ಇಂಫಾಲ್/ನವದೆಹಲಿ: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಮೂರ್ನಾಲ್ಕು ದೋಣಿಗಳ ಮೂಲಕ ಬಂದ ಶಂಕಿತ ಬಂಡುಕೋರರು ಹಲವಾರು ಪೊಲೀಸ್ ಔಟ್ ಪೋಸ್ಟ್ ಮೇಲೆ ದಾಳಿ ನಡೆಸಿ, ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿರುವುದಾಗಿ ಮೂಲಗಳು ಎನ್ ಡಿಟಿವಿಗೆ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Hawaiian Islands; ಅಸಾಧಾರಣ ಹವಾ “ಹವಾಯಿ’ ಐಲ್ಯಾಂಡ್
ಜಿರಿಬಾಮ್ ನ ಚೋಟೊಬೆಕ್ರಾದ ಬರಾಕ್ ನದಿ ತೀರದ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಚೋಟೊಬೆಕ್ರಾದಲ್ಲಿನ ಪೊಲೀಸ್ ಔಟ್ ಪೋಸ್ಟ್ ಅನ್ನು ಸುಟ್ಟುಹಾಕಲಾಗಿದ್ದು, ಶಂಕಿತ ಬಂಡುಕೋರರು ಲಮ್ತೈಖುನೌ ಮತ್ತು ಮೊಧುಪುರ್ ನಲ್ಲಿರುವ ಪೊಲೀಸ್ ಔಟ್ ಪೋಸ್ಟ್ ಗಳ ಮೇಲೆ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಜಿರಿಬಾಮ್ ರಾಜಧಾನಿ ಇಂಫಾಲ್ ನಿಂದ 220 ಕಿಲೋ ಮೀಟರ್ ದೂರದಲ್ಲಿದೆ ಹಾಗೂ ಅಸ್ಸಾಂ ಗಡಿಭಾಗದಲ್ಲಿದೆ. ಈ ಜಿಲ್ಲೆಯ ಮೂಲಕ ರಾಷ್ಟ್ರೀಯ ಹೆದ್ದಾರಿ 37 ಹಾದು ಹೋಗಿದ್ದು, ಗುಡ್ಡದಿಂದ ಸುತ್ತುವರಿದಿರುವ ಹೆದ್ದಾರಿ ಸುತ್ತಮುತ್ತ ಹಲವಾರು ಕುಕಿ ಗ್ರಾಮಗಳಿವೆ.
ದೋಣಿಯಲ್ಲಿ ಬಂದ ಬಂಡುಕೋರರು ಏಕಾಏಕಿ ದಾಳಿ ನಡೆಸಿ ಔಟ್ ಪೋಸ್ಟ್ ಹಾಗೂ ಹಲವು ಮನೆಗಳನ್ನು ಬೆಂಕಿ ಹಚ್ಚಿ ಸುಟ್ಟುಹಾಕಿರುವುದಾಗಿ ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಸ್ಸಾಂ ರೈಫಲ್ಸ್ ಶುಕ್ರವಾರ, ಜಿರಿಬಾಮ್ ನಗರದ ಹೊರವಲಯದಲ್ಲಿ ವಾಸಿಸುತ್ತಿದ್ದ ಸುಮಾರು 25 ಮೈತೇಯಿ ಸಮುದಾಯ ಜನರನ್ನು ಬೇರೆಡೆಗೆ ಸ್ಥಳಾಂತರಿಸಿರುವುದಾಗಿ ವರದಿ ತಿಳಿಸಿದೆ.