Advertisement
ಅಮ್ಮನನ್ನು ಕಳೆದುಕೊಂಡ ಹಿಂದೂಸ್ತಾನದ ಮಗಳುತನ್ನ 8ನೆಯ ವಯಸ್ಸಿನಲ್ಲಿ ಸಮಝೋತಾ ಎಕ್ಸಪ್ರಸ್ ರೈಲೇರಿ ಪಾಕಿಸ್ತಾನಕ್ಕೆ ತಪ್ಪಿಸಿಕೊಂಡು ಹೋಗಿದ್ದ ‘ಗೀತಾ’ ಎಂಬ ಕಿವುಡ-ಮೂಗ ಯುವತಿಯನ್ನು ಭಾರತಕ್ಕೆ ಕರೆತರುವಲ್ಲಿ ವಿಶೇಷ ಮುತುವರ್ಜಿ ತೋರಿದ್ದರು ಸುಷ್ಮಾ ಸ್ವರಾಜ್. ಗೀತಾಗೆ ತನ್ನ ಊರು ಯಾವುದು, ಪೋಷಕರು ಯಾರು ಎನ್ನುವುದೂ ನೆನಪಿಲ್ಲ. ಆದರೆ ಆಕೆಯನ್ನು ದೇಶಕ್ಕೆ ಕರೆತಂದಾಗ ಸುಷ್ಮಾ ಅವರು ಹೇಳಿದ ಮಾತು ಒಂದೇ-”ಗೀತಾ ಹಿಂದೂಸ್ತಾನದ ಮಗಳು. ಆಕೆಗೆ ತನ್ನ ಕುಟುಂಬದವರು ಸಿಗದೇ ಹೋದರೂ, ನಾವು ಆಕೆಯನ್ನು ಪಾಕ್‌ಗೆ ವಾಪಸ್ ಕಳುಹಿಸುವುದಿಲ್ಲ. ಭಾರತ ಸರ್ಕಾರವೇ ಇನ್ಮುಂದೆ ಗೀತಾಳನ್ನು ಪೋಷಿಸಲಿದೆ”
ಭಾರತದ ಇಂಜಿನಿಯರ್ ಹಮೀದ್ ಅನ್ಸಾರಿ, ತನ್ನ ಆನ್‌ಲೈನ್ ಪ್ರಿಯತಮೆಯನ್ನು ಭೇಟಿಯಾಗುವುದಕ್ಕಾಗಿ ಪಾಕಿಸ್ತಾನಕ್ಕೆ ತೆರಳಿ, ಅಲ್ಲಿ ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪದಲ್ಲಿ ಜೈಲು ಸೇರಿಬಿಟ್ಟಿದ್ದರು. ಆರು ವರ್ಷ ಸೆರೆವಾಸದಲ್ಲಿದ್ದ ಅವರನ್ನು ಬಿಡಿಸಿಕೊಂಡು ಬರಲು ಭಾರತದ ವಿದೇಶಾಂಗ ಸಚಿವಾಲಯ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಹಮೀದ್‌ತಾಯಿ ಫೌಜಿಯಾ ಅನ್ಸಾರಿಯವರು ಸುಷ್ಮಾ ಸ್ವರಾಜ್‌ರ ನಿಧನ ವಾರ್ತೆ ಕೇಳಿ ದುಃಖೀತರಾಗಿದ್ದಾರೆ…ಸುಷ್ಮಾರನ್ನು ಅವರು ನೆನೆದದ್ದು ಹೀಗೆ:
Related Articles
Advertisement
ನನ್ನ ಮಗನನ್ನು ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ನಾನು ಅವರನ್ನು ಏಳೆಂಟು ಬಾರಿ ಭೇಟಿಯಾಗಿದ್ದೇನೆ. ಅವರನ್ನು ಮೊದಲ ಬಾರಿ ಭೇಟಿಯಾದ ಘಟನೆ ಚೆನ್ನಾಗಿ ನೆನಪಿದೆ. ಸುಷ್ಮಾ ವಿದೇಶಾಂಗ ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನವದು. ಈ ಕಾರಣಕ್ಕಾಗಿ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಅವರ ಬಂಗಲೆ ಎದುರಿಗೆ ಜಮಾಯಿಸಿದ್ದರು. ನಾನು ಈ ಗುಂಪಿನ ಒಳಗೆ ತೂರಿ, ಕಾರಿನೆಡೆಗೆ ಹೋಗುತ್ತಿದ್ದ ಸುಷ್ಮಾರತ್ತ ಹೋದೆ. ಅವರು ಇನ್ನೇನು ಕಾರ್ ಏರಬೇಕು, ಆಗ ನಾನು ‘ಮೇಡಂ, ನಿಮಗೆ ಕೊಡಲು ನಾನು ಹೂವು, ಗಿಫ್ಟ್ಗಳನ್ನು ತಂದಿಲ್ಲ. ನನ್ನ ಬಳಿ ಬರೀ ಕಣ್ಣೀರೊಂದೇ ಇದೆ’ ಎಂದೆ. ಈ ಮಾತು ಕೇಳಿದ್ದೇ ಸುಷ್ಮಾ ನನ್ನತ್ತ ಧಾವಿಸಿ ಬಂದು ತಬ್ಬಿಕೊಂಡರು.
‘ಸಂಜೆ 4 ಗಂಟೆಗೆ ನನ್ನ ಕಚೇರಿಗೆ ಬಂದುಬಿಡಿ’ ಎಂದು ಹೇಳಿದರು. ನನಗೆ ಆಘಾತವಾಯಿತು.
‘ಮೇಡಂ, ಇವತ್ತೇ ಸಂಜೇನಾ?’ ಅಂದೆ.
‘ಹೌದು, ಇವತ್ತೇ ಸಂಜೆ’ ಅಂದರು.
ನಂತರ ಹಲವಾರು ಬಾರಿ, ನಾನು ಮತ್ತು ಕುಟುಂಬದವರು ಸುಷ್ಮಾರನ್ನು ಭೇಟಿಯಾದೆವು. ಬಹುತೇಕ ಬಾರಿ ನಾವು ಅಪಾಯಿಂಟ್ಮೆಂಟ್ ಅನ್ನೇ ತೆಗೆದುಕೊಳ್ಳುತ್ತಿರಲಿಲ್ಲ. ಆದರೂ ಪ್ರತಿ ಬಾರಿಯೂ ಅವರು ನಮ್ಮನ್ನು ಆದರದಿಂದ ಬರಮಾಡಿಕೊಂಡು, ಪ್ರೀತಿಯಿಂದ ಮಾತನಾಡುತ್ತಿದ್ದರು. ಕೊನೆಗೂ ವಿದೇಶಾಂಗ ಸಚಿವಾಲಯದ ಪ್ರಯತ್ನದ ಫಲವಾಗಿ ಹಮೀದ್ ಪಾಕಿಸ್ತಾನದಿಂದ ಬಿಡುಗಡೆಗೊಂಡ. ಅವನು ವಾಪಸ್ ಬಂದದ್ದೇ, ಅವನನ್ನು ನೇರವಾಗಿ ಸುಷ್ಮಾ ಸ್ವರಾಜ್‌ರ ಬಳಿ ಕರೆದೊಯ್ದೆವು. ನಮಗಾಗಿ ಅವರು ತುಂಬಾ ಖುಷಿಪಟ್ಟರು. ‘ನಿಮ್ಮ ಕಷ್ಟದ ದಿನಗಳೆಲ್ಲ ಮುಗಿದುಹೋದವು. ಖುಷಿಯಾಗಿರಿ. ಏನೇ ಬೇಕಾದರೂ ನನ್ನನ್ನು ಸಂಪರ್ಕಿಸಿ. ಹಮೀದ್ ನನ್ನ ಮಗನಿದ್ದಂತೆ’ ಎನ್ನುತ್ತಾ ನಮ್ಮಿಬ್ಬರನ್ನೂ ತಬ್ಬಿಕೊಂಡರು.
ಸುಷ್ಮಾಜೀ ಅಪರೂಪದ ರಾಜಕಾರಣಿಯಾಗಿದ್ದರು. ನನ್ನ ಮಗ ಕೇಸ್ ಗೆಲ್ಲಲು ತುಂಬಾ ಸಹಾಯ ಮಾಡಿದ ಪಾಕಿಸ್ತಾನಿ ಪತ್ರಕರ್ತೆ ಝೀನತ್ ಶೆಹಜಾದಿ-‘ಸುಷ್ಮಾರ ಬಗ್ಗೆ ಪಾಕಿಸ್ತಾನಿಯರಿಗೆ ಬಹಳ ಗೌರವವಿದೆ’ ಎಂದೇ ಹೇಳುತ್ತಿದ್ದರು. ಮೇಡಂ ಇಲ್ಲ ಎನ್ನುವುದು ತಿಳಿದು ತುಂಬಾ ನೋವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.
ಬೆನ್ಸಿ-ಬೆನ್ಸನ್ ಬದುಕು ಬದಲಿಸಿದ ಆ ಅಪ್ಪುಗೆ
2003ರಲ್ಲಿ ಕೇರಳದ ತಿರುವನಂತಪುರದಲ್ಲೊಂದು ಘಟನೆ ನಡೆಯಿತು. ಬೆನ್ಸಿ ಮತ್ತು ಬೆನ್ಸನ್ ಎಂಬ ಎಚ್ಐವಿ ಪೀಡಿತ ಮಕ್ಕಳಿಬ್ಬರಿಗೆ ಅಲ್ಲಿನ ಶಾಲೆಯೊಂದು ಪ್ರವೇಶ ನಿರಾಕರಿಸಿಬಿಟ್ಟಿತು. ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಕೇರಳ ಸರ್ಕಾರ ಘಟನೆಗೆ ತಕ್ಷಣ ಸ್ಪಂದಿಸಿತಾದರೂ, ನಿಜಕ್ಕೂ ಈ ಮಕ್ಕಳ ಬದುಕಲ್ಲಿ ಬೆಳಕಿನ ಕಿರಣವಾದವರು ಸುಷ್ಮಾ ಸ್ವರಾಜ್. ಸುದ್ದಿ ತಿಳಿದದ್ದೇ ದೆಹಲಿಯಿಂದ ತಿರುವನಂತಪುರಂಗೆ ಬಂದ ಸುಷ್ಮಾ ಸ್ವರಾಜ್, ಈ ಮಕ್ಕಳಿಬ್ಬರನ್ನೂ ಸಾರ್ವಜನಿಕವಾಗಿ ಅಪ್ಪಿಕೊಂಡರು. ಎಚ್ಐವಿ ಪೀಡಿತ ಮಕ್ಕಳಿಗೆ ತಾರತಮ್ಯ ಮಾಡಬೇಡಿ ಎಂದು ಹೇಳಿದರು. ಈಗ ಸುಷ್ಮಾ ಸ್ವರಾಜ್ ನಿಧನರಾದ ಸುದ್ದಿ ಕೇಳಿ ಬೆನ್ಸಿ- ಬೆನ್ಸನ್‌ರ ಅಜ್ಜಿ ಹಿಂದಿನ ಘಟನೆಯನ್ನು ನೆನೆಯುವುದು ಹೀಗೆ: ”ಮೊದಲೆಲ್ಲ ಜನ ನಮ್ಮನ್ನು ದೂರವೇ ಇಟ್ಟಿದ್ದರು. ಸುಷ್ಮಾ ಸ್ವರಾಜ್ ಬಂದುಹೋದ ನಂತರ ನೆರವಿನ ಮಹಾಪೂರವೇ ಹರಿಯಿತು. ಮೊಮ್ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿತು. ಎಚ್ಐವಿ ಪೀಡಿತ ಮಕ್ಕಳ ಬಗ್ಗೆ ನಮ್ಮ ರಾಜ್ಯದಲ್ಲಿನ ಪರಿಕಲ್ಪನೆಯೇ ಬದಲಾಯಿತು”. 2010ರಲ್ಲಿ ಬೆನ್ಸಿ ಮೃತಪಟ್ಟಳು. ಬೆನ್ಸನ್‌ಗೆ ಈಗ 23 ವರ್ಷ.
ಹಿಂದೂ-ಮುಸ್ಲಿಂ ಎಂದು ನೋಡಲಿಲ್ಲ
”ನಾನು ಬದುಕು ಕಟ್ಟಿಕೊಳ್ಳಲು ಸೌದಿಗೆ ಹೋಗಿದ್ದೆ. ಆದರೆ ಅಲ್ಲಿ ನನ್ನ ಮಾಲೀಕರು ನನಗೆ ವಿಪರೀತ ಕಿರುಕುಳ ನೀಡಲಾರಂಭಿಸಿದರು, ನನ್ನ ಪಾಸ್‌ಪೋರ್ಟ್ ಎತ್ತಿಟ್ಟುಬಿಟ್ಟರು. ಹೀಗಾಗಿ, ಸುಷ್ಮಾ ಮೇಡಂ ಅವರ ನೆರವನ್ನು ಭಾರತದಲ್ಲಿದ್ದ ನನ್ನ ಪತಿ ಯಾಚಿಸಿದಾಗ ಅವರು ಕೂಡಲೇ ಸೌದಿಯಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಫೋನ್ ಮಾಡಿ, ನಾನು ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗುವಂತೆ ಮಾಡಿದರು. ಸುಷ್ಮಾ ಮೇಡಂ ತುಂಬಾ ಒಳ್ಳೆಯವರಾಗಿದ್ದರು, ಹೊರದೇಶಗಳಲ್ಲಿ ಸಿಲುಕಿದ್ದ ಸಾವಿರಾರು ಜನರನ್ನು ರಕ್ಷಿಸಿ ದೇಶಕ್ಕೆ ಕರೆತಂದಿದ್ದರು. ಅವರೆಂದೂ ಹಿಂದೂ- ಮುಸ್ಲಿಂ ಎಂದು ಭೇದಭಾವ ಮಾಡಿದವರಲ್ಲ, ಎಲ್ಲಾ ಧರ್ಮದವರಿಗೂ ರಕ್ಷಣೆ ನೀಡಿದ್ದಾರೆ. ಸುಷ್ಮಾ ಮೇಡಂ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ. ಅವರು ಮೃತಪಟ್ಟಿದ್ದಾರೆಂಬ ಸುದ್ದಿ ತಿಳಿದಾಗಿನಿಂದ ಮನಸ್ಸಿಗೆ ನೆಮ್ಮದಿಯೇ ಇಲ್ಲದಾಗಿದೆ” ಎನ್ನುತ್ತಾರೆ ತೆಲಂಗಾಣದ ಅಂಜು ಫಾತಿಮಾ. ಅಂಜು ಫಾತಿಮಾ ಈಗ ಟೇಲರಿಂಗ್ ಮಾಡಿಕೊಂಡಿದ್ದಾರೆ.
ಸುದ್ದಿ ತಿಳಿದು ನಿದ್ದೆಯೇ ಮಾಡಿಲ್ಲ
ಕೆಲಸ ಅರಸಿ ಸೌದಿಗೆ ತೆರಳಿ ಅಲ್ಲಿ, ಮಾಲೀಕರ ದೌರ್ಜನ್ಯದಿಂದ ತತ್ತರಿಸಿದ್ದ ಹೈದ್ರಾಬಾದ್‌ನ ಜೈನಾಬಿ, ಸುಷ್ಮಾರ ಪ್ರಯತ್ನದ ಫಲವಾಗಿ ದೇಶಕ್ಕೆ ಸುರಕ್ಷಿತವಾಗಿ ಹಿಂದಿರುಗಿದರು. ಸುಷ್ಮಾ ನಿಧನ ವಾರ್ತೆ ತಿಳಿದು ಅವರು ಆಘಾತಗೊಂಡಿದ್ದಾರೆ. ಸುಷ್ಮಾರನ್ನು ನೆನೆದು ಅವರು ಅಳುತ್ತಾ ಹೇಳಿದ್ದಿಷ್ಟು: ”ಸುಷ್ಮಾ ಸ್ವರಾಜ್ ಮೇಡಂ ನಮಗೆ ತುಂಬಾ ಸಹಾಯ ಮಾಡಿದ್ದಾರೆ. ನಾನು ಸೌದಿಯಲ್ಲಿ ಸಿಕ್ಕಿ ಬಿದ್ದಿದ್ದಾಗ ಸುಷ್ಮಾ ಮೇಡಂ ನನಗೆ ಸಹಾಯ ಮಾಡಲು ಅನೇಕರನ್ನು ಕಳುಹಿಸಿಕೊಟ್ಟರು. ಭಾರತಕ್ಕೆ ಹಿಂದಿರುಗುತ್ತೇನೆಂಬ ಭರವಸೆಯೇ ನನಗೆ ಉಳಿದಿರಲಿಲ್ಲ. ಅವರು ತೀರಿಹೋದರು ಎಂಬ ಸುದ್ದಿ ಕೇಳಿದ ಮೇಲಿಂದ ತುಂಬಾ ಸಂಕಟವಾಗುತ್ತಿದೆ. ರಾತ್ರಿಯೆಲ್ಲ ನಿದ್ರೆಯೇ ಮಾಡಿಲ್ಲ.”
ಕೆಲಸ ಅರಸಿ ಸೌದಿಗೆ ತೆರಳಿ ಅಲ್ಲಿ, ಮಾಲೀಕರ ದೌರ್ಜನ್ಯದಿಂದ ತತ್ತರಿಸಿದ್ದ ಹೈದ್ರಾಬಾದ್‌ನ ಜೈನಾಬಿ, ಸುಷ್ಮಾರ ಪ್ರಯತ್ನದ ಫಲವಾಗಿ ದೇಶಕ್ಕೆ ಸುರಕ್ಷಿತವಾಗಿ ಹಿಂದಿರುಗಿದರು. ಸುಷ್ಮಾ ನಿಧನ ವಾರ್ತೆ ತಿಳಿದು ಅವರು ಆಘಾತಗೊಂಡಿದ್ದಾರೆ. ಸುಷ್ಮಾರನ್ನು ನೆನೆದು ಅವರು ಅಳುತ್ತಾ ಹೇಳಿದ್ದಿಷ್ಟು: ”ಸುಷ್ಮಾ ಸ್ವರಾಜ್ ಮೇಡಂ ನಮಗೆ ತುಂಬಾ ಸಹಾಯ ಮಾಡಿದ್ದಾರೆ. ನಾನು ಸೌದಿಯಲ್ಲಿ ಸಿಕ್ಕಿ ಬಿದ್ದಿದ್ದಾಗ ಸುಷ್ಮಾ ಮೇಡಂ ನನಗೆ ಸಹಾಯ ಮಾಡಲು ಅನೇಕರನ್ನು ಕಳುಹಿಸಿಕೊಟ್ಟರು. ಭಾರತಕ್ಕೆ ಹಿಂದಿರುಗುತ್ತೇನೆಂಬ ಭರವಸೆಯೇ ನನಗೆ ಉಳಿದಿರಲಿಲ್ಲ. ಅವರು ತೀರಿಹೋದರು ಎಂಬ ಸುದ್ದಿ ಕೇಳಿದ ಮೇಲಿಂದ ತುಂಬಾ ಸಂಕಟವಾಗುತ್ತಿದೆ. ರಾತ್ರಿಯೆಲ್ಲ ನಿದ್ರೆಯೇ ಮಾಡಿಲ್ಲ.”