮ್ಮ ಸ್ನೇಹಿತರ ಹೆಸರಲ್ಲಿ ಕ್ರಿಪ್ಪೋ ವ್ಯಾಲೆಟ್ಸ್‌ ಮಾಡಿಕೊಂಡಿದ್ದರು. ಆ ವಿಳಾಸವನ್ನು ವಿದೇಶದಲ್ಲಿದ್ದ ಉಗ್ರನಿಗೆ ನೀಡಿದ್ದು, ಆ ವ್ಯಾಲೆಟ್‌ಗಳಿಗೆ ಯುಎಸ್‌ ಡಾಲರ್‌, ಬಿಟ್‌ ಫಿನಾನ್ಸ್‌, ಎಕ್ಸ್‌ ಎಂಆರ್‌, ಜೆಎಎಸ್‌ಎಂವೈ, ಟಿಆರ್‌ ಎಕ್ಸ್‌ ಸೇರಿ ವಿವಿಧ ಮಾದರಿಯ ಕ್ರಿಪ್ಟೋ ಕರೆನ್ಸಿಯನ್ನು ವರ್ಗಾಯಿಸಲಾಗಿತ್ತು. ಅದನ್ನು ಪುನಃ ಭಾರತೀಯ ಕರೆನ್ಸಿಯಾಗಿ ಪರಿವರ್ತಿಸಿ ಭಯೋತ್ಪಾದಕ ಕೃತ್ಯಗಳಿಗೆ ಬಳಸುತ್ತಿದ್ದರು.

ಐಎಸ್‌ ಪ್ರಾಯೋಜಿತ ಕೃತ್ಯ
ಕುಕ್ಕರ್‌ ಬಾಂಬ್‌ ನ್ಪೋಟ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಪ್ರಾಯೋಜಿತ ಕೃತ್ಯ. ಅದಕ್ಕೆ ಮೊಹಮ್ಮದ್‌ ಶಾರೀಕ್‌ ಮತ್ತು ಸಯ್ಯದ್‌ ಶಾರೀಕ್‌ನನ್ನು ಸಂಘಟನೆ ಬಳಸಿಕೊಂಡಿತ್ತು ಎಂದು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. 2022ರ ನ. 19ರಂದು ಮೊಹಮ್ಮದ್‌ ಶಾರೀಕ್‌ ಕುಕ್ಕರ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ)ವನ್ನು ತುಂಬಿಕೊಂಡು ಆಟೋರಿಕ್ಷಾದಲ್ಲಿ ಪ್ರಯಾಣಿಸು ತ್ತಿದ್ದ. ಈ ವೇಳೆ ಕುಕ್ಕರ್‌ ಸ್ಫೋಟಗೊಂಡು, ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ ಹಾಗೂ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಗಂಭೀರ ವಾಗಿ ಗಾಯಗೊಂಡಿದ್ದರು. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಎನ್‌ಐಎ ಪ್ರಕರಣ ದಾಖಲಿಸಿಕೊಂಡು ಮೊಹಮ್ಮದ್‌ ಶಾರೀಕ್‌ ಹಾಗೂ ಸಯ್ಯದ್‌ ಯಾಸಿನ್‌ನನ್ನು ಬಂಧಿಸಿತ್ತು. ಇದಕ್ಕೂ ಮೊದಲು ಶಂಕಿತರು ಮಂಗಳೂರಿನಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಬೆಂಬಲಿಸಿ ಗೋಡೆಬರಹ ಬರೆದಿದ್ದರು. ಜತೆಗೆ ಶಿವಮೊಗ್ಗದ ತುಂಗಾ ತೀರದಲ್ಲಿ ಸ್ಫೋಟ ಪ್ರಯೋಗವನ್ನೂ ಮಾಡಲಾಗಿತ್ತು. ಈ ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಲಾಗಿತ್ತು.

Advertisement

ಮಂಗಳೂರಿನಲ್ಲಿ ವಾಹನ ಖರೀದಿ
ಶಿವಮೊಗ್ಗ ಬಾಂಬ್‌ ಟ್ರಯಲ್‌ನ ಪ್ರಮುಖ ಆರೋಪಿ ಸೈಯದ್‌ ಯಾಸಿನ್‌ಗೆ ಸೇರಿದ ಕ್ರಿಪ್ಟೋ ವ್ಯಾಲೆಟ್‌ಗೂ 1 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಹಣದ ನೆರವು ಬಂದಿತ್ತು. ಬೇರೆ ಬೇರೆ ವ್ಯಕ್ತಿಗಳ ವ್ಯಾಲೆಟ್‌ ಗಳಿಗೆ ಬರುತ್ತಿದ್ದ ಕ್ರಿಪ್ಟೋ ಕರೆನ್ಸಿಯನ್ನು ಮಾಜ್‌ ಮತ್ತು ಶಾರೀಕ್‌ ಪಡೆದುಕೊಳ್ಳುತ್ತಿದ್ದರು ಎಂಬ ಬಗ್ಗೆ ಅಧಿಕಾರಿಗಳು ದಾಖಲೆ ಸಂಗ್ರಹಿಸಿದ್ದಾರೆ. ಈ ಹಣದಿಂದಲೇ ಮಾಜ್‌ ಮತ್ತು ಮೊಹಮ್ಮದ್‌ ಶಾರೀಕ್‌ ಸುಧಾರಿತ ಸ್ಫೋಟಕ ತಯಾರಿಸಲು ಸಾಮಗ್ರಿ ಖರೀದಿಸುತ್ತಿದ್ದರು. ಅಲ್ಲದೆ ಇಂತಹ ಕೃತ್ಯಕ್ಕೆ ಬಳಸಿಕೊಳ್ಳುವುದಕ್ಕಾಗಿಯೇ ಮಂಗಳೂರಿನಲ್ಲಿ 48,500 ರೂ.ಗೆ ಸ್ಕೂಟರ್‌ ಖರೀದಿಸಿದ್ದರು. 27,998 ರೂ. ಮೌಲ್ಯದ ಮೊಬೈಲ್‌ ಮತ್ತು ಸಿಮ್‌ ಖರೀದಿಸಿದ್ದರು.

ಬೆಂಗಳೂರಿನಲ್ಲಿ ಬಾಡಿಗೆ ಮನೆ
ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ಜಾಲ ಬೆಳೆಸುವುದಕ್ಕಾಗಿ ಆರ್‌.ಟಿ. ನಗರದಲ್ಲಿ ಮಸೀದಿಯೊಂದರ ಸಮೀಪ ಮನೆಯನ್ನು ಹುಸೈನ್‌ ಫರ್ಹಾನ್‌ ಬೇಗ್‌ ಎಂಬಾತನ ಹೆಸರಲ್ಲಿ ಬಾಡಿಗೆ ಪಡೆದಿದ್ದರು. ತಿಂಗಳ ಬಾಡಿಗೆ 7 ಸಾವಿರ ರೂ. ಮತ್ತು ಮುಂಗಡವಾಗಿ 70 ಸಾವಿರ ರೂ. ಕೊಡಲಾಗಿತ್ತು. ಈ ಮೊತ್ತವನ್ನು ಕ್ರಿಪ್ಟೋ ಕರೆನ್ಸಿಯ ಮೂಲಕ ವಿದೇಶದಿಂದಲೇ ಪೂರೈಕೆ ಮಾಡಲಾಗಿತ್ತು ಎಂದು ಎನ್‌ಐಎ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next