ಬೆಂಗಳೂರು: ಅಕ್ರಮ ಸಂಬಂಧ ವಿಚಾರಕ್ಕೆ ಜಗಳ ತೆಗೆದ ವ್ಯಕ್ತಿಯೊಬ್ಬ ಒಂದೇ ಕುಟುಂಬದ ಮೂವರಿಗೆ ಚಾಕುವಿನಿಂದ ಇರಿದಿದ್ದು, ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕೊತ್ತನೂರು ಠಾಣೆ ವ್ಯಾಪ್ತಿಯ ಭೈರತಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಕೊತ್ತನೂರು ನಿವಾಸಿ ಸಾವಿತ್ರಮ್ಮ (47) ಹತ್ಯೆಯಾದ ಮಹಿಳೆ. ಘಟನೆಯಲ್ಲಿ ಸಾವಿತ್ರಮ್ಮ ಅವರ ಪತಿ ಸಣ್ಣಪ್ಪ ಹಾಗೂ ಪುತ್ರ, ಆಟೋ ಚಾಲಕ ಭರತ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೃತ್ಯವೆಸಗಿದ ಆರೋಪಿ ಆನಂದ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆನಂದ್, 13 ವರ್ಷಗಳ ಹಿಂದೆ ದಾವಣಗೆರೆ ಮೂಲದ ಸುಮಾ (ಹೆಸರು ಬದಲಿಸಲಾಗಿದೆ) ಎಂಬುವವರನ್ನು ವಿವಾಹವಾಗಿದ್ದು, ದಂಪತಿಗೆ 11 ವರ್ಷದ ಹೆಣ್ಣು ಮಗು ಇದೆ. ಈ ಮಧ್ಯೆ ಆಟೋ ಚಾಲಕ ಭರತ್‌ಗೆ ಸುಮಾರ ಪರಿಚಯವಾಗಿದೆ.
ಪರಿಚಯವಾದ ನಂತರ ಭೈರತಿಯಲ್ಲಿರುವ ಸುಮಾ ಅವರ ಮನೆಗೆ ಭರತ್ ಆಗಾಗ ಬಂದು ಹೋಗುತ್ತಿದ್ದ. ಇದನ್ನು ಗಮನಿಸಿದ ಪತಿ ಆನಂದ್, ಭರತ್ ಜತೆ ಅಕ್ರಮ ಸಂಬಂಧ ಹೊಂದಿರುವೆ ಎಂದು ಪತ್ನಿ ಜತೆ ಪದೇ ಪದೆ ಜಗಳವಾಡುತ್ತಿದ್ದ. ಆದರೆ, ತನಗೂ ಭರತ್‌ಗೂ ಯಾವುದೇ ಸಂಬಂಧವಿಲ್ಲ. ಪರಿಚಯವಿರುವುದರಿಂದ ಮನೆಗೆ ಬಂದು ಹೋಗುತ್ತಾರೆ ಎಂದು ಸುಮಾ ಹೇಳುತ್ತಿದ್ದರು.
ಆದರೆ, ಶನಿವಾರ ರಾತ್ರಿ ಇದೇ ವಿಚಾರವಾಗಿ ಮತ್ತೂಮ್ಮೆ ಸುಮಾ ಜತೆ ಜಗಳವಾಡಿದ ಆನಂದ್, ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಕೋಪಗೊಂಡ ಸುಮಾ ಕೂಡಲೇ ಭರತ್‌ಗೆ ಕರೆ ಮಾಡಿ ಪತಿಗೆ ಬುದ್ಧಿ ಹೇಳುವಂತೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಭರತ್ ಎಷ್ಟೇ ಸಮಾಧಾನ ಮಾಡಿದರೂ ಆನಂದ್ ಸುಮ್ಮನಾಗಿಲ್ಲ. ಬಳಿಕ ತನ್ನ ತಂದೆ ಸಣ್ಣಪ್ಪ ಮತ್ತು ತಾಯಿ ಸಾವಿತ್ರಮ್ಮ ಅವರನ್ನು ಕರೆಸಿಕೊಂಡು ತಿಳಿಹೇಳಲು ಮುಂದಾಗಿದ್ದಾರೆ.
ಇದಕ್ಕೆ ಆಕ್ರೋಶಗೊಂಡ ಆನಂದ್, ಮನೆಯಲ್ಲಿದ್ದ ಚಾಕುನಿಂದ ಸಾವಿತ್ರಮ್ಮ ಅವರ ಎದೆಗೆ ಇರಿದಿದ್ದಾನೆ. ಇದನ್ನು ತಡೆಯಲು ಬಂದ ಭರತ್ ಹಾಗೂ ಪತಿ ಸಣ್ಣಪ್ಪ ಅವರ ಕೈ, ಬೆನ್ನಿಗೂ ಇರಿದಿದ್ದಾನೆ. ತೀವ್ರ ಗಾಯಗೊಂಡ ಸಾವಿತ್ರಮ್ಮ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಆನಂದ್‌ನನ್ನು ಬಂಧಿಸಿದ್ದಾರೆ. ಪ್ರಕರಣ ಕೊತ್ತನೂರು ಠಾಣೆಯಲ್ಲಿ ದಾಖಲಾಗಿದೆ.