ಹೊಸದಿಲ್ಲಿ: ಕುಸ್ತಿಪಟುವೋರ್ವನ ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಸದ್ಯ ಪೊಲೀಸ್ ವಶದಲ್ಲಿದ್ದಾರೆ. ತಮ್ಮ ಮಗನನ್ನು ಕೊಂದಿರುವ ಸುಶೀಲ್ ಕುಮಾರ್ ನನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಮೃತ ಸಾಗರ್ ರಾಣಾ ನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
23 ವರ್ಷದ ಕುಸ್ತಿಪಟು ಸಾಗರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ, ಕುಸ್ತಿಪಟು ಸುಶೀಲ್‌ಕುಮಾರ್ ರನ್ನು ವಿಚಾರಣೆಗೊಳಪಡಿಸಲು ದೆಹಲಿ ಪೊಲೀಸರಿಗೆ ಅಲ್ಲಿನ ಮೆಟ್ರೋಪಾಲಿಟನ್ ನ್ಯಾಯಾಲಯ 6 ದಿನಗಳ ಕಾಲಾವಕಾಶ ನೀಡಿದೆ. 12 ದಿನಗಳು ಅವಕಾಶ ನೀಡಬೇಕೆಂಬ ಪೊಲೀಸರ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿ ಆರು ದಿನದ ಅವಕಾಶ ನೀಡಿದೆ.
ಇದನ್ನೂ ಓದಿ:ನಾರದ ಲಂಚ ಕೇಸ್: ಕೋಲ್ಕತಾ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಸಿಬಿಐ
ಸುಶೀಲ್ ಕುಮಾರ್ ತಮ್ಮ “ರಾಜಕೀಯ ಪ್ರಭಾವ” ವನ್ನು ಬಳಸಿಕೊಂಡು ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ ಎಂದು ಸಾಗರ್ ರಾಣಾ ಅವರ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಸುಶೀಲ್ ಅವರ ರಾಜಕೀಯ ಸಂಪರ್ಕಗಳು ಪೊಲೀಸ್ ತನಿಖೆಗೆ ಅಡ್ಡಿಯಾಗದಂತೆ ನ್ಯಾಯಾಲಯದ ವಿಚಾರಣೆ ನಡೆಸಬೇಕು ಎಂದು ಸಾಗರ್ ತಂದೆ ಅಶೋಕ್ ಹೇಳಿದ್ದಾರೆ.
“ನನ್ನ ಮಗನನ್ನು ಕೊಲೆ ಮಾಡಿದವನನ್ನು ಮಾರ್ಗದರ್ಶಕ ಎಂದು ಕರೆಯಲು ಅರ್ಹನಲ್ಲ. ಸುಶೀಲ್ ಕುಮಾರ್ ಗೆದ್ದ ಎಲ್ಲಾ ಪದಕಗಳನ್ನು ಅವನಿಂದ ಹಿಂಪಡೆದುಕೊಳ್ಳಬೇಕು. ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಾರೆ ಎಂದು ನಾವು ನಂಬುತ್ತೇವೆ. ಆದರೆ ಸುಶೀಲ್ ತನ್ನ ರಾಜಕೀಯ ಸಂಪರ್ಕಗಳನ್ನು ಬಳಸಿಕೊಂಡು ಅದರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾನೆ” ಸಾಗರ್ ರಾಣಾ ತಾಯಿ ಹೇಳಿದ್ದಾರೆ.