ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಪ್ರಕರಣ ಮುಂದುವರಿದಿದ್ದು, ಬುಧವಾರ 32 ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
ದಾಖಲಾದ ಒಟ್ಟು 32 ಮಂದಿಯ ಪೈಕಿ 31 ಮಂದಿ ಮಂಗಳೂರು ತಾಲೂಕಿನವರು, ಓರ್ವ ಬಂಟ್ವಾಳದವರು. ಜುಲೈ 18ರಿಂದ ಈವರೆಗೆ ಒಟ್ಟು 195 ಮಂದಿ ಡೆಂಗ್ಯೂ ಜ್ವರಕ್ಕಾಗಿ ಚಿಕಿತ್ಸೆ ಪಡೆದಿದ್ದಾರೆ.
65 ಸಾವಿರ ರೂ. ದಂಡ ಸಂಗ್ರಹ
ನೀರು ನಿಲ್ಲಿಸಿ ಸೊಳ್ಳೆ ಉತ್ಪತ್ತಿಗೆ ಪೂರಕ ತಾಣ ಕಲ್ಪಿಸಿದ ಹಿನ್ನೆಲೆಯಲ್ಲಿ 9 ನಿರ್ಮಾಣ ಹಂತದ ಕಟ್ಟಡ, ಇತರ ಕಟ್ಟಡಗಳ ಗುತ್ತಿಗೆದಾರರು, ಮಾಲಕರಿಗೆ ಬುಧವಾರ ಒಟ್ಟು 65 ಸಾವಿರ ರೂ. ದಂಡ ವಿಧಿಸಲಾಗಿದೆ. ಒಟ್ಟು 20 ಕಡೆ ತಪಾಸಣೆ ನಡೆಸಲಾಗಿದೆ.
ಸೊಳ್ಳೆ ಉತ್ಪತ್ತಿಗೆ ಪೂರಕ ತಾಣವನ್ನು ಶುಚಿಗೊಳಿಸದೆ ಹಾಗೆಯೇ ಬಿಡುವ ಕಟ್ಟಡ, ಮನೆ, ಇತರ ವ್ಯಾಪಾರ ಕೇಂದ್ರಗಳಲ್ಲಿ ತಪಾಸಣೆ ವೇಳೆ ಕಂಡುಬಂದರೆ ದಂಡ ವಿಧಿಸುವ ಪ್ರಕ್ರಿಯೆ ಮಹಾನಗರ ಪಾಲಿಕೆಯಿಂದ ರವಿವಾರದಿಂದ ಆರಂಭವಾಗಿದ್ದು, ಈವರೆಗೆ 2,70,000 ರೂ. ದಂಡ ಸಂಗ್ರಹವಾಗಿದೆ.