Advertisement
ವಿಶ್ವಸಂಸ್ಥೆ ಮಹಾಅಧಿವೇಶನದ ವೇಳೆ ನಡೆದ ಈ ಸಭೆಯಲ್ಲಿ ಸುಷ್ಮಾ, ತಮ್ಮ ಭಾಷಣ ಮುಗಿದ ನಂತರ ಇತರ ಕಾರ್ಯಕ್ರಮಗಳಿಗಾಗಿ ತೆರಳಿದ್ದಾರೆ. ಆದರೆ ಭಾರತದ ರಾಜತಾಂತ್ರಿಕ ಮೂಲಗಳ ಪ್ರಕಾರ ಇಂತಹ ಸಭೆಯಲ್ಲಿ ತಮ್ಮ ಭಾಷಣವನ್ನು ಮುಗಿಸಿದ ಬಳಿಕ ಹೊರನಡೆಯುವುದು ಸಹಜವಾಗಿದೆ. ಅಲ್ಲದೆ, ಸುಷ್ಮಾರಿಗಿಂತ ಮೊದಲು ಅಫ್ಘಾನಿ ಸ್ತಾನ ಮತ್ತು ಬಾಂಗ್ಲಾದೇಶದ ಪ್ರತಿನಿಧಿಗಳು ಹೊರನಡೆದಿದ್ದರು. ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸಭೆ ಮುಗಿಯುವ ತನಕವೂ ಹಾಜರಿದ್ದರು. ಇನ್ನೊಂದೆಡೆ ಭಾರತದ ಈ ವರ್ತನೆಯೇ ಸಂಬಂಧ ಸುಧಾರಣೆಗೆ ಅಡ್ಡಿಯಾಗಿದೆ ಎಂದು ಖುರೇಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊರಿಯಾ ದೇಶಗಳ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಪ್ರಕ್ರಿಯೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಭಾರತದ ನೆರೆ ದೇಶಗಳಿಗೂ ಅನ್ವಯಿಸಬೇಕಿದೆ ಮತ್ತು ಇದು ಭಾರತ ತನ್ನ ನೆರೆಯ ಬಗ್ಗೆ ಹೊಂದಿರುವ ಆಕ್ಷೇಪಗಳನ್ನೂ ಪರಿಹರಿಸಬೇಕಿದೆ ಎಂದು ನ್ಯೂಯಾರ್ಕ್‌ನಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ಸಭೆಯಲ್ಲಿ ಸಚಿವೆ ಸುಷ್ಮಾ ಹೇಳಿದ್ದಾರೆ. ಹಿಂದಿನಿಂದಲೂ ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ಅಣ್ವಸ್ತ್ರ ವಿಷಯದಲ್ಲಿ ಸಹಭಾಗಿತ್ವ ಸಾಧಿಸಿರುವುದರಿಂದಾಗಿ, ಪಾಕಿಸ್ತಾನದ ವಿಷಯವನ್ನು ಪರೋಕ್ಷವಾಗಿ ಸುಷ್ಮಾ ಪ್ರಸ್ತಾಪಿಸಿದ್ದಾರೆ. ಅಲ್ಲದೆ ವಿಶ್ವಸಂಸ್ಥೆಯಲ್ಲಿ ಕೈಗೊಂಡ ನಿರ್ಣಯಗಳು ಬ್ರಿಕ್ಸ್ ದೇಶಗಳನ್ನು ವಿಮುಖವಾಗಿಸಬಾರದು ಎಂದೂ ಹೇಳಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತದ ಸೇರ್ಪಡೆಗೆ ಕುರಿತ ವಿಚಾರದಲ್ಲಿ ಚೀನಾ ಅಡ್ಡಗಾಲು ಹಾಕುತ್ತಿದ್ದು, ಇದರ ವ್ಯತಿರಿಕ್ತ ಪರಿಣಾಮ ಬ್ರಿಕ್ಸ್ ಸಭೆಗೂ ವ್ಯಾಪಿಸಬಾರದು ಎಂದು ಅವರು ಹೇಳಿದ್ದಾರೆ.