ಬಾಲಿವುಡ್‌ನಲ್ಲಿ ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚಾಗಿ ಇನ್ನಿತರ ವಿಷಯಗಳಿಗೆ ಸುದ್ದಿಯಾಗುತ್ತಿರುವ ನಟಿಯರ ಪೈಕಿ ಸುಶ್ಮಿತಾ ಸೇನ್ ಕೂಡ ಒಬ್ಬರು. ಅದರಲ್ಲೂ ಕಳೆದ ಒಂದು ವರ್ಷದಿಂದ ಸುಶ್ಮಿತಾ ಸೇನ್ ಮದುವೆ ವಿಚಾರ ಬಾಲಿವುಡ್‌ನಲ್ಲಿ ಸಾಕಷ್ಟು ಗುಲ್ಲು ಎಬ್ಬಿಸಿರುವುದಂತೂ ಸುಳ್ಳಲ್ಲ. ಈಗ ಸುಶ್ಮಿತಾ ಮದುವೆ ಬಗ್ಗೆ ಮತ್ತೂಂದು ಸುದ್ದಿ ಹರಿದಾಡುತ್ತಿದೆ. ಹೌದು, ಸದ್ಯ 42 ವರ್ಷ ವಯಸ್ಸಾದರೂ, ಇನ್ನೂ ಮದುವೆಯಾಗದೆ ಸಿನಿಮಾ, ಮಾಡಲಿಂಗ್, ರ್‍ಯಾಂಪ್ ವಾಕ್ ಅಂತಿದ್ದ ಸುಶ್ಮಿತಾ ಈಗ ದಿಢೀರನೆ ಮದುವೆ ಆಗುವ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರಂತೆ. ಕಳೆದ ಎರಡು ವರ್ಷದಿಂದ ಮಾಡೆಲ್ ರೋಹ್ಮಾನ್ ಶಾಲ್ ಜೊತೆ ಡೇಟಿಂಗ್‌ನಲ್ಲಿದ್ದ ಸುಶ್ಮಿತಾ ಈಗ ಅದೇ ಬಾಯ್ ಫ್ರೆಂಡ್ ಜೊತೆ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ.
ಅಂದ ಹಾಗೆ, ಈ ಹಿಂದೆ ಕೂಡ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಹೆಸರು ಸಾಕಷ್ಟು ಜನರ ಜೊತೆ ತಳುಕು ಹಾಕಿಕೊಂಡಿತ್ತು. ಆದರೆ ಯಾವುದೂ ಮದುವೆಯವರೆಗೂ ಹೋಗಿರಲಿಲ್ಲ. ಈಗ ಸುಶ್ಮಿತಾ ಹೆಸರು ಮಾಡೆಲ್ ರೋಹ್ಮಾನ್ ಶಾನ್ ಜೊತೆ ತಳುಕು ಹಾಕಿ ಕೊಂಡಿದ್ದು, ಇಬ್ಬರೂ ಈ ವರ್ಷದ ಕೊನೆ ಯಲ್ಲಿ ಅಂದರೆ, ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಹಸೆಮಣೆ ಏರಲು ಪ್ಲಾನ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇನ್ನೊಂದು ವಿಷಯವೆಂದರೆ, ಸುಶ್ಮಿತಾ ಸೇನ್ ಮತ್ತು ರೋಹ್ಮಾನ್ ಇಬ್ಬರ ನಡುವಿನ ವಯಸ್ಸಿನ ಅಂತರ ಕೂಡ ಈ ವೇಳೆ ಸಾಕಷ್ಟು ಚರ್ಚೆಯಾಗುತ್ತಿದೆ. ಸುಶ್ಮಿತಾ ಸೇನ್ ಅವರಿಗೆ 42 ವರ್ಷ. ಆದ್ರೆ ರೋಹ್ಮಾನ್ ಇನ್ನೂ 28 ವರ್ಷದ ಯುವಕ. ಇಬ್ಬರ ನಡುವೆ ಬರೋಬ್ಬರಿ 14 ವರ್ಷಗಳ ಅಂತರವಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇತ್ತೀಚಿಗಷ್ಟೆ 35 ವರ್ಷದ ಪ್ರಿಯಾಂಕಾ ಚೋಪ್ರಾ 25 ವರ್ಷದ ನಿಕ್ ಜೋನಸ್ ಜೊತೆ ಮದುವೆಯಾದಾಗಲೂ ಇಬ್ಬರ ವಯಸ್ಸಿನ ಅಂತರ ಜೋರಾಗಿ ಚರ್ಚೆಯಾಗಿತ್ತು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸುಶ್ಮಿತಾ ಮತ್ತು ರೋಹ್ಮಾನ್ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಿಶ್ಚಿತಾರ್ಥದ ವೇಳೆ ಉಂಗುರ ಧರಿಸಿದ್ದಾರೆ ಎನ್ನಲಾದ ರೋಹ್ಮಾನ್ ಜೊತೆ ಇರುವ ಸುಶ್ಮಿತಾ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಟ್ಟಾರೆ ಸುಶ್ಮಿತಾ ಸೇನ್ ಹಸೆಮಣೆ ಏರಿದ ಮೇಲಷ್ಟೇ ಮದುವೆಯ ಕುರಿತಾಗಿ ಹರಿದಾಡುತ್ತಿರುವ ಎಲ್ಲಾ ಗೊಂದಲಗಳಿಗೆ ತೆರೆ ಬೀಳಲಿದೆ.