ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಜೆಎಂಬಿ ಉಗ್ರ ಹಬ್ಬಿಬುರ್ ರೆಹಮಾನ್, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ದರೋಡೆ ಮತ್ತಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಅಂಶ ಎನ್‌ಐಎ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಎನ್‌ಐಎ ವಿಚಾರಣೆ ಸಂದರ್ಭದಲ್ಲಿ ರೆಹಮಾನ್ ಕೆಲವೊಂದು ಮಹತ್ವದ ಮಾಹಿತಿ ಬಾಯಿಬಿಟ್ಟಿದ್ದಾನೆ. ಆರೋಪಿಯ ಬಳಿಯಿದ್ದ ಎರಡು ಸುಧಾರಿತ ಸ್ಫೋಟಕ ಸಾಧನ (ಐಇಡಿ) ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಆರೋಪಿ 2018ರ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ನಡೆದ ಕೆಲ ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದು, ಬಂದ ಹಣವನ್ನು ಬಾಂಗ್ಲಾದೇಶದಲ್ಲಿರುವ ತನ್ನ ಉಗ್ರ ಸಂಘಟನೆ ಜೆಎಂಬಿಗೆ ಕಳುಹಿಸುತ್ತಿದ್ದ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾನೆ.
ಹೀಗಾಗಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಹಾಗೂ ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿ ಆರೋಪಿ ವಿರುದ್ಧ ಯಾವುದಾದರೂ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ಪಡೆಯಬೇಕಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಜೆಎಂಬಿ ಸಂಘಟನೆಯನ್ನು ಆರ್ಥಿಕವಾಗಿ ಸದೃಢ ಪಡಿಸಲು ಹಣ ಹೊಂದಿಸಲು ಹರ ಸಾಹಸ ಪಡುತ್ತಿದ್ದ.
ಬೆಂಗಳೂರು, ತುಮಕೂರು, ರಾಮನಗರದಲ್ಲಿ ವಾಸವಾಗಿದ್ದ ಸಂಘಟನೆಯ ಇತರೆ ಸದಸ್ಯರು ಹಾಗೂ ಸ್ಥಳೀಯ ವ್ಯಕ್ತಿಗಳ ಜತೆ ಸೇರಿ ಕೊಂಡು ಬೆಂಗಳೂರು ನಗರ ಮತ್ತು ಹೊರ ವಲಯಗಳಲ್ಲಿರುವ ಶ್ರೀಮಂತರ ಮನೆಗಳು, ದುಬಾರಿ ಕಾರುಗಳಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಡ್ಡಿ ದರೋಡೆ ಮಾಡುತ್ತಿದ್ದರು. ಬಂದ ಹಣದಲ್ಲಿ ಸ್ಥಳೀಯ ವ್ಯಕ್ತಿಗಳಿಗೆ ಹಂಚಿ, ಇನ್ನುಳಿದ ಮೊತ್ತವನ್ನು ಸಂಘಟನೆಯ ಖಾತೆಗೆ ಜಮೆ ಮಾಡುತ್ತಿದ್ದರು.
ಹೀಗಾಗಿ ಆರೋಪಿಗಳು ಯಾವ ಬ್ಯಾಂಕ್‌ಗಳಿಂದ ಹಣ ವರ್ಗಾವಣೆ ಮಾಡುತ್ತಿದ್ದರು, ಯಾವೆಲ್ಲ ಸ್ಥಳಗಳಲ್ಲಿ ದರೋಡೆ, ಡಕಾಯಿತಿ ಮಾಡಿದ್ದಾರೆ ಎಂಬೆಲ್ಲ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜತೆಗೆ ನೆರೆ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ದರೋಡೆಗೊಳಗಾದ ಪ್ರಕರಣಗಳ ಮಾಹಿತಿ ಪಡೆದು, ಸಂತ್ರಸ್ತ ಕುಟುಂಬ ಸದಸ್ಯರನ್ನು ಸಂಪರ್ಕಿಸಲಾಗುವುದು.
ಅನಂತರ ಘಟನಾ ಸ್ಥಳದಲ್ಲಿರುವ ಸಿಸಿಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿ, ಈ ಹಿಂದೆ ಕೌಸರ್ ಜತೆ ಸೇರಿಕೊಂಡು ಆನೇಕಲ್ ತಾಲೂಕಿನ ಅತ್ತೀಬೆಲೆಯ ಪಿಳ್ಳರೆಡ್ಡಿ ಲೇಔಟ್‌ನಲ್ಲಿರುವ ಇಬ್ಬರು ಶ್ರೀಮಂತ ವ್ಯಕ್ತಿಗಳ ಮನೆಗಳಿಗೆ ನುಗ್ಗಿ ದರೋಡೆ ಮಾಡಿದ್ದ.
ಹೀಗಾಗಿ ದರೋಡೆಗೊಳಗಾದ ಮನೆಯವರ ಜತೆ ನಿರಂತರ ಸಂಪರ್ಕದಲ್ಲಿದ್ದು, ಅವರನ್ನು ಆರೋಪಿಯ ಐಡೆಂಟಿಫಿಕೆಶನ್ ಪರೇಡ್(ಗುರುತು ಪತ್ತೆ ಹಚ್ಚುವುದು)ಗೆ ಕರೆಸಿಕೊಂಡು ಸಾಕ್ಷ್ಯ ಪಡೆಯಲಾಗುತ್ತದೆ. ಜತೆಗೆ ಎರಡು ಮನೆಗಳಿಗೆ ನುಗ್ಗಿದ ದರೋಡೆಕೋರರು ಉರ್ದು ಹೊರತು ಪಡಿಸಿ ಬೇರೆ ಯಾವುದೇ ಭಾಷೆ ಬರುತ್ತಿರಲಿಲ್ಲ. ರೈಫಲ್‌ಗಳು ಮತ್ತು ಮಾರಕಾಸ್ತ್ರಗಳನ್ನು ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ.